ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಹದಗೆಟ್ಟ ರಸ್ತೆಗಳು: ಸಂಚಾರಕ್ಕೆ ಅಡೆತಡೆ

Mainashree
Updated On : 15 Nov 2013, 12:49 pm

ಕ.ಪ್ರ. ವಾರ್ತೆ  ಚಿಂಚೋಳಿ        ನ.14
ಜಿಲ್ಲೆಯ ಅತ್ಯಂತ ಹಿಂದುಳಿದ ಪ್ರದೇಶಕ್ಕೆ ಒಳಪಟ್ಟಿರುವ ಗಡಿಭಾಗಕ್ಕೆ ಹೊಂದಿಕೊಂಡಿರುವ ಚಿಂಚೋಳಿ ತಾಲೂಕಿನ ರಸ್ತೆಗಳ ಸುಧಾರಣೆ ಹಾಗೂ ರಸ್ತೆ ಅಭಿವೃದ್ಧಿ ಮತ್ತು ಡಾಂಬರೀಕರಣಕ್ಕಾಗಿ ಸರ್ಕಾರದ ವಿವಿಧ ಯೋಜನೆ ಅಡಿಯಲ್ಲಿ ಕೋಟ್ಯಾಂತರ ರುಪಾಯಿಗಳು ಖರ್ಚು ಮಾಡಿದೆ. ಆದರೆ, ಕಳಪೆ ಮಟ್ಟದ ಕಾಮಗಾರಿಗಳಿಂದಾಗಿ ಇದೀಗ ರಸ್ತೆಗಳು ಸಂಪೂರ್ಣ ಹದಗೆಟ್ಟಿದ್ದು, ಸಂಚಾರಕ್ಕೆ ಬಾರದಂತಾಗಿದೆ.
ನಬಾರ್ಡ್ ಯೋಜನೆ ಅಡಿಯಲ್ಲಿ ತುಮಕುಂಟಾ- ಚಿಮ್ಮನಚೋಡ ರಸ್ತೆಗೆ 50 ಲಕ್ಷ, ಕೋಡ್ಲಿ- ರುಮ್ಮನಗೂಡ ರಸ್ತೆಗೆ 150 ಲಕ್ಷ, 5054 ಓ.ಆರ್.ಎಫ್ ಯೋಜನೆ ಅಡಿಯಲ್ಲಿ ನಾವದಗಿ- ಸೂರವಾರ ರಸ್ತೆ, ರೇವಣಸಿದ್ದೇಶ್ವರ ಚಂದನಕೇರಾ, ಮರಗೋಳ ತೇಗಲತಿಪ್ಪಿ ಮತ್ತು ಸುಲೇಪೇಟ್- ರಾಣಾಪುರ ರಸ್ತೆ ಸುಧಾರಣೆಗೆ ಒಟ್ಟು 171 ಲಕ್ಷ, ಪ್ರಧಾನಮಂತ್ರಿ ಗ್ರಾಮ ಸಡಕ ಯೋಜನೆ ಅಡಿಯಲ್ಲಿ ಮರಪಳ್ಳಿ- ಗಾರಂಪಳ್ಳಿ ರಸ್ತೆಗೆ- 270 ಲಕ್ಷ, ಯಲಮಡಗಿ- ಬೆನಕೆಪಳ್ಳಿ ರಸ್ತೆಗೆ 300 ಲಕ್ಷ, ಕೊಳ್ಳುರ ಕ್ರಾಸ್‌ನಿಂದ ಐನೋಳಿ ತಾಂಡಾದವರೆಗೆ 600 ಲಕ್ಷ, ಜಿಲವರ್ಷ- ಶಾದೀಪುರ ಮುಂತಾದ ರಸ್ತೆಗಳಿಗೆ ಒಟ್ಟು 2370 ಲಕ್ಷ ಖರ್ಚು ಮಾಡಲಾಗಿದೆ. ಆದರೆ ರಸ್ತೆಗಳು ಹದಗೆಟ್ಟಿದ್ದು, ವಾಹನಗಳ ಸಂಚಾರಕ್ಕೆ ಅಡ್ಡಿಯಾಗಿದೆ.
ರಸ್ತೆಗಳು ಸಂಪೂರ್ಣ ಹಾಳು: ತಾಲೂಕಿನ ಮನ್ನಾಎಕ್ಕೆಳ್ಳಿ- ಚಿಂಚೋಳಿ ರಾಜ್ಯ ಹೆದ್ದಾರಿ ರಸ್ತೆ ಅಭಿವೃದ್ಧಿಗೆ 17 ಕೋಟಿ, ಚಿಂಚೋಳಿ- ಸೇಡಂ ರಸ್ತೆಗೆ 33 ಕೋಟಿ ಮತ್ತು ಪಿಎಂಜಿಎಸ್‌ವೈ ಯೋಜನೆ ಅಡಿಯಲ್ಲಿ ಕೂಡು ರಸ್ತೆ ಅಭಿವೃದ್ಧಿಗಾಗಿ ಧುತ್ತರಗಾ, ಫತ್ತೇಪುರ, ಗಂಗನಪಳ್ಳಿ, ಚಂದುನಾಯಕ, ತಾಜಲಾಪುರ, ಸಂಗಾಪುರ, ಚಂದುನಾಯಕ ತಾಂಡಾ ಮುಂತಾದ ಗ್ರಾಮ- ತಾಂಡಾಗಳಲ್ಲಿ ಕೈಕೊಂಡ ರಸ್ತೆಗಳ ಅಭಿವೃದ್ಧಿಗಾಗಿ ಒಟ್ಟು 547 ಲಕ್ಷ ಖರ್ಚು ಮಾಡಿದರು ರಸ್ತೆಗಳು ಸಂಪೂರ್ಣ ಹಾಳಾಗಿವೆ.
ವಾಹನಗಳ ಓಡಾಟಕ್ಕೆ ತೊಂದರೆ: ಕುಂಚಾವರಂ ಕ್ರಾಸ್‌ನಿಂದ ಶಿವರಾಮಪುರ, ಚಿಂಚೋಳಿ- ಅಣವಾರ, ಚಿಂಚೋಳಿ- ಚಿಕ್ಕನಿಂಗದಳ್ಳಿ, ದೇಗಲಮಡಿ, ಕುಸರಂಪಳ್ಳಿ, ಕನಕಪುರ, ಚಿಮ್ಮನಚೋಡ, ಚಂದನಕೇರಾ- ಚೇಂಗಟಾ, ಸಾಸರಗಾಂವ- ರಾಣಾಪುರ ರಸ್ತೆ, ಚಿಂಚೋಳಿ- ಸುಲೇಪೇಟ್ ರುಸ್ತಂಪುರ- ಕನಕಪುರ ರಸ್ತೆ, ಪಟಪಳ್ಳಿ- ಎಂಪಳ್ಳಿ, ಸಲಗರ ಬಸಂತಪುರ- ಬೆನಕೆಪಳ್ಳಿ ಮುಂತಾದ ಕಡೆಗಳಲ್ಲಿ ರಸ್ತೆಗಳು ನಬಾರ್ಡ್ ಸುವರ್ಣ ಮುಂತಾದ ಯೋಜನೆ ಅಡಿಯಲ್ಲಿ ಲಕ್ಷಾಂತರ ರು. ಖರ್ಚು ಮಾಡಿದರೂ ರಸ್ತೆ ಕಳಪೆ ಗುಣಮಟ್ಟದ ಕಾಮಗಾರಿಗಳಿಂದಾಗಿ ಮತ್ತು ಅಧಿಕಾರಿಗಳ ನಿರ್ಲಕ್ಷ್ಯತನದಿಂದ ರಸ್ತೆಗಳಲ್ಲಿ ಭಾರಿ ತೆಗ್ಗು ವಾಹನಗಳ ಓಡಾಟಕ್ಕೆ ತೊಂದರೆಯಾಗಿದೆ.
ಪ್ರಯಾಣಿಕರ ಗೋಳು: ರಸ್ತೆಗಳು ತುಂಬಾ ಹದಗೆಟ್ಟಿರುವುದರಿಂದ ಸರ್ಕಾರಿ ಬಸ್ಸುಗಳು ಅಲ್ಲಲ್ಲಿ ಕೆಟ್ಟು ನಿಲ್ಲುತ್ತಿರುವುದರಿಂದ ಪ್ರಯಾಣಿಕರ ಗೋಳು ಹೇಳತೀರದಾಗಿದೆ. ಕಳೆದ ಬಿಜೆಪಿ ಸರ್ಕಾರದಿಂದ ಮಾಜಿ ಸಚಿವ ಸುನೀಲ್ ವಲ್ಯಾಪುರೆ ಅವರು ತಮ್ಮ ಅಧಿಕಾರ ಅವಧಿಯಲ್ಲಿ ವಿವಿಧ ಯೋಜನೆ ಅಡಿಯಲ್ಲಿ ರಸ್ತೆ ಅಭಿವೃದ್ಧಿಗೆ ಹಣದ ಹೊಳೆ ಹರಿಸಿದರು ಸಹ ಹಣ ಮಾತ್ರ ಗುತ್ತಿಗೆದಾರರಿಗೆ ಲಾಭವಾಗಿದೆ ಹೊರತು ತಾಲೂಕಿನ ರಸ್ತೆಗಳು ಮಾತ್ರ ಅಭಿವೃದ್ಧಿಗೊಂಡಿಲ್ಲ.
ತಾಲೂಕಿನಲ್ಲಿ ಅನೇಕ ಗ್ರಾಮೀಣ ರಸ್ತೆಗಳು ಸಂಚಾರಕ್ಕೆ ಬಾರದಂತಾಗಿವೆ ಎಂದು ಗ್ರಾಮೀಣ ಪ್ರದೇಶದ ಶಾಲಾ ಮಕ್ಕಳು, ಪ್ರಯಾಣಿಕರು ಸರ್ಕಾರದ ಗಮನ ಸೆಳೆಯಲು ರಸ್ತೆತಡೆ ನಡೆಸಿದರು. ಆದರೆ, ಚುನಾಯಿತ ಜನಪ್ರತಿನಿಧಿಗಳು ಮಾತ್ರ ಯಾವುದೇ ಗಮನಹರಿಸಿಲ್ಲವೆಂಬುದು ಜನರ ಆರೋಪವಾಗಿದೆ. ಶಾಸಕರಾಗಿರುವ ಡಾ. ಉಮೇಶ ಜಾಧವ ಮುಂದಿನ ದಿನಗಳಲ್ಲಿ ರಸ್ತೆಗಳು ಯಾವ ಮಟ್ಟಿಗೆ ಸುಧಾರಿಸುವರೆಂಬುದು ಕಾದು ನೋಡಬೇಕಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement