ಸಂಕ್ಷಿಪ್ತ ಸುದ್ದಿ
ಹೈಕಶಿ ಸಂಸ್ಥೆಗಳ ಪ್ರಮುಖರ ಸಭೆ
ಗುಲ್ಬರ್ಗ: ಹೈದ್ರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆ ವತಿಯಿಂದ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರು, ಕಾರ್ಯದರ್ಶಿ ಹಾಗೂ ಕಾಲೇಜು ಪ್ರಾಂಶುಪಾಲರ ಸಭೆ ಕರೆಯಲಾಗಿತ್ತು. ಈ ಸಭೆಯಲ್ಲಿ ಗುಲ್ಬರ್ಗ ವಿಭಾಗದ ಸುಮಾರು 25 ಸಂಸ್ಥೆಯವರು ಹಾಗೂ 49 ಅನುದಾನಿತ ಕಾಲೇಜಿನ ಪ್ರಾಂಶುಪಾಲರು ಭಾಗವಹಿದ್ದರು.ಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಶರಣಬಸಪ್ಪ ಅಪ್ಪ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಹೈದ್ರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಶಶೀಲ ನಮೋಶಿ ಅಧ್ಯಕ್ಷತೆ ವಹಿಸಿದ್ದರು. ಖಾಲಿಯಿರುವ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ನೇಮಕ, ಅನುಕಂಪದ ಆಧಾರದ ನೇಮಕಾತಿ ಮತ್ತು ಪ್ರಾಂಶುಪಾಲರ ನೇಮಕಾತಿ ಸೇರಿದಂತೆ ಅನೇಕ ವಿಷಯಗಳಿಗೆ ಸಂಬಂಧಿಸಿದಂತೆ ಚರ್ಚಿಸಲಾಯಿತು. ಪ್ರಾಚಾರ್ಯ ಡಾ. ಬಸವರಾಜ ಕುಮನೂರ ವಿಚಾರ ಮಂಡಿಸಿದರು.
ಪದಾಧಿಕಾರಿಗಳ ನೇಮಕ
ಗುಲ್ಬರ್ಗ: ತಾಲೂಕಿನ ಕುರಿಕೋಟಾ ಗ್ರಾಮದಲ್ಲಿ ಬಹುಜನ ಜಾಗೃತಿ ವೇದಿಕೆ ಸಭೆಯಲ್ಲಿ ಪದಾಧಿಕಾರಿಗಳ ನೇಮಕ ಮಾಡಲಾಯಿತು. ರಾಜ್ಯ ಪ್ರಧಾನ ಕಾರ್ಯದರ್ಶಿ ರಮೇಶ ಬೆಳಕೋಟಿ ಮತ್ತು ವಿಭಾಗೀಯ ಅಧ್ಯಕ್ಷ ಪ್ರಕಾಶ ಎಸ್. ಹಾಗರಗಿ, ಗುಲ್ಬರ್ಗ ತಾಲೂಕಿನ ಅಧ್ಯಕ್ಷ ರವಿ. ಆರ್, ಕೋರಿ, ಮುಖಂಡರಾದ ಅರುಣ ಕುಮಾರ ಬಿ.ಹುಗ್ಗಿ ಉಪಸ್ಥಿತರಿದ್ದರು. ಮಿಥುನ ಮದೀನಕರ್ ಅಧ್ಯಕ್ಷ, ಸತೀಶ ಅಮೋರ್ತಿಕರ ಹಾಗೂ ಸಂತೋಷ ನಾಟೀಕಾರ ಉಪಾಧ್ಯಕ್ಷ, ಅಲ್ಲಾರಕ ಹರಸೂರಕರ ಪ್ರಧಾನ ಕಾರ್ಯದರ್ಶಿ, ಸುರೇಶ ಅಮೋರ್ತಿಕರ ಸಹ ಕಾರ್ಯದರ್ಶಿ, ಶಂಕರ ಕುರಿಕೋಟಾ ಸಹಕಾರ್ಯದರ್ಶಿ, ಸಂತೋಷ ಜಾಲೇಕರ ಸಂಘಟನಾ ಕಾರ್ಯದರ್ಶಿ, ಆಬಿದ್ ಜಹಿರ್ ಕುರಿಕೋಟಾ, ಮಹ್ಮದ್ ಹಜರತ್ ಕುರಿಕೋಟಾರನ್ನು ಸದಸ್ಯರನ್ನಾಗಿ ಆಯ್ಕೆಮಾಡಲಾಯಿತು.
ನಾಳೆ ಕಾರ್ತಿಕ ದೀಪೋತ್ಸವ
ಗುಲ್ಬರ್ಗ: ನಗರದ ನ್ಯೂ ರಾಘವೇಂದ್ರ ಕಾಲೋನಿಯ ಬಲಭೀಮಸೇನ ದೇವಸ್ಥಾನದ ಕಾರ್ತಿಕ ದೀಪೋತ್ಸವನ್ನು ನ. 16ರಂದು ಹಮ್ಮಿಕೊಳ್ಳಲಾಗಿದೆ. ಬೆ.7.30ಕ್ಕೆ ಪಂಚಾಮೃತ ಅಭಿಷೇಕ, ಸಾಯಂಕಾಲ 5.30ಕ್ಕೆ ಭೀಮಾಶಂಕರ ಭಜನಾ ಮಂಡಳಿಯಿಂದ ಭಜನೆ, ಸಂಜೆ 6.30ಕ್ಕೆ ವಿಪ್ರವೃಂದದಿಂದ ಮಂತ್ರಪುಷ್ಪ, 8ಕ್ಕೆ ಮಹಾಮಂಗಳಾರತಿ ಹಮ್ಮಿಕೊಳ್ಳಲಾಗಿದೆ ಎಂದು ಪ್ರಧಾನ ಅರ್ಚಕ ಭೀಮಭಟ್ಟ ಬೆಂಕಿ ಮೋತಕಪಲ್ಲಿ ತಿಳಿಸಿದ್ದಾರೆ.
ನಾಳೆ ಕಾರ್ಯಾಗಾರ ಉದ್ಘಾಟನೆ
ಗುಲ್ಬರ್ಗ: ದಿ ಆರ್ಟ್ ಇಂಟಿಗ್ರೇಶನ್ ಚಿತ್ರಕಲಾ ಕಾಲೇಜಿನ ಅಂಕುರ ಆರ್ಟ್ ಗ್ಯಾಲರಿಯಲ್ಲಿ ನ.16ರಂದು ಬೆ. 10.30ಕ್ಕೆ ಟೆರ್ರಾಕೊಟ್ಟಾ ಕಾರ್ಯಗಾರದ ಉದ್ಘಾಟನಾ ಸಮಾರಂಭ ಹಮ್ಮಿಕೊಳ್ಳಲಾಗಿದೆ.ಖ್ಯಾತ ಶಿಲ್ಪ ಕಲಾವಿದ ಮಾನಯ್ಯ ಬಡಿಗೇರಾ, ಖ್ಯಾತ ಕಲಾವಿದ ನಾಡೋಜ ಜೆ.ಎಸ್. ಖಂಡೇರಾವ್ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಶಿವಕುಮಾರ ಕುಂಬಾರ ನಿರ್ದೇಶಕರಾಗಿದ್ದಾರೆ. ಪ್ರಾಚಾರ್ಯ ಎಂ.ಎಚ್. ಬೆಳಮಗಿ ಅಧ್ಯಕ್ಷತೆ ವಹಿಸಿದ್ದರು.