ಕಂಪ್ಯೂಟರ್ ಆಪರೇಟರ್‌ಗಳು ಚುರುಕಾಗಲಿ
ಕನ್ನಡಪ್ರಭ ವಾರ್ತೆ ಆಳಂದ ನ.16
ಗ್ರಾಮ ಪಂಚಾಯಿತಿಗಳ ಮೂಲಕ ಅನುಷ್ಠಾನ ಕೈಗೊಳ್ಳುತ್ತಿರುವ ರಾಜ್ಯ- ಕೇಂದ್ರ ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ಜಾರಿಗೊಳಿಸಲು ಹಿಂದೇಟು ಹಾಕಿದರೆ ತಕ್ಕ ಶಾಸ್ತಿ ಎದುರಿಸಬೇಕಾಗುತ್ತದೆ ಎಂದು ತಾಪಂ ಇಒ ಲಕ್ಷ್ಮಣ ಶೃಂಗೇರಿ ಎಚ್ಚರಿಕೆ ನೀಡಿದರು.
ಪಟ್ಟಣದ ತಾಪಂ ಸಭಾಂಗಣದಲ್ಲಿ 39 ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು, ಕಂಪ್ಯೂಟರ್ ಆಪರೇಟರ್ ಹಾಗೂ ಸ್ವಚ್ಛತಾ ಧೂತರಿಗೆ ಕರೆದ ಸಭೆಯಲ್ಲಿ ಅವರು ಮಾತನಾಡಿದರು.
ಮಾದರಿ ಆಡಳಿತ ನೀಡುವ ಗುರಿ: ಜಿಲ್ಲೆಯಲ್ಲೇ ತಾಲೂಕಿನ ಕಂಪ್ಯೂಟರ್ ನಿರ್ವಾಹಕರ ಆಮೆವೇಗದ ಕೆಲಸದಿಂದ ಯೋಜನೆಗಳು ಕಂಪ್ಯೂಟರ್ ದಾಖಲೆಗೆ ಹಿನ್ನಡೆಯಾಗಿದೆ. ಮುಂದೆ ಹೀಗಾದರೆ ಕ್ರಮ ಜರುಗಿಸಲಾಗುವುದು. ಜಿಲ್ಲೆಯಲ್ಲೇ ಮಾದರಿ ಆಡಳಿತ ನೀಡುವ ಗುರಿ ಈಡೇರಿಸಲು ಸಿಬ್ಬಂದಿ ಪ್ರಯತ್ನಿಸಬೇಕು ಎಂದ ಅವರು, ಸರ್ಕಾರ ಬಡವರಿಗೆ ಕೊಟ್ಟ ಸಹಾಯಧನ ಯೋಜನೆಗಳನ್ನು ಮುಟ್ಟಿಸಲು ಸಮಸ್ಯೆ ಏನು ಎಂದು ಪ್ರಶ್ನಿಸಿದರು.
ವಸತಿ ಯೋಜನೆ, ನಿರ್ಮಲ ಭಾರತ ಅಭಿಯಾನ, ಬಿಆರ್‌ಜಿಎಫ್, ಉದ್ಯೋಗ ಖಾತ್ರಿ, ಎನ್‌ಆರ್‌ಎಲ್‌ಎಂ (ಸಂಜಿವಿನಿ) ಸೇರಿದಂತೆ ಇನ್ನಿತರ ಯೋಜನೆಗಳ ಕುರಿತು ಪ್ರಗತಿ ಮಂದಗತಿಯಲ್ಲಿದೆ. ನಿಗದಿಪಡಿಸಿದ ದಿನಾಂಕದೊಳಗೆ ಕೈಗೊಳ್ಳದೆ ಇರುವ ಅಧಿಕಾರಿಗಳ ವಿರುದ್ಧ ಮೇಲಧಿಕಾರಿಗಳಿಗೆ ವರದಿ ಸಲ್ಲಿಸಲಾಗುವುದು ಎಂದು ಹೇಳಿದರು.
ಶೌಚಾಲಯ ಕಟ್ಟಲು ಪ್ರಯತ್ನಿಸಿ: ಉದ್ಯೋಗ ಖಾತ್ರಿ ಅಡಿಯಲ್ಲಿ ಹೊಸದಾಗಿ ಬಂದ ಕಾಯಕ ಸಂಘವನ್ನು ಅನುಷ್ಠಾನಗೊಳಿಸಬೇಕು. ಪಂಚಾಯಿತಿ ಸಂಬಂಧಿತ ಕಾರ್ಯವನ್ನು ಪಂಚತಂತ್ರ, ಸಕಾಲದಲ್ಲಿ ಅಳವಡಿಸಬೇಕು. ಇಲ್ಲವಾದಲ್ಲಿ ಯಾವುದೇ ಕೆಲಸ ನಡೆದಿಲ್ಲ ಎಂದು ಪಂಚಾಯಿತಿಗೆ ಕೆಟ್ಟ ಹೆಸರು ಬರುತ್ತದೆ. ನಿರ್ಮಲ ಭಾರತ ಯೋಜನೆಯಡಿಯಲ್ಲಿ ಎಲ್ಲಡೆ ಶೌಚಾಲಯಗಳನ್ನು ಕಟ್ಟಲು ಪ್ರಯತ್ನಿಸಬೇಕು ಎಂದರು.
ಜಿಪಂ ಎಇಇ ಅಬ್ದುಲ್ ಸಲಾಂ, ಯೋಜನಾಧಿಕಾರಿ ಗುರುನಾಥ ಗೌಡಪ್ಪನವರು, ಎಡಿ ರಮೇಶ ಬಾಬು, ಶ್ರೀಶೈಲ್ ಕಂಬಾರ, ಗಣಪತಿ ಪ್ರಚಂಡೆ, ಕೊಡಲಂಗರಗಾ ಪಿಡಿಒ ಸಾಯಬಣ್ಣ ವಡಿಗೇರ, ನಿರುಗುಡಿಯ ಬಾಬುಗೌಡ ಪಾಟೀಲ್, ನಬೀಲಾಲ್, ಶ್ಯಾಮರಾವ, ಹೋದಲೂರ ಮಲಕಪ್ಪ, ಜಿಡಗಾದ ಧರ್ಮಣ್ಣ, ರಾಮರಾವ ಕುಲಕರ್ಣಿ, ಶ್ರೀಮಂತ ನಿಲೂರ, ದಯಾನಂದ ಜಾಧವ, ಶ್ಯಾಮರಾವ ಬಶಟ್ಟಿ, ಗುರುಪಾದಪ್ಪ ವಾರದ, ಅರಣ್ಯಾಧಿಕಾರಿ ಮೊಮದ್ ಅಲಿ ಮತ್ತು ಕಂಪ್ಯೂಟರ್ ನಿರ್ವಾಹಕರು, ಸ್ವಚ್ಛತಾ ಧೂತರು ಉಪಸ್ಥಿತರಿದ್ದರು.