ಅಹಿಂದ ಮಕ್ಕಳಿಗೆ ಪ್ರವಾಸ ಭಾಗ್ಯ; ವಿದ್ಯಾರ್ಥಿ, ಶಿಕ್ಷಕರೇನಂತಾರೆ?
ಪ್ರತಿಭೆ ಮಾನದಂಡವಾದರೆ ಉತ್ತಮ
ಯೋಜನೆಯು ಉತ್ತಮವಾಗಿದ್ದು ಎಲ್ಲ ವರ್ಗದ ಪ್ರತಿಭಾವಂತ ಮಕ್ಕಳನ್ನು ಈ ಯೋಜನೆಯಲ್ಲಿ ಆಯ್ಕೆ ಮಾಡಿದರೆ ಅವರ ವಿದ್ಯಾಭ್ಯಾಸಕ್ಕೆ ಅನುಕೂಲವಾಗುತ್ತದೆ. ಅಹಿಂದ ಜಾತಿ ಆಧಾರದ ಮೇಲೆ ಅಯ್ಕೆ ಮಾಡುವುದಕ್ಕಿಂತ ಬಡ ಪ್ರತಿಭಾವಂತ ಮಕ್ಕಳಿಗೂ ಯೋಜನೆ ಜಾರಿಗೊಳಿಸುವುದು ಸೂಕ್ತ.
ರವೀಂದ್ರ ಅಡಿವೇರ, ಶಿಕ್ಷಕರು ಚಿತ್ತಾಪುರ
ಬಿಪಿಎಲ್ ಕಾರ್ಡ್ ಆದ್ಯತೆಯಾಗಲಿ...
ಈ ಯೋಜನೆಯಿಂದ ಮಕ್ಕಳಲ್ಲಿ ಜಾತಿ ವಿಷ ಬೀಜ ಬಿತ್ತಿದಂತೆ ಆಗುತ್ತದೆ. ಇದನ್ನು ಎಲ್ಲ ವರ್ಗದ ಮಕ್ಕಳಿಗೆ, ಇಲ್ಲವೇ ಬಿಪಿಎಲ್ ಕಾರ್ಡ್ ಹೊಂದಿದ ಕುಟುಂಬದ ಮಕ್ಕಳಿಗೆ ಯೋಜನೆ ರೂಪಿಸುವುದು ಒಳಿತು.
ಬಸವರಾಜ ಎಂಬತ್ನಾಳ,
ಶಿಕ್ಷಕರು, ಭಾಗೋಡಿ, ತಾಲೂಕು ಚಿತ್ತಾಪುರ
ಜಾತಿಯಡಿ ಪ್ರವಾಸ ಸರಿಯಲ್ಲ...
ಜಾತಿ ಹೆಸರಿನ ಮೇಲೆ ಅಹಿಂದ ಯೋಜನೆ ಅಡಿಯಲ್ಲಿ ಶೈಕ್ಷಣಿಕ ಪ್ರವಾಸ ಕಾರ್ಯಕ್ರಮ ರೂಪಿಸುವುದು ಸರಿಯಾದುದಲ್ಲ. ಇದರಿಂದ ಮಕ್ಕಳಲ್ಲಿ ಜಾತಿ ಭಾವನೆ ಬೆಳೆಯುತ್ತದೆ ಇದನ್ನು ಎಲ್ಲ ವರ್ಗವ ಮಕ್ಕಳಿಗೆ ಅನ್ವಯ ಆಗುವಂತೆ ಜಾರಿಗೊಳಿಸಬೇಕು.
ನಿತೀಶರೆಡ್ಡಿ ದುಗನೂರ
9ನೇ ತರಗತಿ ವಿದ್ಯಾರ್ಥಿ ಚಿತ್ತಾಪುರ
ಎಲ್ಲ ಪ್ರತಿಭಾವಂತರಿಗೂ ವಿಸ್ತರಿಸಿ...
ಅಹಿಂದ ಮಕ್ಕಳಿಗೆ ಹಮ್ಮಿಕೊಳ್ಳುತ್ತಿರುವ ಶೈಕ್ಷಣಿಕ ಪ್ರವಾಸವನ್ನು ಎಲ್ಲ ವರ್ಗದ ಪ್ರತಿಭಾವಂತ ಮಕ್ಕಳಿಗೂ ಹಾಗೂ ಖಾಸಗಿ ಅನುದಾನಿತ ಶಾಲೆ ಮಕ್ಕಳಿಗೂ ವಿಸ್ತರಿಸಬೇಕು.
ನಿಕಿಲ್, 10ನೇ ತರಗತಿ ವಿದ್ಯಾರ್ಥಿ, ಚಿತ್ತಾಪುರ
ಸ್ವಾಸ್ಥ್ಯ ಹಾಳು ಸರಿಯಲ್ಲ...
ಮಕ್ಕಳು ಮನುಕುಲದ ಆಶಾಕುಸುಮಗಳು. ಅಂಥವರ ಮನಸ್ಸುಗಳ ಸ್ವಾಸ್ಥ್ಯ ಹಾಳು ಮಾಡುವುದು ಸರಿಯಲ್ಲ. ಸರ್ಕಾರ ಈ ದಿಸೆಯಲ್ಲಿ ಯೋಚಿಸಲಿ.
ಅಕ್ಷಯ ಸಗರ
ಜಾತಿಯ ವಿಚಾರ ಸರ್ಕಾರಕ್ಕೆ ಬರಬಾರದು
ಶಾಲಾ ಮಕ್ಕಳೆಂದರೆ ದೇವರ ಸಮಾನ. ಎಲ್ಲಾ ಜಾತಿಯ ಮಕ್ಕಳು ಕೂಡಿ ಆಡುವ ಸಂದರ್ಭದಲ್ಲಿ ಇಂಥ ಜಾತಿಯ ವಿಚಾರ ಸರ್ಕಾರಕ್ಕೆ ಬರಬಾರದು.
ನರಸಿಂಹ ಭಾವುರಾವ್
ಭೇದ ಭಾವಕ್ಕೆ ನಾಂದಿ ಹಾಡಬೇಡಿ...
ಶಾಲಾ ಹಂತದಲ್ಲೇ ಜಾತಿವಾರು ಭೇದ- ಭಾವ ಮಾಡಬಾರದು. ಓರಗೆಯ ಮಕ್ಕಳು ಪ್ರವಾಸ ಹೋದಾಗ ಉಳಿದ ಮಕ್ಕಳಿಗೆ ನೋವಾಗುತ್ತದೆ. ಇದರಿಂದ ಶಾಲೆಯಿಂದಲೇ ನಾವು ಭೇದಭಾವ ಶುರು ಮಾಡಿದಂತೆ ಆಗುವುದಿಲ್ಲವೇ. ಸರ್ಕಾರ ಎಲ್ಲ ಮಕ್ಕಳಿಗೂ ಪ್ರವಾಸ ಭಾಗ್ಯ ಅನ್ವಯವಾಗುವಂಥ ನೀತಿ ರೂಪಿಸಲಿ.
ಪರಮೇಶ್ವರ ಪಾಟೀಲ್, ಶಿಕ್ಷಕರು