ನೀರು ಸರಬರಾಜು; 20ರಂದು ಚಾಲನೆ
ಗುರುಮಠಕಲ್: ಪಟ್ಟಣ ಹಾಗೂ ಗುರುಮಠಕಲ್ ವ್ಯಾಪ್ತಿಯ 27 ಹಳ್ಳಿಗಳಿಗೆ ಶುದ್ಧ ಕುಡಿಯುವ ನೀರು ಸರಬರಾಜು ಯೋಜನೆಗೆ ನ.20ರಂದು ಮುಖ್ಯಮಂತ್ರಿ ಎಸ್. ಸಿದ್ದರಾಮಯ್ಯ ಚಾಲನೆ ನೀಡುವರು ಎಂದು ಜಿಲ್ಲಾ ಉಸ್ತುವಾರಿ ಸಚಿವರು ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವ ಬಾಬುರಾವ್ ಚಿಂಚನಸೂರ್ ತಿಳಿಸಿದರು.
ಪಟ್ಟಣದ ಪ್ರವಾಸಿಮಂದಿರದಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಗುರುಮಠಕಲ್ ಮತಕ್ಷೇತ್ರದ ಜನತೆಯ ಬಹು ದಿನಗಳ ಬೇಡಿಕೆಯನ್ನು ಈ ಭಾಗವನ್ನು ಪ್ರತಿನಿಧಿಸಿದ ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆಯವರು ವಿಶೇಷವಾಗಿ ಕಾಳಜಿ ವಹಿಸಿ ನೀರಾವರಿ ಯೋಜನೆ ಪ್ರಾರಂಭಕ್ಕೆ ಚಾಲನೆ ನೀಡುವಂತೆ ಮಾಡಿದ್ದಾರೆ.
45 ಕಿಮೀ ದೂರ: ಅಂದು ಖರ್ಗೆ ಕೈಗೊಂಡ ನಿರ್ಧಾರದಿಂದಾಗಿ ಇಂದು ಗುರುಮಠಕಲ್ ಪಟ್ಟಣ ಸೇರಿ ಎಲ್ಲಾ 27 ಗ್ರಾಮದ ಜನತೆಗೆ ಶುದ್ಧ ಕುಡಿಯುವ ನೀರು ದೊರೆಯಲಿದೆ. ಭೀಮಾ ನದಿಯಿಂದ 45 ಕಿ.ಮೀ. ದೂರದಲ್ಲಿರುವ ಗುರುಮಠಕಲ್ ಪಟ್ಟಣಕ್ಕೆ ಪೈಪ್ಲೈನ್ ಮೂಲಕ ಶುದ್ಧ ಕುಡಿಯುವ ನೀರು ಪೂರೈಸುವುದು ಹಾಗೂ ಇದರ ಉದ್ದಕ್ಕೂ ದಾರಿಯಲ್ಲಿ ಬರುವ 27 ಗ್ರಾಮಗಳಿಗೂ ಶುದ್ಧ ಕುಡಿಯುವ ನೀರು ಒದಗಿಸುವ ಮಹತ್ವಾಕಾಂಕ್ಷಿ ಯೋಜನೆ ಇದಾಗಿದೆ. ಇನ್ನು ಮುಂದೆ ಕ್ಷೇತ್ರದ ಜನತೆಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗದು ಎಂದರು.
ನೀರು ಎತ್ತುವ ಕೇಂದ್ರ: ಕರ್ನಾಟಕದ 30 ಜಿಲ್ಲೆಗಳಲ್ಲಿ ಹೆಚ್ಚಿನ ದೂರದಿಂದ (45.ಕಿ.ಮೀ.) ಕುಡಿಯುವ ನೀರು ಸರಬರಾಜು ಮಾಡುವ ಯೋಜನೆ ಇದಾಗಿದೆ. ಇದಕ್ಕೆ ಒಟ್ಟಾರೆ ಭೀಮನದಿ, ಅರಕೇರಾ ಬಳಿ ಹಾಗೂ ಚಿನ್ನಕರ್ 3 ನೀರು ಎತ್ತುವ ಕೇಂದ್ರಗಳಿವೆ ಎಂದರು. ಈ ಯೋಜನೆಯಿಂದ ಗುರುಮಿಠಕಲ್ಗೆ ದಿನವೊಂದಕ್ಕೆ 54.30 ಲಕ್ಷ ಲೀ. ಹಾಗೂ 27 ಹಳ್ಳಿಗಳಿಗೆ 49.70 ಲಕ್ಷ ಲೀಟರ್ ಶುದ್ಧ ಕುಡಿಯುವ ನೀರು ಸರಬರಾಜು ಮಾಡಲಾಗುವುದು ಎಂದರು. ಗುರುಮಠಕಲ್ ಕ್ರೀ ಡಾಂಗಣದಲ್ಲಿ ಈ ಯೋಜನೆಗೆ ಸಿದ್ದರಾಮಯ್ಯನವರಿಂದ ಚಾಲನೆ ದೊರೆಯಲಿದೆ. ಕಾರ್ಯಕ್ರಮಕ್ಕೆ ಕೇಂದ್ರ ರೇಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಹಾಗೂ ಗ್ರಾಮೀಣ ಅಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಎಚ್.ಕೆ. ಪಾಟೀಲ ಆಗಮಿಸಲಿದ್ದಾರೆ ಎಂದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮರಿಗೌಡ ಹುಲಕಲ್, ಚಿದಾನಂದಪ್ಪ ಕಾಳೇಬೆಳಗುಂದಿ, ಮಹಿಪಾಲರೆಡ್ಡಿ ಹತ್ತಿಕುಣಿ, ಶ್ರಣಿಕ ಕುಮಾರ ದೋಖಾ, ವಿಶ್ವನಾಥ ನಿಲಹಳ್ಳಿ, ಬಸವರಾಜಪ್ಪ ಬಾಗ್ಲಿ, ಕಂದಕೂರ ಜಿಪಂ ಸದಸ್ಯರಾದ ಭೀಮರಾಯ್ಯ, ಬ್ಲಾಕ್ ಉಪಾಧ್ಯಕ್ಷ ರಘುನಾಥ ರೆಡ್ಡಿ ನಜಾರಪುರ, ಪಟ್ಟಣ ಪಂಚಾಯತಿ ಸದಸ್ಯರಾದ ರವೀಂದ್ರ ರಡ್ಡಿ, ಬಾಲಪ್ಪ ನಿರೇಟಿ, ಮಾಜಿ ಎಪಿಎಂಸಿ ಅಧ್ಯಕ್ಷ ಬಸಣ್ಣ ದೇವರಹಳ್ಳಿ, ಪ್ರಕಾಶ ನಿರೇಟಿ, ಚಾಂದಪಾಶ, ವೀರಪ್ಪ ಪ್ಯಾಟಿ, ಬಾಲಪ್ಪ ಎಲ್ಲಮೋಳ್, ನರಸಿಂಹ ರಡ್ಡಿ ಚಂಡರಕಿ, ನಾರಾಯಣ ಕಲಾಲ್ ಇತರರಿದ್ದರು.