ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ವಾಡಿಯಲ್ಲೇ ಮೂರ್ತಿ ಪ್ರತಿಷ್ಠಾಪಿಸಿ

Rashmi Kasaragodu
Updated On : 14 Nov 2013, 12:40 pm

ಗುಲ್ಬರ್ಗ/ಶಹಾಬಾದ್: ವಾಡಿ ಪಟ್ಟಣಕ್ಕೆ 1945ರಲ್ಲಿ ಡಾ. ಅಂಬೇಡ್ಕರ್ ಭೇಟಿ ನೀಡಿದ್ದಾರೆ. ಈಗ ಅವರು ಬಂದು ಹೋದಂತಹ ಸ್ಥಳದಲ್ಲೇ ಮೂರ್ತಿ ಸ್ಥಾಪಿಸುವಂತೆ ಆಗ್ರಹಿಸಿ ವಾಡಿಯಲ್ಲಿ ದಲಿತ ಸಂಘಟನೆಗಳ ಸಮನ್ವಯ ವೇದಿಕೆ ಆಗ್ರಹಿಸಿದೆ.
ಈ ವಿಚಾರದಲ್ಲಿ ಪುರಸಭೆ ಅಧ್ಯಕ್ಷರು, ಸದಸ್ಯರು, ಮುಖ್ಯಾಧಿಕಾರಿಗಳು ಸುಳ್ಳು ಆಶ್ವಾಸನೆ ನೀಡುತ್ತ ಕಾಲ ಕಳೆಯುತ್ತಿದ್ದು, ಏ.14ರಂದು ಡಾ. ಅಂಬೇಡ್ಕರ್ ಜಯಂತ್ಯುತ್ಸವದ ಒಳಗಾಗಿ ಮೂರ್ತಿ ಸ್ಥಾಪಿಸದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಶರಣಪ್ಪ ವಾಡೇಕರ ಎಚ್ಚರಿಕೆ ನೀಡಿದ್ದಾರೆ.
ಜನಪ್ರತಿನಿಧಿಗಳ ನಿರ್ಲಕ್ಷ್ಯ: ಸೋಮವಾರ ವಾಡಿ ದಲಿತ ಸಂಘಟನೆಗಳ ಸಮನ್ವಯ ಸಮಿತಿ ವತಿಯಿಂದ ಪಟ್ಟಣದಲ್ಲಿ ಡಾ. ಅಂಬೇಡ್ಕರರು ವಿಶ್ರಾಂತಿ ಪಡೆದ ಸ್ಥಳದಲ್ಲಿ ಮೂರ್ತಿ ಸ್ಥಾಪನೆಗೆ ಆಗ್ರಹಿಸಿ ನಡೆಸಿದ ಪ್ರತಿಭಟನೆಯಲ್ಲಿ ಮಾತನಾಡುತ್ತ ಶಾಸಕರು, ಪುರಸಭೆಯ 12 ಸದಸ್ಯರು ಡಾ. ಅಂಬೇಡ್ಕರರ ಸಂವಿಧಾನದನ್ವಯ ಮೀಸಲಾತಿಯಲ್ಲಿ ಚುನಾಯಿತರಾಗಿದ್ದು ಮೂರ್ತಿ ಸ್ಥಾಪನೆಯಲ್ಲಿ ನಿರ್ಲಕ್ಷ್ಯ ವಹಿಸುತ್ತಿದ್ದಾರೆಂದು ಆರೋಪಿಸಿದರು.
ಒಮ್ಮೆ 16 ಲಕ್ಷ, ಮತ್ತೊಮ್ಮೆ 20 ಲಕ್ಷ ತೆಗೆದಿಡಲಾಗಿದೆ, ಮೂರ್ತಿ ಸಿದ್ಧವಾಗಿದೆ ಎಂದು ಸುಳ್ಳು ಅಶ್ವಾಸನೆ ನೀಡುತ್ತ ಕಾಲ ಕಳೆಯುತ್ತಿದ್ದಾರೆಂದು ದೂರಿದರು. ಸುಳ್ಳು ಆಶ್ವಾಸನೆ ನೀಡುವದನ್ನು ಬಿಟ್ಟು ಶೀಘ್ರ ಮೂರ್ತಿ ಸ್ಥಾಪನೆಗೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
 ಮುಖಂಡರಾದ ಹಣಮಂತ ಚವ್ಹಾಣ, ರಮೇಶ ಕಾರಭಾರಿ, ಇಂದ್ರಜಿತ ಸಿಂಘೆ, ಅರುಣ ಬರ್ಮಾ, ಸಮನ್ವಯ ಸಮಿತಿ ಅಧ್ಯಕ್ಷ ಶ್ರಾವಣಕುಮಾರ ಮೌಸಲಗಿ ಮಾತನಾಡಿದರು.
ದಲಿತ ಸಂಘಟನೆಗಳ ಸಮನ್ವಯ ಸಮಿತಿಯ ಕಾರ್ಯಕರ್ತರು ಬೆಳಗ್ಗೆ ಡಾ. ಅಂಬೇಡ್ಕರ್ ವೃತ್ತದಿಂದ ಮೆರವಣಿಗೆಯ ಮೂಲಕ ಪುರಸಭೆ ಕಚೇರಿಗೆ ಆಗಮಿಸಿ ಪ್ರತಿಭಟನೆ ನಡೆಸಿದರು. ಡಾ. ಅಂಬೇಡ್ಕರ್ ಮೂರ್ತಿ ನಿರ್ಮಾಣ ಮಾಡಲು ನಿರ್ಲಕ್ಷ್ಯ ವಹಿಸುತ್ತಿರುವ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿಗಳಿಗೆ ಬರೆದ ಮನವಿಯನ್ನು ತಹಸೀಲ್ದಾರ್ ಮಲ್ಲೇಶಿ ತಂಗಾರಿಗೆ ಸಲ್ಲಿಸಲಾಯಿತು.
ಪ್ರತಿಭಟನೆ ಹಿಂದಕ್ಕೆ: ಬೇಡಿಕೆಗಳನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತರುವದಾಗಿ ತಹಸೀಲ್ದಾರರು ಆಶ್ವಾಸನೆ ನೀಡಿದ ನಂತರ ಪ್ರತಿಭಟನೆ ಹಿಂಪಡೆಯಲಾಯಿತು. ಪ್ರತಿಭಟನೆಯಲ್ಲಿ ಮುಖಂಡರಾದ ಮಾರುತಿ ಮೌಸಲಗಿ, ರಘು ಪವಾರ, ಆನಂದ ಬಡಿಗೇರ, ಶಂಕರ ಚಲವಾದಿ, ಆಕಾಶ ಚವ್ಹಾಣ, ಎಸ್. ನಿಜಲಿಂಗಪ್ಪ, ಜೈಕರವೇ ಶ್ರೀರಾಮ ರಾಠೋಡ, ಕಾರ್ಯಕರ್ತರು ಪಾಲ್ಗೊಂಡಿದ್ದರು.


ಚಿತ್ತಾಪುರ ದಲಿತರು ಜಾಗೃತರು...
ಚಿತ್ತಾಪುರ ಶಾಸಕ ಪ್ರಿಯಾಂಕ ಖರ್ಗೆಯವರು ಡಾ. ಅಂಬೇಡ್ಕರ್ ಮೂರ್ತಿ ಸ್ಥಾಪನೆಗೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಗುರುಮಠಕಲ್ ಜನರಂತೆ ಚಿತ್ತಾಪುರ ದಲಿತರು ಮುಗ್ಧರಲ್ಲ, ಇಲ್ಲಿಯ ದಲಿತರು ಜಾಗೃತರಾಗಿದ್ದಾರೆ. ಮೂರ್ತಿ ಸ್ಥಾಪನೆಗೆ ಸುಳ್ಳು ಆಶ್ವಾಸನೆ ನೀಡುವುದು ಸಾಧ್ಯವಿಲ್ಲ. ಅಂತಹ ಆಶ್ವಾಸನೆ ಕೇಳುವವರು ನಾವಲ್ಲ ಎಂದು ಶರಣಪ್ಪ ವಾಡೇಕರ ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement