ಕೀಟ ನಿರ್ವಹಣೆ; ರೈತರಿಗೆ ಸಲಹೆ
ಗುಲ್ಬರ್ಗ: ಜಿಲ್ಲಾದ್ಯಾಂತ ಕೃಷಿ ವಿಜ್ಞಾನಿಗಳು ಮತ್ತು ಕೃಷಿ ಇಲಾಖೆ ಜಂಟಿಯಾಗಿ ನಡೆಸಿರುವ ತೊಗರಿ ಕಾಯಿ ಕೊರಕದ ಕ್ಷೀಪ್ರ ಸಂಚಾರ ಸಮೀಕ್ಷಾ ವರದಿಯ ಆಧಾರದ ಮೇಲೆ ಸಮಗ್ರ ಕೀಟ ನಿರ್ವಹಣಾ ಕ್ರಮಗಳನ್ನು ಪಾಲಿಸಲು ರೈತರಿಗೆ ಸಲಹೆ ನೀಡಿದೆ.
ಜಿಲ್ಲೆಯಲ್ಲಿ ತೊಗರಿ ಬೆಳೆಯು ಸಾಮಾನ್ಯವಾಗಿ ಹೂಬಿಡುವ ಹಂತದಿಂದ ಕಾಯಿ ಕಟ್ಟುವ ಹಂತದಲ್ಲಿರುವುದರಿಂದ ರೈತರು ಈ ಮುಂದಿನ ಅಂಶಗಳನ್ನು ಗಮನಿಸಲು ಕೋರಿದೆ.
ತೊಗರಿ ಬೆಳೆಯಲ್ಲಿ ಗೊಡ್ಡು ರೋಗ ಕಂಡುಬಂದಲ್ಲಿ ಅದನ್ನು ಹರಡದಂತೆ ನೋಡಿಕೊಳ್ಳಲು ರೋಗ ಪೀಡಿತ ಸಸ್ಯಗಳನ್ನು ಕಿತ್ತು ನಾಶ ಮಾಡುವುದು ಮತ್ತು ಡೈಕೋಪಾಲ್ 2 ಎಂ.ಎಲ್. ಪ್ರತಿ ಲೀ. ನೀರಿಗೆ ಬೆರೆಸಿ ಸಿಂಪಡಿಸುವುದು, ಡೈಕೋಪಾಲ್ ಲಭ್ಯವಿರದ ಸನ್ನಿವೇಶದಲ್ಲಿ ಡೈಮಿಥೋಯೇಟ್ 30 ಇಸಿ 1.7 ಎಂ.ಎಲ್ ಪ್ರತಿ ಲೀ. ನೀರಿಗೆ ಬೆರೆಸಿ ಸಿಂಪಡಿಸಬೇಕು. ಬಲೆ ಕಟ್ಟುವ (ಜೋಂಡಿ) ಹುಳದ ಹತೋಟಿಗಾಗಿ ಪ್ರೋಪೆನೋಫಾಸ್ 2 ಎಂ.ಎಲ್. ಅಥವಾ ಥಯೋಡಿಕಾರ್ಬ 0.6 ಗ್ರಾಂ ಅಥವಾ ಮಿಥೋಮಿಲ್ 0.6 ಗ್ರಾಂ ಇದರಲ್ಲಿ ಯಾವುದಾದರೊಂದು ಪ್ರತಿ ಲೀ. ನೀರಿಗೆ ಸಿಂಪಡಿಸಬೇಕು.
ಸಾಮಾನ್ಯವಾಗಿ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ನಟೆರೋಗ ಕಂಡು ಬಂದಿದ್ದು, ಬಾಧೆ ಪೀಡಿತ ಸಸ್ಯಗಳನ್ನು ಕಿತ್ತು ನಾಶಪಡಿಸುವುದು ಮತ್ತು ಅದನ್ನು ಹರಡದಂತೆ ತಡೆಗಟ್ಟಲು ಟ್ರೈಕೋಡರ್ಮಾ ಜೈವಿಕ ಶಿಲೀಂದ್ರ ತಿಪ್ಪೆಗೊಬ್ಬರ ಜೊತೆ ಮಣ್ಣಿನಲ್ಲಿ ಬೆರೆಸಬೇಕು.