ಪರಿವರ್ತನೆಯಿಂದ ಸಮಾಜದ ಅಭಿವೃದ್ಧಿ
ಆಳಂದ: ಸಮಾಜದಲ್ಲಿ ಬೇರುಬಿಟ್ಟ ಮೂಢನಂಬಿಕೆ, ಕಂದಾಚಾರ ದೂರು ಮಾಡಿ ವೈಜ್ಞಾನಿಕ ಯುಗದತ್ತ ಮುನ್ನುಗ್ಗಿ ಪರಿವರ್ತನೆಯಾದರೆ ಸಮಾಜದ ಜನರು ಎಲ್ಲ ರಂಗದಲ್ಲೂ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಶಾಸಕ ಬಿ.ಆರ್. ಪಾಟೀಲ್ ಹೇಳಿದರು.
ತಾಲೂಕಿನ ಹಡಲಗಿ ಗ್ರಾಮದ ಬಸವೇಶ್ವರ ಮಠದಲ್ಲಿ ಬಸವೇಶ್ವರ ಮತ್ತು ಶಿವಲಿಂಗ ಮೂರ್ತಿ ಸ್ಥಾಪನೆಯ ನಿಮಿತ್ತ ಆಯೋಜಿಸಿದ್ದ ಧಾರ್ಮಿಕ ಕಾರ್ಯಕ್ರಮದಲ್ಲಿ ಮಾತನಾಡಿದರು.
ಶಿಕ್ಷಣದಿಂದ ಮುಖ್ಯವಾಹಿನಿಗೆ ಬನ್ನಿ: ಬಸವಣ್ಣನ ತತ್ವ ಸಿದ್ಧಾಂತಗಳನ್ನು, ವಿಚಾರಧಾರೆಗಳನ್ನು ಹಳ್ಳಿಹಳ್ಳಿಗೆ ಕೊಂಡೊಯ್ದ ಕೀರ್ತಿ ದಲಿತ ಸಮುದಾಯಕ್ಕೆ ಸಲ್ಲುತ್ತದೆ. ಲಿಂಗಾಯತ ಸಮುದಾಯದಲ್ಲಿ ವಿಚಾರಧಾರೆಗಳ ಹಸಿವು ಕಡಿಮೆ, ಆದರೆ ದಲಿತರಲ್ಲಿ ಸ್ವಾಭಿಮಾನ, ಸಮಾನತೆ ಹಸಿವು ನೀಗಿಸಲು ಮುಂದಾಗಬೇಕಾಗಿದೆ. ಹೀಗಾಗಿ ಸಮಾಜ ಹಳೆ ಸಂಪ್ರದಾಯವನ್ನು ಮರೆತು ತಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಿ ಮುಖ್ಯವಾಹಿನಿಗೆ ಬರಬೇಕೆಂದು ಕಿವಿಮಾತು ಹೇಳಿದರು.
ಜಿಪಂ ಸದಸ್ಯ ಸಿದ್ದರಾಮ ಪ್ಯಾಟಿ ಮಾತನಾಡಿ, ಜನತೆ ಬರೀ ವಿಭೂತಿ, ಲಿಂಗ ಧರಿಸಿದರೆ ಸಾಲದು. ಬಸವಣ್ಣನವರು ಮಾಡಿದ ಸಾಧನೆಗಳನ್ನು ಯುಗಾಂತರವಾಗಿ ಜೀವಂತವಾಗಿಡಲು ಪ್ರಚಾರ ಕಾರ್ಯ ಕೈಗೊಳ್ಳಬೇಕು ಎಂದು ತಿಳಿಸಿದರು.
ಸಮುದಾಯಭವನ ಮಂಜೂರಾತಿಗೆ ಮನವಿ: ಹಡಲಗಿ ಗ್ರಾಮದಲ್ಲಿ ದಲಿತರ ಸಂಖ್ಯೆ ಹೆಚ್ಚಿದ್ದು ಮದುವೆ ಸೇರಿದಂತೆ ಇತರ ಧಾರ್ಮಿಕ ಕಾರ್ಯಕ್ರಮ ಆಯೋಜಿಸಲು ಸಮುದಾಯ ಭವನ ಮಂಜೂರು ಮಾಡಬೇಕೆಂದು ಶಾಸಕರಿಗೆ ಮನವಿ ಮಾಡಿದರು.
ಮುಖಂಡರಾದ ವಿಠ್ಠಲರಾವ ಪಾಟೀಲ್, ಮಲ್ಲೇಶಪ್ಪ ಬಿರಾದಾರ, ಬಿ.ಕೆ. ಪಾಟೀಲ್, ಶ್ರೀಶೈಲ್ ನಿಲೂರ, ದತ್ತಾ ಸುಳನ, ಕಮಲಕರ್ ಗೌರಕರ, ರಾಜು ಯಂಕಚಿ, ಸಿದ್ದರಾಮ ಪಾಟೀಲ್ ನಿಂಬಾಳ, ಶರಣು ಮಾಂಗ, ಹಣಮಂತ ನಡಗೇರಿ, ರೇವಣಸಿದ್ದಪ್ಪ ಶ್ರೀಗಣಿ, ಭೀಮಾಶಂಕರ ಖೊಂಬಿನ, ಶಿವಯೋಗಿ ಕವಲಗಿ, ಶಂಕರ ಬಿರಾದಾರ, ಶಿವಾನಂದ ಯಲ್ದೆ, ಹಿರಗಪ್ಪ ದೊಡ್ಡಮನಿ, ಮೌಲಪ್ಪ ಜೋಗನ, ಜೈಭೀಮ ಸುಳನ, ಹಾಜಪ್ಪ ತಮ್ಮನ, ಲಕ್ಕಪ್ಪ ಕಡಗಂಚಿ ಪಾಲ್ಗೊಂಡಿದ್ದರು.