ಬೇಡಿಕೆ ಈಡೇರಿಸದಿದ್ದರೆ ಡಿಸೆಂಬರ್ನಲ್ಲಿ ಅನಿರ್ದಿಷ್ಟಾವಧಿ ಹೋರಾಟ
ಚಿತ್ತಾಪುರ: ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘವು ತಾಲೂಕು ಪಂಚಾಯಿತಿ ಕಚೇರಿಯ ಮುಂದೆ ಪ್ರತಿಭಟನಾ ಧರಣಿ ನಡೆಸಿ ತಾಲೂಕು ಅಕ್ಷರ ದಾಸೋಹ ಅಧಿಕಾರಿ ಶಂಕರ ತೇಲ್ಕರ್ ಅವರಿಗೆ ಮನವಿ ಪತ್ರ ಸಲ್ಲಿಸಿತು.
ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದ ತಾಲೂಕಾಧ್ಯಕ್ಷೆ ಸಂಗೀತಾ ಗುತ್ತೇದಾರ ನೇತೃತ್ವದಲ್ಲಿ ಎಪಿಎಂಸಿ ಆವರಣದಿಂದ ತಾಪಂ ಕಚೇರಿವರೆಗೆ ಮೆರವಣಿಗೆ ನಡೆಸಲಾಯಿತು. ರಾಜ್ಯದಲ್ಲಿ 69 ಲಕ್ಷಕ್ಕೂ ಅಧಿಕ ಮಕ್ಕಳಿಗೆ 1,03,874 ಅಡುಗೆ ಸಿಬ್ಬಂದಿ ಯಾವುದೇ ಸೇವಾ ಸೌಲಭ್ಯಗಳಿಲ್ಲದೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ತಮ್ಮ ವೇತನ ಹೆಚ್ಚಿಸಲು 11 ವರ್ಷಗಳಿಂದ ಹೋರಾಟ ಮಾಡಿದರೂ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದರು.
ಅನಿರ್ದಿಷ್ಟಾವಧಿ ಹೋರಾಟದ ಎಚ್ಚರಿಕೆ: ಅಡುಗೆ ಮಾಡುವಾಗ ಆಕಸ್ಮಿಕ ಅಪಘಾತವಾದಲ್ಲಿ ಪರಿಹಾರ ನಿಯಮ ಜಾರಿಯಾಗಬೇಕು. ರೋಸ್ಟರ್ ಪದ್ಧತಿ ಪ್ರಕಾರ ಕೆಲವಡೆ ಹಿಂದುಳಿದ ಮಹಿಳೆಯರಿಗೆ ಆದ್ಯತೆ ಕೊಡುವ ನೆಪದಲ್ಲಿ 11 ವರ್ಷ ಸೇವೆ ಸಲ್ಲಿಸಿದವರನ್ನು ಕೆಲಸದಿಂದ ತೆಗೆಯುವುದನ್ನು ನಿಲ್ಲಿಸಬೇಕು. ಶಿಕ್ಷಕರಿಗೆ ನೀಡುವ ಹಾಗೆ ಬೇಸಿಗೆ ರಜೆಯ ವೇತನವನ್ನು ಬಿಸಿಯೂಟ ನೌಕರರಿಗೂ ನೀಡಬೇಕು. ಆಗಸ್ಟ್ನಿಂದ ನೌಕರರ ಗೌರವಧನ ಹೆಚ್ಚಿಸಬೇಕೆಂಬ ಇತ್ಯಾದಿ ಬೇಡಿಕೆಗಳನ್ನು ತಕ್ಷಣ ಜಾರಿ ಮಾಡಬೇಕು. ಇಲ್ಲದಿದ್ದರೆ ಡಿಸೆಂಬರ್ನಲ್ಲಿ ಅನಿರ್ದಿಷ್ಟಾವಧಿ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಜಿಲ್ಲಾ ಕಾರ್ಯದರ್ಶಿ ಅಶೋಕ ಮ್ಯಾಗೇರಿ, ಬಿಸಿಯೂಟ ನೌಕರರ ಸಂಘದ ಕಾರ್ಯದರ್ಶಿ ಸಂಪತಕುಮಾರಿ, ಸುನಿತಾ ಅಲ್ಲೂರ, ಶರಣಮ್ಮ, ಲಕ್ಷ್ಮಿ, ಸುವರ್ಣ, ಸುನಿತಾ ಕಾಳಗಿ, ಗೌರಮ್ಮ ಮಂಗಲಗಿ, ಸುನಿತಾ ಶಹಾಬಾದ್, ಸಾವಿತ್ರಿ ಭಂಕೂರ, ಮರಿಯಮ್ಮ ಶಹಾಬಾದ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.