ಏ.14ರೊಳಗೆ ಅಂಬೇಡ್ಕರ್ ಮೂರ್ತಿ ಸ್ಥಾಪಿಸಿ
ಗುಲ್ಬರ್ಗ/ಶಹಾಬಾದ್: ವಾಡಿ ಪಟ್ಟಣಕ್ಕೆ 1945ರಲ್ಲಿ ಸಂವಿಧಾನಶಿಲ್ಪಿ ಡಾ.ಬಾಬಾ ಸಾಹೇಬ ಅಂಬೇಡ್ಕರ್ ಅವರು ಭೇಟಿ ನೀಡಿದ ಸ್ಥಳದಲ್ಲಿ ಮೂರ್ತಿ ಸ್ಥಾಪನೆಗೆ ಪುರಸಭೆ ಅಧ್ಯಕ್ಷರು, ಸದಸ್ಯರು, ಮುಖ್ಯಾಧಿಕಾರಿಗಳು ಸುಳ್ಳು ಆಶ್ವಾಸನೆ ನೀಡುತ್ತ ಕಾಲ ಕಳೆಯುತ್ತಿದ್ದಾರೆ. ಏ.14ರಂದು ಡಾ.ಅಂಬೇಡ್ಕರ್ ಜಯಂತ್ಯುತ್ಸವ ಅವಧಿಯೊಳಗೆ ಮೂರ್ತಿ ಸ್ಥಾಪಿಸದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಶರಣಪ್ಪ ವಾಡೇಕರ್ ಎಚ್ಚರಿಕೆ ನೀಡಿದರು.
ವಾಡಿ ದಲಿತ ಸಂಘಟನೆಗಳ ಸಮನ್ವಯ ಸಮಿತಿ ವತಿಯಿಂದ ಪಟ್ಟಣದಲ್ಲಿ ಡಾ. ಅಂಬೇಡ್ಕರ್ ಅವರು ವಿಶ್ರಾಂತಿ ಪಡೆದ ಸ್ಥಳದಲ್ಲಿ ಮೂರ್ತಿ ಸ್ಥಾಪನೆಗೆ ಆಗ್ರಹಿಸಿ ನಡೆಸಿದ ಪ್ರತಿಭಟನೆಯಲ್ಲಿ ಮಾತನಾಡಿದರು.
ಶಾಸಕರು, ಪುರಸಭೆಯಲ್ಲಿ 12 ಜನ ಸದಸ್ಯರು ಡಾ. ಅಂಬೇಡ್ಕರ್ ಸಂವಿಧಾನದನ್ವಯ ಮೀಸಲಾತಿಯಲ್ಲಿ ಚುನಾಯಿತರಾಗಿದ್ದಾರೆ. ಮೂರ್ತಿ ಸ್ಥಾಪನೆಯಲ್ಲಿ ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಆರೋಪಿಸಿದರು.
ಒಮ್ಮೆ 16 ಲಕ್ಷ, 20 ಲಕ್ಷ ತೆಗೆದಿಡಲಾಗಿದೆ ಎಂದು ಸುಳ್ಳು ಆಶ್ವಾಸನೆ ನೀಡುತ್ತಾರೆ. ಡಾ. ಅಂಬೇಡ್ಕರ್ ಅವರ ನಿಂತ ಭಂಗಿ ಎಂದು ಒಮ್ಮೆ, ಮತ್ತೊಮ್ಮೆ ಕುಳಿತ ಭಂಗಿ ಮೂರ್ತಿ ಸಿದ್ಧವಾಗಿದೆ ಎಂದು ಸುಳ್ಳು ಹೇಳಿಕೆ ನೀಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮುಖಂಡರಾದ ಹಣಮಂತ ಚವ್ಹಾಣ, ರಮೇಶ ಕಾರಭಾರಿ, ಇಂದ್ರಜಿತ ಸಿಂಘೆ, ಅರುಣ ಬರ್ಮಾ, ಸಮನ್ವಯ ಸಮಿತಿ ಅಧ್ಯಕ್ಷ ಶ್ರಾವಣಕುಮಾರ್ ಮೌಸಲಗಿ ಮಾತನಾಡಿದರು. ಚಿತ್ತಾಪುರ ಶಾಸಕ ಪ್ರಿಯಾಂಕ್ ಖರ್ಗೆ ಅವರು ಡಾ.ಅಂಬೇಡ್ಕರ್ ಮೂರ್ತಿ ಸ್ಥಾಪನೆಗೆ ನಿರ್ಲಕ್ಷ ವಹಿಸುತ್ತಿದ್ದಾರೆ. ಗುರುಮಿಟ್ಕಲ್ ಜನರಂತೆ ಚಿತ್ತಾಪುರ ದಲಿತರು ಮುಗ್ದರಲ್ಲ. ಇಲ್ಲಿಯ ದಲಿತರು ಜಾಗೃತರಾಗಿದ್ದಾರೆ. ಮೂರ್ತಿ ಸ್ಥಾಪನೆಗೆ ಸುಳ್ಳು ಆಶ್ವಾಸನೆ ನೀಡುವುದು ಸಾಧ್ಯವಿಲ್ಲ ಎಂದು ಶರಣಪ್ಪ ವಾಡೇಕರ್ ಹೇಳಿದರು.
ದಲಿತ ಸಂಘಟನೆಗಳ ಸಮನ್ವಯ ಸಮಿತಿ ಕಾರ್ಯಕರ್ತರು ಬೆಳಗ್ಗೆ ಡಾ.ಅಂಬೇಡ್ಕರ್ ವೃತ್ತದಿಂದ ಬೃಹತ್ ಮೆರವಣಿಗೆ ಮೂಲಕ ಪುರಸಭೆ ಕಚೇರಿಗೆ ಆಗಮಿಸಿ ಪ್ರತಿಭಟನೆ ನಡೆಸಿದರು.
ಡಾ.ಅಂಬೇಡ್ಕರ್ ಮೂರ್ತಿ ಸ್ಥಾಪನೆ, ಮೂರ್ತಿ ನಿರ್ಮಾಣಕ್ಕೆ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಮಿತಿ ರಚನೆ, ಡಾ.ಅಂಬೇಡ್ಕರ್ ಮೂರ್ತಿ ನಿರ್ಮಾಣ ಮಾಡಲು ನಿರ್ಲಕ್ಷ್ಯ ವಹಿಸುತ್ತಿರುವ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ಬರೆದ ಮನವಿ ಪತ್ರವನ್ನು ತಾಲೂಕು ತಹಸೀಲ್ದಾರ್ ಮಲ್ಲೇಶಿ ತಂಗಾ ಅವರಿಗೆ ಸಲ್ಲಿಸಲಾಯಿತು.
ಎಲ್ಲ ಬೇಡಿಕೆಗಳನ್ನು ಜಿಲ್ಲಾಧಿಕಾರಿ ಗಮನಕ್ಕೆ ತರುವುದಾಗಿ ತಹಸೀಲ್ದಾರರು ಆಶ್ವಾಸನೆ ನೀಡಿದ ನಂತರ ಪ್ರತಿಭಟನೆ ಹಿಂದಕ್ಕೆ ಪಡೆಯಲಾಯಿತು. ಪ್ರತಿಭಟನೆಯಲ್ಲಿ ಮುಖಂಡರಾದ ಮಾರುತಿ ಮೌಸಲಗಿ, ರಘು ಪವಾರ, ಆನಂದ ಬಡಿಗೇರ, ಶಂಕರ ಚಲವಾದಿ, ಆಕಾಶ ಚವ್ಹಾಣ, ಎಸ್. ನಿಜಲಿಂಗಪ್ಪ, ಜೈಕರವೇ ಶ್ರೀರಾಮ ರಾಠೋಡ ಸೇರಿದಂತೆ ಕಾರ್ಯಕರ್ತರು ಪಾಲ್ಗೊಂಡರು.
ಈ ಸಂದರ್ಭ ವಾಡಿ ಪಿಎಸ್ಐ ನಟರಾಜ ಲಾಡೆ, ಶಹಾಬಾದ್ ಪಿಎಸ್ಐ ರಘು ಎನ್. ಉಪಸ್ಥಿತರಿದ್ದರು.