ಸುದ್ದಿ ಸಂಕ್ಷೇಪ
ನಿರುದ್ಯೋಗಿಗಳಿಗೆ ತರಬೇತಿ
ಯಾದಗಿರಿ: ಕೈಮಗ್ಗ ಮತ್ತು ಜವಳಿ ಇಲಾಖೆ ವತಿಯಿಂದ ಸುವರ್ಣ ವಸ್ತ್ರ ನೀತಿ ಯೋಜನೆಯಡಿ 5ನೇ ತರಗತಿ ಉತ್ತೀರ್ಣರಾದ ನಿರುದ್ಯೋಗಿ ಯುವಕ ಹಾಗೂ ಯುವತಿಯರಿಗೆ ಉದ್ಯೋಗ ಆಧಾರಿತ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ. ವಿದ್ಯಾರ್ಹತೆ 5ನೇ ತರಗತಿ ಉತ್ತೀರ್ಣರಾಗಿರಬೇಕು. ವಯಸ್ಸು 18 ರಿಂದ 35 ವರ್ಷ. ತರಬೇತಿ ಮುಗಿದ ನಂತರ ಕಡ್ಡಾಯವಾಗಿ ಸಿದ್ಧ ಉಡುಪು ತಯಾರಿಕಾ ಕಂಪನಿಗಳಲ್ಲಿ ಕೆಲಸ ಮಾಡಲು ಸಿದ್ಧರಿರಬೇಕು. ವಿದ್ಯಾರ್ಹತೆ, ದಾಖಲಾತಿ, ಜನ್ಮ ದಿನಾಂಕ, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಅಭ್ಯರ್ಥಿಗಳು ದೃಢೀಕೃತ ಜಾತಿ ಪ್ರಮಾಣ ಪತ್ರಗಳನ್ನು ಸಲ್ಲಿಸಬೇಕು. ಅರ್ಜಿಗಳನ್ನು ಕೆಳಕಂಡ ತರಬೇತಿ ಕೇಂದ್ರಗಳಲ್ಲಿಯೇ ನೀಡಲಾಗುವುದು. ಅವುಗಳನ್ನು ಆಯಾ ಕೇಂದ್ರಗಳಿಂದ ಪಡೆದು, ಅಲ್ಲಿಯೇ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರು ಕೈಮಗ್ಗ ಮತ್ತು ಜವಳಿ ಇಲಾಖೆ, ಜಿಲ್ಲಾ ಪಂಚಾಯತ್ ಸಿಎಂಸಿ ಕಾಂಪ್ಲೆಕ್ಸ್ ಬ್ಲಾಕ್ -2 ಮಳಿಗೆ ಸಂಖ್ಯೆ 3 ಮತ್ತು 4 ಚಿತ್ತಾಪೂರ ರಸ್ತೆ ಯಾದಗಿರಿ ಇಲ್ಲಿ ಸಂಪರ್ಕಿಸುವಂತೆ ಕೋರಲಾಗಿದೆ.
ಕಸಾಪ ಸಭೆ ಇಂದು
ಗುರುಮಠಕಲ್: ಗುರುಮಠಕಲ್ ವಿಧಾನ ಸಭಾ ಮತಕ್ಷೇತ್ರದ ಕನ್ನಡ ಸಾಹಿತ್ಯ ಪರಿಷತ್ತು ಸಭೆ ನ.14ರಂದು ಸಂಜೆ 5 ಗಂಟೆಗೆ ಖಾಸಾಮಠದಲ್ಲಿ ಜರುಗಲಿದೆ ಎಂದು ಕಸಾಪ ಕಾರ್ಯದಶರ್ ಎಂ.ಬಿ. ನಾಯಕಿನ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಖಾಸಾಮಠದ ಶಾಂತವೀರಗುರು ಮುರುಘರಾಜೇಂದ್ರ ಶ್ರೀ ನೇತೃತ್ವದಲ್ಲಿ ನ.15 ಮತ್ತು 16ರಂದು ಯಾದಗಿರಿಯಲ್ಲಿ ನಡೆಯುವ ಜಿಲ್ಲಾ ಪ್ರಥಮ ಸಾಹಿತ್ಯ ಸಮ್ಮೇಳನ ಬಗ್ಗೆ ಪೂರ್ವಭಾವಿ ಸಭೆ ನಡೆಯಲಿದ್ದು, ಕನ್ನಡ ಸಾಹಿತ್ಯ ಅಭಿಮಾನಿಗಳು ಭಾಗವಹಿಸಿ ಸೂಚನೆಗಳನ್ನು ನೀಡಲು ತಿಳಿಸಲಾಗಿದೆ.
ರ್ಯಾಲಿಗೆ 1000 ಜನ
ಹುಣಸಗಿ: ನ. 17ರಂದು ಬೆಂಗಳೂರಿನಲ್ಲಿ ನಡೆಯಲಿರುವ ಭಾರತ ಗೆಲ್ಲಿಸಿ ರ್ಯಾಲಿಯಲ್ಲಿ 1000 ಕ್ಕೂ ಹೆಚ್ಚು ಜನರು ಭಾಗವಹಿಸಲಿದ್ದಾರೆ ಎಂದು ಬಿಜೆಪಿ ತಾಲೂಕು ಯುವ ಮೊರ್ಚಾದ ಅಧ್ಯಕ್ಷ ಬಸವರಾಜ ಮೇಲಿನಮನಿ ಮತ್ತು ಕಾರ್ಯದರ್ಶಿ ಶಿವಕುಮಾರ ಹಿರೇಮಠ ತಿಳಿಸಿದ್ದಾರೆ.
---------