ಮುಡಬೂಳಕ್ಕೆ ನುಗ್ಗಿದ ಕಾಲುವೆ ನೀರು
ಶಹಾಪುರ: ಹೆಚ್ಚುವರಿ ನೀರು ಬಿಟ್ಟಿದ್ದು ಒಂದಡೆಯಾದರೆ, ಕಾಲುವೆಯ (ಡ್ರಾಪ್ ಔಟ್) ಸೈಫನ್ ಬಳಿ ಕಸಕಡ್ಡಿ ತುಂಬಿ ಸ್ಥಗಿತಗೊಂಡ ಪರಿಣಾಮ ಮೂಡಬೂಳ ಬ್ರ್ಯಾಂಚ್ ಕಾಲುವೆ ಡಿ-15ರಿಂದ ಹೆಚ್ಚಿವರಿ ನೀರು ಮೂಡಬೂಳ ಗ್ರಾಮಕ್ಕೆ ನುಗ್ಗಿದೆ. ತಾಲೂಕು ಆಡಳಿತದ ಮಾಹಿತಿ ಪ್ರಕಾರ 70 ಎಕರೆ ಭೂಮಿ ಮತ್ತು 50 ಮನೆಗಳು ನೀರಿನಿಂದ ಆವೃತವಾದ ಘಟನೆ ನಡೆದಿದೆ.
ಪ್ರಕೃತಿಯ ಅತಿವೃಷ್ಟಿ, ಅನಾವೃಷ್ಟಿ ಎರಡನ್ನೂ ಸಹಿಸಿಕೊಳ್ಳುವ ರೈತ ಸಮೂಹಕ್ಕೆ ನೀರಾವರಿ ಇಲಾಖೆಯ ನಿರ್ಲಕ್ಷ್ಯ ಅಧಿಕಾರಿಗಳು ನೀರು ನಿರ್ವಹಣೆಯಲ್ಲಿ ತೋರುತ್ತಿರುವ ಬೇಜವಾಬ್ದಾರಿಯಿಂದ ಇಂಥದ್ದೊಂದು ಅನಾಹುತ ನಡೆದಿರುವುದರಿಂದ ಗ್ರಾಮದ ರೈತಾಪಿ ವರ್ಗಕ್ಕೆ ದಿಕ್ಕು ತಪ್ಪಿದಂತಾಗಿದೆ.
ಘಟನೆ ವಿವರ: ಎಂ.ಬಿ.ಸಿ ಡಿ-15 ಕಾಲುವೆಯ ನೀರು ಸರಾಗವಾಗಿ ಹರಿಯಲು ಅಲ್ಲಲ್ಲಿ (ಡ್ರಾಪ್) ಸೈಫನ್ಗಳು ನಿರ್ಮಿಸಿದ್ದು, ಅವುಗಳಲ್ಲಿ ಕಸಕಡ್ಡಿ ಸಂಗ್ರಹವಾಗಿ ನೀರು ಸ್ಥಗಿತಗೊಂಡು ಹೆಚ್ಚುವರಿ ನೀರು ಹೊಲದೊಳಕ್ಕೆ ನುಗ್ಗಿದೆ. ಇದು ಮೇಲ್ನೂಟಕ್ಕೇ ಕಂಡು ಬಂದದ್ದು ಒಂದಡೆಯಾದರೆ ಕಾಲುವೆಯಲ್ಲಿ ಹೆಚ್ಚು ನೀರು ಬಿಡುವುದು ಇಂಥ ಅವಘಡಕ್ಕೆ ಕಾರಣವಾಗಿದೆ.ಕಳೆದೆರಡು ದಿನಗಳಿಂದ ನೀರು ಹೊಲದೊಳಕ್ಕೆ ನುಗ್ಗಿದಾಗಲೇ ಸಂಬಂಧಿಸಿದವರಿಗೆ ತಿಳಿಸಿದ್ದರೂ ಇತ್ತ ಕಡೆ ಯಾರಿಗೂ ಕಾಳಜಿ ಇಲ್ಲದಂತಾಗಿದೆ.
ತುಂಬಿದ ನಾಗರಭಾವಿ: ಗ್ರಾಮದಲ್ಲಿ ಅವೈಜ್ಞಾನಿಕ ಕಾಮಗಾರಿಗಳಿಂದ ಚರಂಡು ಮತ್ತು ನೀರಿನ ವ್ಯವಸ್ಥೆ ಅವ್ಯವಸ್ಥೆಯಾಗಿದ್ದು ಇರುವ ನಾಗರಭಾವಿ ನೀರನ್ನೇ ಬಳಸುವ ಜನತೆಗೆ ಕಾಲುವೆಯ ನೀರು ಬಂದು ಭಾವಿಯು ತುಂಬಿ ಹೋಗಿದ್ದು ಕಲುಷಿತ ನೀರು ಗತಿ ಎಂಬಂತಾಗಿದೆ.
ತಂಪೆರಗಿದ ಮನೆಗಳು: ಗ್ರಾಮದ ಮಹಾಂತನಗರದ ಹಲವು ಮನೆಗಳ ಸುತ್ತಲು ನೀರು ಆವರಿಸಿದ್ದು, ಇಡೀ ಮನೆಗಳು ತಂಪಾಗಿ ಅಲ್ಲಿನ ಜನತೆಗೆ ವಾಸಮಾಡಲು ತೊಂದರೆ ಪಡುವಂತಾಗಿದೆ ಕೆಲವಡೆ ಬುನಾದಿಯೊಳಗೆ ನೀರು ನುಗ್ಗಿ ಮನೆಗಳು ಸಡಿಲಗೊಂಡಿವೆ.
ಅಧಿಕಾರಿಗಳ ನಿರ್ಲಕ್ಷ್ಯ: ಕೆಬಿಜೆಎನ್ಎಲ್ ಅಧಿಕಾರಿಗಳು ನೀರು ನಿಛ್ಗಿಹಣೆಯಲ್ಲಿ ಅಲಕ್ಷ್ಯ ತೋರಿದ್ದು, ಪ್ರಸ್ತುತ ಲಕ್ಷಾಂತರ ರು. ಬೆಳೆಹಾನಿ, ಮನೆ ಹಾನಿಗೆ ಕಾರಣವಾಗಿದೆ ನೀರು ನಿಲ್ಲಿಸುವಂತೆ ಮನವಿ ಮಾಡಿದರು.
ರೈತರ ಜವಾಬ್ದಾರಿಯೂ ಮುಖ್ಯ: ಕಾಲುವೆಗಳಲ್ಲಿ ಕಾಲುವೆಯಿಂದ ಹೊಲಗಳಿಗೆ ನೀರು ತೆಗೆದುಕೊಳ್ಳುವ ಸಂದರ್ಭದಲ್ಲಿ ನೀರಾವರಿ ಇಲಾಖೆಯ ಗಮನಕ್ಕೆ ತಾರದೆ ಎಲ್ಲಂದರಲ್ಲೇ ಕಾಲುವೆಗಳನ್ನು ಅಡ್ಡಗಟ್ಟಿ ನೀರು ತೆಗೆದುಕೊಳ್ಳುವ ಅವೈಜ್ಞಾನಿಕ ಕ್ರಮ ಇಂಥ ಅವಘಡಕ್ಕೆ ಕಾರಣವಾಗುತ್ತಿದೆ. ನೀರು ನಿರ್ವಹಣೆಯಲ್ಲಿ ಎಲ್ಲರ ಪಾತ್ರವೂ ಬಹುಮುಖ್ಯವಾಗಿದೆ.
ತಹಸೀಲ್ದಾರರ ಭೇಟಿ: ಗ್ರಾಮದೊಳಗೆ ನಿರು ನುಗ್ಗಿದ ಸುದ್ದಿ ತಿಳಿಯುತ್ತಲೇ ತಹಸೀಲ್ದಾರ್ ಡಿ.ವೈ. ಪಾಟೀಲ, ಇ.ಓ ನರಸಿಂಗರಾವ್ ಮುತಾಲಿಕ, ಜಿ.ಪಂ. ಸದಸ್ಯ ಶಂಕರಗೌಡ ಶಿರವಾಳ ಭೇಟಿ ನೀಡಿ ಸೂಕ್ತ ಕ್ರಮದ ಭರವಸೆ ನೀಡಿದರು.