ಗುಲ್ಬರ್ಗ ರೇಲ್ವೆ ವಿಭಾಗೀಯ ಕಚೇರಿ ಕನಸೇ?
ಶೇಷಮೂರ್ತಿ ಅವಧಾನಿ
ಕನ್ನಡಪ್ರಭ ವಾರ್ತೆ ಟಿ ಗುಲ್ಬರ್ಗ ಟಿ ನ.15
ಕೇಂದ್ರ ರೇಲ್ವೆ ಸಚಿವರಾದ 6 ತಿಂಗಳಲ್ಲೇ ಹಲವು ರೂಪಗಳಲ್ಲಿ ರೇಲ್ವೆ ಮೂಲಸೌಕರ್ಯಗಳನ್ನು ನೀಡುತ್ತ ದೇಶದ ರೇಲ್ವೆ ಭೂಪಟದಲ್ಲಿ ಗುಲ್ಬರ್ಗ ಸೇರಿದಂತೆ ಹೈ-ಕ ಪ್ರದೇಶವು ರಾರಾಜಿಸುವಂತೆ ಮಾಡಿರುವ ಮಲ್ಲಿಕಾರ್ಜುನ ಖರ್ಗೆ ಅವರ ಕಾರ್ಯವೈಖರಿಗೆ ಬೆರಗಾಗಿರುವ ಜನ ವಿಭಾಗೀಯ ಕಚೇರಿ ಬೇಡಿಕೆಯೊಂದಕ್ಕೆ ಹಸಿರು ನಿಶಾನೆ ತೋರಿಸಿದರೆ ಸಾಕು, ಖರ್ಗೆ ಅವರನ್ನು ಯಾರೂ ಮರೆಯೋದಿಲ್ಲ. ಅಂಥ ಅಭಿಪ್ರಾಯವೂ ಈಗ ಜನರಲ್ಲಿ ಬೇರೂರಿದೆ.
3 ಕಡೆ ಹಂಚಿಹೋದ ಗುಲ್ಬರ್ಗ: ಪಕ್ಕದ ಮಹಾರಾಷ್ಟ್ರದಲ್ಲಿ 7, ನೆರೆಯ ಆಂಧ್ರಪ್ರದೇಶದಲ್ಲಿ 6 ರೇಲ್ವೆ ವಿಭಾಗೀಯ ಕಚೇರಿಗಳು ಇದ್ದರೆ ಕರ್ನಾಟಕದಲ್ಲಿ ಈ ಸಂಖ್ಯೆ ಕೇವಲ 3! ರೇಲ್ವೆ ವಿಭಾಗೀಯ ಕಚೇರಿಗಳ ರಚನೆಯ ವಿಚಾರದಲ್ಲಿ ಕೇಂದ್ರ ಸರ್ಕಾರ ಕರ್ನಾಟಕ ಪಾಲಿಗೆ ಬೆನ್ನು ತೋರಿಸಿದ್ದಕ್ಕೆ ಈ ಅಂಕಿ- ಅಂಶ ಕನ್ನಡಿ.
ರೇಲ್ವೆ ಸೌಕರ್ಯ ಹಿಗ್ಗಲು ವಿಭಾಗೀಯ ಕೇಂದ್ರ ಮುಖ್ಯ. ಆದರೆ, ರಾಜ್ಯದಲ್ಲಿ ವಿಭಾಗೀಯ ಕಚೇರಿ ರಚಿಸುವಾಗ ರೇಲ್ವೆ ಇಲಾಖೆ ಲಾಗಾಯ್ತಿನಿಂದ ತಾಳಿರುವ ಮಲತಾಯಿ ಧೋರಣೆಯಿಂದಾಗಿ ಹಿಂದುಳಿದ ಗುಲ್ಬರ್ಗ ಕೇಂದ್ರವಾಗಿರುವ ಹೈ-ಕ ಪ್ರದೇಶ ಗುಂತಕಲ್, ಸಿಕಂದರಾಬಾದ್, ಸೊಲ್ಲಾಪುರ ಎಂದು ಮಧ್ಯ ರೇಲ್ವೆ, ದಕ್ಷಿಣ ಮಧ್ಯ ರೇಲ್ವೆ ವಿಭಾಗಗಳಲ್ಲಿ ಹರಿದುಹಂಚಿದೆ. ಇದರಿಂದಾಗಿಯೇ ರೇಲ್ವೆ ಸೌಕರ್ಯಗಳಿಗೆ ಇಲ್ಲಿ ಬರ.
ವಿಭಾಗೀಯ ಕಚೇರಿ ರಚನೆಯಲ್ಲಿ ಗುಲ್ಬರ್ಗಕ್ಕೆ ಆದ್ಯತೆ ನೀಡುವುದರ ಜೊತೆಗೇ ಕರ್ನಾಟಕಕ್ಕೆ ನ್ಯಾಯ ದೊರಕಿಸಿಕೊಡುವಂತಹ ಬಹುದೊಡ್ಡ ಜವಾಬ್ದಾರಿ ಖರ್ಗೆ ಹೇಗೆ ನಿಭಾಯಿಸುವರೋ ಎಂಬುದು ಈಗಿನ ಕುತೂಹಲವಾಗಿದೆ.
ಏನಿದು ವಿಭಾಗೀಯ ಕಚೇರಿ?: ಅಸ್ತಿತ್ವದಲ್ಲಿರುವ ರೇಲ್ವೆ ಮಾರ್ಗಗಳು, ಆಯಾ ಪ್ರದೇಶವಾರು ಇಲಾಖೆ ಸಂಗ್ರಹಿಸುವ ಆದಾಯ, ಜನಸಂಖ್ಯೆಗಳನ್ನೆಲ್ಲ ಲೆಕ್ಕ ಹಾಕಿ ಆರಂಭಿಸುವ ಮಹತ್ವದ ರೇಲ್ವೆ ಕಚೇರಿ ಇದು.
ರೇಲ್ವೆ ಮೂಲ ಸೌಕರ್ಯ ಜನರಿಗೆ ತಲುಪಿಸುವ ಜವಾಬ್ದಾರಿ ವಿಭಾಗೀಯ ಕಚೇರಿಯದ್ದಾಗಿರುತ್ತದೆ. ರೇಲ್ವೆ ಸೇವೆಗಳು, ಮೂಲ ಸೌಕರ್ಯಗಳೆಲ್ಲವೂ ಸಮಯಕ್ಕೆ ಸರಿಯಾಗಿ ಆಯಾ ವಿಭಾಗದ ತನ್ನ ಪ್ರಯಾಣಿಕರಿಗೆ ಒದಗಿಸುವ ಹೊಣೆಗಾರಿಕೆ ಈ ಕಚೇರಿಯದ್ದು.
ಇಂತಹ ವಿಭಾಗೀಯ ಕಚೇರಿಗಳ ಸ್ಥಾಪನೆ ರೇಲ್ವೆ ಇಲಾಖೆಯ ಪರಮಾಧಿಕಾರ, ಇದಕ್ಕೆ ರಾಜಕೀಯ ಇಚ್ಛಾಶಕ್ತಿಯೂ ಬೇಕು. ತನ್ನದೆ ಆದ ಮಾನದಂಡ ರೇಲ್ವೆ ಹೊಂದಿದ್ದರೂ ಜನರ ಅನುಕೂಲಕ್ಕೆ ಪೂರಕವಾಗಿರುವಂತೆ ರೇಲ್ವೆ ವಿಭಾಗೀಯ ಕಚೇರಿ ಸ್ಥಾಪನೆ ಗುಲ್ಬರ್ಗ ಪಾಲಿಗೆ ಗಗನ ಕುಸುಮವಾಗಿದ್ದು ಕಟುವಾಸ್ತವ.
ಸರೀನ್ ಸಮೀತಿ ವರದಿ: ರಾಜ್ಯಗಳ ಪುನರ್ವಿಂಗಣೆ ಸಂದರ್ಭದಲ್ಲಿ ರೇಲ್ವೆ ವಿಭಾಗೀಯ ಕಚೇರಿಗಳ ಸ್ಥಾಪನೆ ವಿಚಾರದಲ್ಲಿ ಸಮೀಕ್ಷೆ ನಡೆಸಲಾಗಿತ್ತು. ಆಗ ವರದಿ ಕೊಟ್ಟಿದ್ದ ಎಚ್.ಸಿ.ಸರೀನ್ ಸಮೀತಿ ಕೇಂದ್ರದ ರೇಲ್ವೆ ಸುಧಾರಣಾ ಸಮಿತಿಗಳು ಗುಲ್ಬರ್ಗ 1984 ರಲ್ಲಿಯೇ ಗುಲ್ಬರ್ಗ ಕೇಂದ್ರವಾಗಿರುವಂತೆ ಪ್ರತ್ಯೇಕ ರೇಲ್ವೆ ವಿಭಾಗದ ಸ್ಥಾಪನೆಗೆ ಕಾರ್ಯಸಾಧು ವರದಿ ನೀಡಿದ್ದವು.
3 ದಶಕಗಳ ಹಿಂದೆಯೇ ವಿಭಾಗೀಯ ಕಚೇರಿ ರಚನೆಗೆ ಸಹಮತ ವ್ಯಕ್ಕವಾಗಿರುವಾಗಿದ್ದರೂ ಇಂದಿಗೂ ಅದು ಈಡೇರಿಲ್ಲ ಎಂಬುದೇ ಸೋಜಿಗ. ಕೇಂದ್ರದ ಮಲತಾಯಿ ಧೋರಣೆಗೆ ಇದಕ್ಕಿಂತ ಬೇರೆ ಸಾಕ್ಷಿ ಬೇಕೆ?
ಸೌತ್ ವೆಸ್ಟರ್ನ್ ರೇಲ್ವೆಯ ಬೆಂಗಳೂರು, ಮೈಸೂರು, ಹುಬ್ಬಳ್ಳಿ ಹೊರತುಪಡಿಸಿದರೆ ಅನ್ಯಕಚೇರಿಗಳು ರಾಜ್ಯದಲ್ಲಿಲ್ಲ ಸ್ವಾತಂತ್ರ್ಯ ಬಂದು 6 ದಶಕಗಳೇ ಕಳೆದರೂ ಕರ್ನಾಟಕದಲ್ಲಿ ಇಂದಿಗೂ ರೇಲ್ವೆ ವಿಭಾಗೀಯ ಕಚೇರಿಗಳ ಬೇಡಿಕೆ ಮೂರಕ್ಕಿಂತ ಹೆಚ್ಚಾಗಿಲ್ಲ.
ಸೌಲಭ್ಯಪೂರ್ಣ ಗುಲ್ಬರ್ಗ ಅಲಕ್ಷ ಯಾಕೆ?: ಗುಲ್ಬರ್ಗ ಕೇಂದ್ರ ಆಗಿರುವಂತೆ ಪ್ರತ್ಯೇಕ ರೇಲ್ವೆ ವಿಭಾಗ ರಚನೆ ಇಲ್ಲಿನವರ ಬೇಡಿಕೆ. ಸೊಲ್ಲಾಪುರ ರೇಲ್ವೆ ವಿಭಾಗದಲ್ಲಿಯೇ ಹೆಚ್ಚು ಆದಾಯ ನೀಡುವ ರೇಲ್ವೆ ನಿಲ್ದಾಣಗಳೆಂದರೆ ಗುಲ್ಬರ್ಗ, ವಾಡಿ ಹಾಗೂ ಶಹಾಬಾದ್. ಸೊಲ್ಲಾಪೂರ ವಿಭಾಗೀಯ ಕಚೇರಿ ಒಟ್ಟು ವಾರ್ಷಿಕ ಆದಾಯದಲ್ಲೇ ಗುಲ್ಬರ್ಗ, ಶಹಾಬಾದ್ ಹಾಗೂ ವಾಡಿ ರೇಲ್ವೆ ನಿಲ್ದಾಣಗಳಿಂದ ಸಂಗ್ರಹವಾಗುವ ಆದಾಯ ಸುಮಾರು 125 ಕೋಟಿ ರುಪಾಯಿಗೂ ಅಧಿಕ ಹೊಟಗಿ ಜಂಕ್ಷನ್, ಗುಲ್ಬರ್ಗ, ವಾಡಿ ಜಂಕ್ಷನ್, ರಾಯಚೂರು, ಮಂತ್ರಾಲಯ (275 ಕಿಮೀ), ವಾಡಿ- ವಿಕಾರಾಬಾದ್- ಬೀದರ್- ಪರಳಿ (384 ಕಿಮೀ), ಗುಲ್ಬರ್ಗ- ಬೂದರ್ ಹೊಸ ರೈಲು ಮಾರ್ಗ (120 ಕಿಮೀ) ಈ ಪ್ರದೇಶಗಳ ವ್ಯಾಪ್ತಿ ಹೊಂದಿರುವಂತೆ ಗುಲ್ಬರ್ಗ ಪ್ರತ್ಯೇಕ ರೈಲು ವಿಭಾಗ ರಚನೆಗೆ ಅವಕಾಶಗಳಿದ್ದರೂ ಕೈಗೂಡುತ್ತಿಲ್ಲ.
ಕೇಂದ್ರ ರೇಲ್ವೆಯ ಸೊಲ್ಲಾಪುರ ವಿಭಾಗದಲ್ಲಿರುವ ವಾಡಿ, ಗುಲ್ಬರ್ಗ, ಶಹಾಬಾದ್ ಮಾರ್ಗ, ದ.ಮ. ಸಿಕಂದರಾಬಾದ್ ವಿಭಾಗದಲ್ಲಿರುವ ವಾಡಿ- ಸೇಡಂ, ಕುರುಕುಂಟಾ, ವಿಕಾರಾಬಾದ್, ಬೀದರ್, ಭಾಲ್ಕಿ, ಪರಳಿ ವೈಜನಾಥ ಮಾರ್ಗ, ದ.ಮ. ರೇಲ್ವೆ ಗುಂತಕಲ್ ವಿಭಾಗದಲ್ಲಿರುವ ರಾಯಚೂರು- ವಾಡಿ ಮಾರ್ಗದ ಒಟ್ಟು 870 ಕಿಮೀ ಉದ್ದೇಶಿತ ಗುಲ್ಬರ್ಗ ರೇಲ್ವೆ ವಿಭಾಗದ ವ್ಯಾಪ್ತಿಯಾಗಬಹುದು ಎಂದು ಸರೀನ್ ಸಮಿತಿ ಸ್ಪಷ್ಟವಾಗಿ ಹೇಳಿದೆ.
ಖರ್ಗೆ ಮುಂದಿರುವ ಸವಾಲು: ಸರೀನ್ ಸಮಿತಿ, ರೇಲ್ವೆ ಸುಧಾರಣಾ ಸಮಿತಿಗಳ ವರದಿಗಳ ಬಲ, ಸಂಪನ್ಮೂಲ- ಸೌಕರ್ಯಗಳ ಬೆಂಬಲವಿದ್ದರೂ ಇಂದಿಗೂ ರೇಲ್ವೆ ವಿಭಾಗೀಯ ಕಚೇರಿ ವಿಚಾರದಲ್ಲಿ ಗುಲ್ಬರ್ಗಕ್ಕೆ ಆಗುತ್ತಿರುವ ಅನ್ಯಾಯ ಸರಿಪಡಿಸುವುದು ಖರ್ಗೆ ಅವರ ಮುಂದಿರುವ ಸವಾಲು.
ರೇಲ್ವೆ ಇಲಾಖೆ ಜವಾಬ್ದಾರಿ ಹೊತ್ತಿರುವ ಗುಲ್ಬರ್ಗ ಸಂಸದ ಮಲ್ಲಿಕಾರ್ಜುನ ಖರ್ಗೆ 6 ತಿಂಗಳಲ್ಲಿ ರೇಲ್ವೆ ಮೂಲ ಸೌಕರ್ಯಗಳನ್ನು ಒಂದೊಂದೇ ಹೆಕ್ಕಿ ಹೈ-ಕ ಪ್ರದೇಶ ಜನರಿಗೆ ಕೊಡುತ್ತಿದ್ದಾರೆ. ಆದರೆ ವಿಭಾಗೀಯ ಕಚೇರಿ ಕೊಡುಗೆ ನೀಡಲಿ ಎಂದು ಜನರೇ ಖರ್ಗೆಯವರಿಗೆ ಸ್ಫೂರ್ತಿ ತುಂಬುತ್ತಿದ್ದಾರೆ.
ಪೂರ್ವ ತಯಾರಿಯೇ?: ರೇಲ್ವೆ ಮಾರ್ಗ ವಿದ್ಯುದೀಕರಣ, ಪಿಟ್ಲೈನ್, ರೇಲ್ವೆ ಮೇಲ್, ಕೆಳಸೇತುವೆಗಳು, 4ನೇ ಪ್ಲಾಟಫಾರ್ಮ್, ಆದರ್ಶ ರೇಲ್ವೆ ನಿಲ್ದಾಣ ಕಾಮಗಾರಿ, ಬೀದರ್- ಗುಲ್ಬರ್ಗ ರೇಲ್ವೆ ಮಾರ್ಗ ಕಾಮಗಾರಿ ಬೇಗ ಪೂರ್ಣಗೊಳ್ಳಲು ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿರುವ ಖರ್ಗೆ ಗುಲ್ಬರ್ಗಕ್ಕೆ ವಿಭಾಗೀಯ ಕಚೇರಿ ದೊರಕಿಸಿಕೊಡುವಲ್ಲಿ ಏನೆಲ್ಲಾ ಪೂರ್ವ ತಯಾರಿಗಳು ಬೇಕೋ ಅವನ್ನು ಮಾಡಿಕೊಳ್ಳುತ್ತಿರುವಂತಿದೆ.