ದುರಂತಕ್ಕೆ ಮಿಡಿದ ಶಾಸಕ ರಾಜಾ ವೆಂಕಟಪ್ಪನಾಯಕ
ಹುಣಸಗಿ: ಸುರಪುರದಲ್ಲಿದ್ದ ಶಾಸಕ ರಾಜಾ ವೆಂಕಟಪ್ಪನಾಯಕ ಅಪಘಾತದ ಸುದ್ದಿ ತಿಳಿಯುತ್ತಲೇ, ಅಪಘಾತ ಸ್ಥಳಕ್ಕೆ ಭೇಟಿ ನೀಡಿ ಮೃತರ ಮರಣೋತ್ತರ ಪರೀಕ್ಷೆ, ಗಾಯಾಳುಗಳಿಗೆ ಹೆಚ್ಚಿನ ಚಿಕಿತ್ಸೆ ಒದಗಿಸಲು ಸೂಕ್ತ ಕ್ರಮ ಕೈಗೊಂಡರು. ಶಾಸಕರು ಹೇಳುವಂತೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ಬೆಳಗಾವಿ ಉಸ್ತುವಾರಿ ಮಂತ್ರಿ, ಪ್ರಕಾಶ ಹುಕ್ಕೇರಿ, ಸ್ಥಳಿಯ ಶಾಸಕರು, ಯಾದಗಿರಿ ಹಾಗೂ ಬೆಳಗಾವಿ ಜಿಲ್ಲಾಧಿಕಾರಿಗಳೊಂದಿಗೆ ಸತತ ಸಂಪರ್ಕದಲ್ಲಿದ್ದು, ಅಗತ್ಯ ಕ್ರಮಗಳನ್ನು ಯುದ್ದೋಪಾದಿಯಲ್ಲಿ ಕೈಗೊಂಡರು. ಪತ್ರಿಕೆಯೊಂದಿಗೆ ಮಾತನಾಡುತ್ತ, ಬೈಲಹೊಂಗಲ ಮತ್ತು ಬೆಳಗಾವಿ ಆಸ್ಪತ್ರೆಯಲ್ಲಿರುವವರ ಯೋಗಕ್ಷೇವು ವಿಚಾರಿಸಿ ಸಾಂತ್ವಾನ ಹೇಳಿದರು. ತಾಂಡಾಗಳಲ್ಲಿ ಶೇ.90 ರಷ್ಟು ಗುಳೆ ಹೋಗುವುದು ತಪ್ಪಿಸಲು ಸರ್ಕಾರ ಸರ್ವ ರೀತಿಯ ಸೌಕರ್ಯಗಳನ್ನು ಕಾಲಮಿತಿಯಲ್ಲಿ ಅನುಷ್ಠಾನಗೊಳಿಸುವಂತೆ ಸಂಬಂಧಪಟ್ಟ ಮಂತ್ರಿಗಳ, ಅಧಿಕಾರಿಗಳ ನೆರವಿನೊಂದಿಗೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ಕೆಲವೊಂದು ಕುಟುಂಬಗಳಲ್ಲಿ ಕೇವಲ ಮಕ್ಕಳು ಉಳಿದಿದ್ದು, ಅವರಲ್ಲಿ ಅನಾಥಪ್ರಜ್ಞೆ ಬರದಂತೆ ಎಲ್ಲ ರೀತಿಯ ಪುನರ್ವಸತಿಯನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಉಪ್ಪಲದಿನ್ನಿ ತಾಂಡಾ ಸೇರಿದಂತೆ ಉಸ್ತುವಾರಿ ಸಚಿವ ಬಾಬುರಾವ ಚಿಂಚನಸೂರ, ಜಿಲ್ಲಾಧಿಕಾರಿ ಎಫ್.ಆರ್. ಜಮಾದಾರ್, ಜಿಲ್ಲಾಡಳಿತ ಭೇಟಿ ನೀಡಿ ಅಗತ್ಯ ತುರ್ತುಕ್ರಮಗಳಿಗೆ ಮುಂದಾಗಿದೆ. ಮೃತರಿಗೆ ಒಂದು ಲಕ್ಷ ರೂ ಪರಿಹಾರ, ಅಂತಿಮ ಸಂಸ್ಕಾರಕ್ಕೆ ಒಂದು ಸಾವಿರ ರೂಪಾಯಿ ನೀಡಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಮಾಜಿ ತಾಪಂ ಅಧ್ಯಕ್ಷ ವಿಠ್ಠಲ್ ಯಾದವ್ ಹಾಗೂ ಇತರರು ಇದ್ದರು.
ಮೃತ ಕುಟುಂಬಕ್ಕೆ ಬೀದಿಬದಿ ವ್ಯಾಪಾರಿಗಳ ನೆರವು
ಶಹಾಪುರ: ಇತ್ತೀಚಿಗೆ ಹೃದಯಘಾತದಿಂದ ಮೃತಪಟ್ಟ ಬೀದಿಬದಿ ವ್ಯಾಪಾರಿಗಳ ಮತ್ತು ತಳ್ಳುಬಂಡಿ ಗ್ರಾಮೀಣ ಅಭಿವೃದ್ಧಿ ಸಂಘದ ಸದಸ್ಯೆಯಾದ ಸೈಜಾಜಿಬೇಗಂ ಗಂಡ ಮಹ್ಮದ್ ಬಡೇಸಾಬ ಈಕೆಯ ಕುಟುಂಬಕ್ಕೆ ಸಂಘವು ಮಾನವೀಯತೆ ದಿಸೆಯಲ್ಲಿ 5 ಸಾವಿರ ಆರ್ಥಿಕ ಸಹಕಾರ ನೀಡಿದೆ. ಈ ಕುರಿತು ಅಭಿಪ್ರಾಯ ಹಂಚಿಕೊಂಡ ಸಂಘದ ಅಧ್ಯಕ್ಷ ಅಮೃತ ಹೂಗಾರ ಬೀದಿಬದಿ ವ್ಯಾಪಾರಿಗಳು, ತಳ್ಳುಬಂಡಿ ವ್ಯಾಪಾರಿಗಳ ಬದುಕು ಹೋರಾಟದ ಬದುಕಾಗಿದ್ದು, ಸಂಘವು ವ್ಯಾಪಾರಸ್ಥರ ಸದಾಭಿವೃದ್ಧಿಯ ಜೊತೆ ಸಂಕಷ್ಟದಲ್ಲಿರುವವರ ನೆರವಿಗೆ ಬರಲು ಸರ್ವರ ಸಹಕಾರದಿಂದ ಸಮಾಜಮುಖಿ ಕಾರ್ಯಮಾಡುತ್ತಿದೆ ಎಂದರು. ಪದಾಧಿಕಾರಿಗಳಾದ ಭೀಮರಾಯ ಹೊಸೂರು, ರಾಜುಹೊಸೂರು, ಶಾಂತರಡ್ಡಿ ಬೈಚಬಾಳ, ವಿಶ್ವನಾಥ ಕೊಡಮನಹಳ್ಳಿ, ನಾಗರಾಜ ಹೆಮ್ಮಡಿಗಿ, ಬಸವರಾಜ ಮುನಮುಟಿಗಿ, ಲಕ್ಷ್ಮಣ ಭೋವಿ ಇನ್ನಿತರರು ಇದ್ದರು.