22ರಂದು ವೀರಭದ್ರೇಶ್ವರ ರಥೋತ್ಸವ
ಗುಲ್ಬರ್ಗ/ಶಹಾಬಾದ್: ಇಲ್ಲಿಗೆ ಸಮೀಪದ ಸುಕ್ಷೇತ್ರ ಹಲಕರ್ಟಿ ಗ್ರಾಮದ ವೀರಭದ್ರೇಶ್ವರ ಜಾತ್ರೆ ನ.17ರಿಂದ ಆರಂಭಗೊಳ್ಳಲಿದ್ದು, 22ರಂದು ಕಟ್ಟಿಮನಿ ಹಿರೇಮಠದ ಮುನೀಂದ್ರ ಶ್ರೀ ಸಾನ್ನಿಧ್ಯದಲ್ಲಿ ಭವ್ಯ ರಥೋತ್ಸವ ಜರುಗಲಿದೆ ಎಂದು ಜಾತ್ರಾ ಮಹೋತ್ಸವ ಸಮಿತಿ ತಿಳಿಸಿದೆ.
ಈಗಾಗಲೇ ಗ್ರಾಮದಲ್ಲಿ ಜಾತ್ರೆ ನಿಮಿತ್ತ ಭರದ ಸಿದ್ಧತೆ ನಡೆದಿದ್ದು, ಮಠದ ಆವರಣ ಹಾಗೂ ದೇವಸ್ಥಾನದ ಮೈದಾನದಲ್ಲಿ ಬಿಡಾರು ಅಂಗಡಿಗಳು ಬೀಡುಬಿಟ್ಟಿವೆ. ಸರಪಳಿ ಹರಿಯಲು ಗ್ರಾಮದ ಮಲ್ಲಯ್ಯನ ದೇವಸ್ಥಾನ ಬಣ್ಣಗಳಿಂದ ಶೃಂಗಾರಗೊಳಿಸಲಾಗಿದೆ. ಕಾರಣ ದೇವಸ್ಥಾನದಲ್ಲಿ ಪ್ರತಿದಿನ ವಿವಿಧ ಪೂಜಾ ಕಾರ್ಯಕ್ರಮಗಳು ನಡೆಯುತ್ತಿವೆ.
ಕಾರ್ಯಕ್ರಮಗಳು ನ.17ರಂದು ರಾತ್ರಿ 10ಕ್ಕೆ ಗ್ರಾಮದ ಚಿಕ್ಕವೀರಪ್ಪರ ಮನೆಯಿಂದ ಮೈಲಾರಲಿಂಗೇಶ್ವರ ದೇವಸ್ಥಾನದ ವರೆಗೆ ಸಕಲ ವಾದ್ಯಗಳೊಂದಿಗೆ ಅಂಬಲಿ ಬಂಡಿ ಸಾಗಲಿದೆ.
ನ.18ರಂದು ಸಂಜೆ 4ಕ್ಕೆ ಜೋಡು ಪಲ್ಲಕ್ಕಿ ಮೂಲಕ ಚೌಡಮ್ಮ ದೇವಿ ಗಂಗ ಸ್ಥಳಕ್ಕೆ ಹೊರಡುವ ಉತ್ಸವ ನಡೆಯಲಿದೆ. ನ.19ರಂದು ರಾತ್ರಿ 11ಕ್ಕೆ ಪಲ್ಲಕ್ಕಿ ಸೇವಾ, ನ.20ರಂದು ರಾತ್ರಿ 1ಕ್ಕೆ ಗ್ರಾಮದ ಮೈಲಾರಲಿಂಗೇಶ್ವರ ದೇವಸ್ಥಾನದಲ್ಲಿ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಕಳ್ಳಸರಪಳಿ ಹರಿಯುವ ಸಾಹಸ ಜರುಗಲಿದೆ. 21ರ ಸಂಜೆ 4ಕ್ಕೆ ದೈವದ ಸರಪಳಿ, ಅಗ್ನಿ ಪ್ರವೇಶ, ಒಗ್ಗಯ್ಯಗಳಿಗೆ ಸನ್ಮಾನ ಹಾಗೂ ಪುರವಂತರ ಸೇವೆ ನಡೆಯುವುದು. ನ.22ರಂದು ಸಂಜೆ 6ಕ್ಕೆ ವಿವಿಧ ಮಠಾಧೀಶರ ಹಾಗೂ ಲಕ್ಷಾಂತರ ಜನ ಭಕ್ತರ ಸಮ್ಮುಖದಲ್ಲಿ ವೀರಭದ್ರೇಶ್ವರರ ಭವ್ಯ ರಥೋತ್ಸವ ವಿಜೃಂಭಣೆಯಿಂದ ಜರುಗಲಿದ್ದು, ಅಂದು ಇಡೀ ರಾತ್ರಿ ಸಂಗೀತ ಕಾರ್ಯಕ್ರಮಗಳು ನಡೆಯಲಿವೆ ಎಂದು ತಿಳಿಸಲಾಗಿದೆ.
ವಿಶೇಷ ಬಸ್ ಸೌಲಭ್ಯ: ದೇವಸ್ಥಾನ ಆವರಣದಲ್ಲಿ ನ.21 ಹಾಗೂ 22ರಂದು ಮಹಾಪ್ರಸಾದ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ವಾಡಿ ಪಟ್ಟಣ ಹಾಗೂ ಯಾದಗಿರಿ ನಗರದಿಂದ ಸುಕ್ಷೇತ್ರ ಹಲಕರ್ಟಿಗೆ ಬರಲು ವಿಶೇಷ ವಾಹನಗಳ ಸೌಲಭ್ಯ ವಿರುತ್ತದೆ.
ನಾಟಕ ಪ್ರದರ್ಶನ: ಹಲಕರ್ಟಿ ಗ್ರಾಮದ ಕಲಾವಿದರೇ ಅಭಿನಯಿಸಿರುವ ಕವಿ ಯಲ್ಲೇಶ ಯಾಳಗಿ ವಿರಚಿತ ನಾ ಸಾಕಿದ ಗಿಣಿ ಅರ್ಥಾತ್ ಬಾಳ ಬೇಕಾದರೆ ತಾಳಬೇಕು ಎಂಬ ಸಾಮಾಜಿಕ ನಾಟಕ ನ.21, 22 ಹಾಗೂ 23ರಂದು ಮೂರು ದಿನಗಳವರೆಗೆ ಗ್ರಾಮದಲ್ಲಿ ಪ್ರದರ್ಶನಗೊಳ್ಳಲಿದೆ.