ಸುಗಮ ಸಂಚಾರ ಗೀತೆ ಅದೆಷ್ಟು ದಿನ ಹಾಡುವರೋ?
ಕನ್ನಡಪ್ರಭ ವಾರ್ತೆ ಗುಲ್ಬರ್ಗ ನ.14
ಮಹಾನಗರವಾಸಿಗಳಿಗೆ ಇದು ಸಿಹಿಸುದ್ದಿ. ನಗರ ಸಂಚಾರ ಪೊಲೀಸ್ ವ್ಯವಸ್ಥೆ ಎಚ್ಚೆತ್ತುಕೊಳ್ಳುತ್ತಿದೆ. ನೀವೇನಾದರೂ ಬೇಕಾಬಿಟ್ಟಿ ವಾಹನ ಚಲಿಸಿಯೋ, ಹಿಗ್ಗಾಮುಗ್ಗಾ ಹಾರ್ನ್ ಬಾರಿಸಿಯೋ, ತ್ರಿಬಲ್ ರೈಡ್ ಆಗಿಯೋ, ಜೊತೆಗೆ ದಾಖಲಾತಿ ಹೊಂದದೆ ವಾಹನ ಸವಾರಿ ಮಾಡಿದರೆ, ಸಿಗ್ನಲ್ ಹಾರಿ ಓಡಿದರೆ ಜೋಕೆ...!ಗುಲ್ಬರ್ಗ ಸಂಚಾರ ಪೊಲೀಸ್ ಬಗ್ಗೆ ಗೊತ್ತಿಲ್ವಾ ಎಂದು ಹಗುರವಾಗಿ ಪರಿಗಣಿಸಬೇಡಿ, ಈ ಬಾರಿ ಸಂಚಾರಿ ಪೊಲೀಸರು ಸಂಯಮದಿಂದ ಸಂಚಾರದಲ್ಲಿ ಸುಗಮತೆ ತರುವ ಸಂಕಲ್ಪ ಮಾಡಿಯೇ ಕಾರ್ಯಾಚರಣೆಗೆ ಮುಂದಾಗುತ್ತಿದ್ದಾರೆ.
ತಮ್ಮ ಕಾರ್ಯಾಚರಣೆಯ ದಾರಿಯಲ್ಲಿ ಯಾವುದೇ ಅಡ್ಡಿ ಆತಂಕ ಬಾರದಂತೆ ಮಾಡಲು ಜನರು, ಮಾಧ್ಯಮ, ಸಂಘಟನೆಗಳು, ಚಿಂತಕರು, ಸಮಾಜದ ಗಣ್ಯರೆಲ್ಲರ ಸಹಕಾರ ಕೋರುತ್ತಿದ್ದಾರೆ. ನಗರದ ಶಾಲಾ ಮಕ್ಕಳನ್ನೂ ತಮ್ಮ ಈ ಕೆಲಸದಲ್ಲಿ ತೊಡಗಿಸಿಕೊಳ್ಳುವ ಚಿಂತನೆ ಸಾಗಿದೆ. ಇಷ್ಟೆ ಅಲ್ಲದೆ ಆಟೋ ಚಾಲಕರು, ವಲೀಕರ ಸಂಘಟನೆ ಸೇರಿದಂತೆ ಹಲವು ಸಂಘಟನೆಗಳವರೊಂದಿಗೆ ಈಗಾಗಲೇ ಮಾತುಕತೆ ನಡೆಸಿರುವ ಪೊಲೀಸರು ಶೀಘ್ರವೇ ನಗರದಲ್ಲಿ ಸಂಚಾರದ ಸುಗಮ ಗೀತೆ ಹಾಡಲಿದ್ದಾರೆ.
ಗುರುವಾರ ಇಲ್ಲಿನ ಸೂಪರ್ ಮಾರ್ಕೆಟ್ನಲ್ಲಿರುವ ತಮ್ಮ ಕಚೇರಿಯಲ್ಲಿ ಮಾಧ್ಯಮ ಮಿತ್ರರ ಜೊತೆ ಸಂವಾದಿಯಾದ ಸಂಚಾರ ಪೊಲೀಸ್ ಠಾಣೆ ಪಿಐ ಪ್ರಭು ಡಿಟಿ, ಡಿವೈಎಸ್ಪಿ ಬೇವಿನಮರದ, ಪ್ರಭು ದುದ್ದಗಿ ಹಾಗೂ ಸಿಬ್ಬಂದಿ ಸಂಚಾರದಲ್ಲಿ ಸುಗಮತನ ತರಲು ಪ್ರಯತ್ನ ಶುರುವಾಗಿದ್ದು ಜನತೆ ಸಹಕರಿಸಬೇಕೆಂದರು.
ಠಾಣೆಯಿಂದಲೇ ಸುಧಾರಣೆ ಶುರು: ಮನೆ ಗೆದ್ದು ಮಾರು ಗೆದೆ ಎಂಬಂತೆ ಈಗಾಗಲೇ ಠಾಣೆಯಿಂದಲೇ ಸುಧಾರಣೆ ಶುರುವಾಗಿದೆ. ಸಿಬ್ಬಂದಿಗೆ ಜನರ ಜೊತೆ ಹೇಗೆ ವರ್ತಿಸಬೇಕು ಎಂಬುದರ ಬಗ್ಗೆ ಮಾಹಿತಿ ನೀಡಲಾಗಿದೆ. ವಕೀಲರೊಂದಿಗೂ ಸಭೆಗಳು ನಡೆದಿವೆ. ಆಟೋ ಸಂಘಟನೆಯವರು, ಶಾಲಾ- ಕಾಲೇಜು ಮಕ್ಕಳು, ವಿದ್ಯಾರ್ಥಿ ಸಂಘಟನೆಗಳವರೊಂದಿಗೂ ಮುಖಾಮುಖಿಯಾಗಿ ಸಂಚಾರ ವ್ಯವಸ್ಥೆ ಸುಗಮವಾಗುವಂತಾಗಲು ಸಹಕರಿಸಬೇಕು ಎಂದು ಕೋರುತ್ತೇವೆಂದು ಪ್ರಭು ಡಿಟಿ ಹೇಳಿದರು.
ಬೈಕ್, ಆಟೋ, ಕಾರ್ ಸೇರಿದಂತೆ ಎಲ್ಲ ನಮೂನೆ ವಾಹನ ಮಾಲೀಕರು ತಮ್ಮ ವಾಹನಗಳ ದಾಖಲಾತಿ ಚಾಲನೆ ಸಂದರ್ಭದಲ್ಲಿ ಜೊತೆಗೇ ಹೊಂದಿರಬೇಕು. ವಾಹನ ಚಾಲನೆ ಮಾಡುವಾಗ ಮೊಬೈಲ್ ಬಳಸದೆ ಸುಗಮ ಸಂಚಾರಕ್ಕೆ ಸಹಕರಿಸಬೇಕು ಎಂದರು.
ಗೃಹರಕ್ಷಕ ದಳ ಬಳಕೆ: ನಗರದಲ್ಲಿ ಈಗಾಗಲೇ ಸಂಚಾರ ದಟ್ಟಣೆಯ 24 ಸ್ಥಳ ಗುರುತಿಸಲಾಗಿದೆ. ಇನ್ನೂ ನಾಲ್ಕಾರು ಹೆಚ್ಚಿನ ದಟ್ಟಣೆ ಸ್ಥಳಗಳು ಗಮನಕ್ಕೆ ಬಂದಿವೆ. ವಾಹನ ದಟ್ಟಣೆ ಆಧರಿಸಿ ಸಂಚಾರ ಸಮೀಕ್ಷೆ ನಡೆಸಿ ಅಲ್ಲೆಲ್ಲಾ ತೊಂದರೆಗಳನ್ನು ತಪ್ಪಿಸಲು ಇಲಾಖೆ ಕ್ರಮ ಜರುಗಿಸುತ್ತದೆ ಎಂದರು. ಜನಸಂಖ್ಯೆಗೆ ಅನುಗುಣವಾಗಿ ವಾಹನಗಳ ಸಂಖ್ಯೆಯೂ ಹೆಚ್ಚಿದೆ. ಆದರೆ ಸಂಚಾರ ಪೊಲೀಸ್ ವ್ಯವಸ್ಥೆ 15 ವರ್ಷಗಳಷ್ಟು ಹಳೆಯದಾಗಿದೆ. ಹೀಗಾಗಿ ನಗರದಲ್ಲಿ ಸಂಚಾರ ಸಂಬಂಧಿ ತೊಂದರೆ ಹೆಚ್ಚುತ್ತಿವೆ ಎಂದ ಪ್ರಭು, ಬರುವ ದಿನಗಳಲ್ಲಿ ಜನರ ಸಹಕಾರದಿಂದ ಸಮಸ್ಯೆಗೆ ಪರಿಹಾರ ಹುಡುಕುವ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.
ಸುಗಮ ಸಂಚಾರಕ್ಕೆ ಕ್ರಮ: ನಿಷೇಧಿತ ಸ್ಥಳದಲ್ಲಿ ವಾಹನಗಳ ನಿಲುಗಡೆ, ರಸ್ತೆಗೆ ಅಡ್ಡಲಾಗಿ ವಾಹನ ನಿಲ್ಲಿಸುವುದು ಸೇರಿದಂತೆ ನಿತ್ಯವೂ ಕಂಡುಬರುವ ತೊಂದರೆಗಳ ನಿವಾರಣೆಗೆ ಕಟ್ಟುನಿಟ್ಟಿನ ಕ್ರಮ ಜರುಗಿಸುತ್ತೇವೆ. ಸೂಪರ್ ಮಾರ್ಕೆಟ್ ಪಾದಚಾರಿ ರಸ್ತೆ ತೆರವು ಮಾಡಿ ಅಲ್ಲೆಲ್ಲಾ ಜನತೆಗೆ, ಮಹಿಳೆಯರು- ಮಕ್ಕಳು ಸುಗಮವಾಗಿ ಓಡಾಡಿಕೊಂಡು ಇರುವಂತೆ ಅಗತ್ಯ ಕ್ರಮ ಜರುಗಿಸಲಾಗುತ್ತದೆ ಎಂದರು. ಜೇವರ್ಗಿ ಕ್ರಾಸ್, ಮುಸ್ಲಿಂ ಚೌಕ್, ಸರ್ದಾರ್ ಪಟೇಲ್ ವೃತ್ತ, ಬಸವೇಶ್ವರ ರಸ್ತೆ, ಸೇಡಂ ರಸ್ತೆ, ರಾಮ ಮಂದಿರ ವೃತ್ತಗಳಲ್ಲಿನ ನಿತ್ಯದ ಸಂಚಾರ ಸಮಸ್ಯೆಗೆ ಆಟೋಗಳ ಬೇಕಾಬಿಟ್ಟಿ ನಿಲುಗಡೆ ಕಾರಣ ಎಂಬ ಸಂಗತಿ ಗಮನಕ್ಕೆ ಬಂದಿದೆ. ಬರುವ ದಿನಗಳಲ್ಲಿ ಇಲ್ಲಿ ಆಟೋಗಳು ತಿರುವಿನ ಮೇಲೆ ನಿಲುಗಡೆ ಮಾಡದಂತೆ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ಮೊದಲು ಜಾಗೃತಿ: ಸಂಚಾರ ನಿಯಮಗಳ ಕುರಿತು ನಗರದಲ್ಲಿ ಜಾಗೃತಿ ಮೂಡಿಸಲು ಕ್ರಮ ಜರುಗಿಸಲಾಗುತ್ತದೆ. ಕೇವಲ ದಂಡ ವಸೂಲಿಯೇ ಪೊಲೀಸರ ಕೆಲಸವಲ್ಲ, ಜೊತೆಗೇ ನಿಯಮಗಳ ಜಾಗೃತಿ ಸಹ ಮೂಡಿಸಲಾಗುತ್ತದೆ. ಈಗಾಗಲೇ ಶಾಲೆಗಳಿಗೆ ಹೋಗಿ ಮಕ್ಕಳಲ್ಲಿ ಅರಿವು ಮೂಡಿಸುವ ಕೆಲಸ ಶುರುವಾಗಿದೆ ಎಂದರು. ಸಾರ್ವಜನಿಕರು ಸಂಚಾರ ನಿಯಮಗಳು, ತಾವು ಅನುಭವಿಸುತ್ತಿರುವ ತೊಂದರೆಗಳ ಬಗ್ಗೆ ನೇರವಾಗಿ ಪೊಲೀಸರೊಂದಿಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳಬಹುದು. ದೂ. 08472- 263624ಕ್ಕೆ ಕರೆ ಮಾಡಿಯೂ ಸಂಚಾರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು ಎಂದು ಪ್ರಭು ಹೇಳಿದ್ದಾರೆ.