ಮೃತರ ಕುಟುಂಬಕ್ಕೆ 5 ಲಕ್ಷ, ಗಾಯಾಳುಗಳಿಗೆ 2 ಲಕ್ಷ ಪರಿಹಾರ ನೀಡಿ
ಸುರಪುರ: ಬೆಳಗಾವಿ ಸಮೀಪದ ಯರಗಟ್ಟಿ ಬಳಿ ಶನಿವಾರ ನಡೆದ ರಸ್ತೆ ಅಪಘಾತದ ಸ್ಥಳಕ್ಕೆ ಮಾಜಿ ಸಚಿವ ರಾಜೂಗೌಡ ಭೇಟಿ ನೀಡಿದರು. ಈ ಸಂದರ್ಭದಲ್ಲಿ ದೂರವಾಣಿ ಮುಖಾಂತರ ಮಾತನಾಡಿ, ಪ್ರತಿಯೊಂದು ಮೃತರ ಕುಟುಂಬಕ್ಕೆ 5 ಲಕ್ಷ ಮತ್ತು ಗಾಯಾಳುಗಳಿಗೆ 2 ಲಕ್ಷ ಪರಿಹಾರ ನೀಡಲು ಸರ್ಕಾರಕ್ಕೆ ಒತ್ತಾಯಿಸಿದರು.
ತಾಲೂಕಿನಲ್ಲಿ ಅತಿ ಹೆಚ್ಚು ತಾಂಡಾಗಳಿದ್ದು, ಅವರ ಜೀವನಮಟ್ಟದಲ್ಲಿ ಆರ್ಥಿಕ ತೊಂದರೆಯಿಂದ ಗುಳಿ ಹೋಗದಂತೆ ಆರ್ಥಿಕ ಮಟ್ಟ ಸುಧಾರಿಸಲು ಶಾಶ್ವತ ಯೋಜನೆಗಳನ್ನು ಅನುಷ್ಠಾನಗೊಳಿಸಲು ಆಗ್ರಹಿಸಿದರು. 2000ನೇ ಇಸವಿಯಲ್ಲಿ ರಾಯನಪಾಳೆ ಗ್ರಾಮದ ಕೃಷಿ ಕಾರ್ಮಿಕರು ಅಪಘಾತದಲ್ಲಿ ಮೃತಪಟ್ಟಾಗ, ಇತ್ತೀಚಿಗೆ ಚಳ್ಳಿಕೆರಿ ಬಳಿ ಸುರಪುರ ಬೆಂಗಳೂರ ಬಸ್ ಸುಟ್ಟು ಅನೇಕರು ಮೃತಪಟ್ಟಾಗ ಸರ್ಕಾರ ಐದು ಲಕ್ಷ ರೂಪಾಯಿ ಪರಿಹಾರ ನೀಡಿತ್ತು.
ಸಧ್ಯದ ಸರ್ಕಾರ 1 ಲಕ್ಷ ಸತ್ತವರಿಗೆ ಪರಿಹಾರ ಘೋಶಣೆ ಮಾಡಿದ್ದು, ದಿಗ್ಭ್ರಮೆ ಮೂಡಿಸಿದೆ ಎಂದ ಅವರು, ಅಪಘಾತ ನಿಯಂತ್ರಣಕ್ಕೆ ಶಾಶ್ವತ ಪರಿಹಾರವೆಂದರೆ ವರ್ಷಪೂರ್ತಿ ಸರಿಯಾದ ಕೂಲಿ ಸಿಗುವಂತೆ ಅವರ ಮಕ್ಕಳಿಗೆ ಶಿಕ್ಷಣದ ಗುಣಮಟ್ಟ ಹೆಚ್ಚುವಂತೆ ಕ್ರಮ ಕೈಗೊಳ್ಳಬೇಕೆಂದು ಹೇಳಿದರು. ಮಾಜಿ ಸಚಿವರೊಂದಿಗೆ ಜಿಪಂ ವಿರೋಧ ಪಕ್ಷನಾಯಕ ಎಚ್.ಸಿ. ಪಾಟೀಲ್, ಬಂಜಾರಾ ಸಮಾಜದ ತಾಲೂಕಾಧ್ಯಕ್ಷ ನಿಂಗಾನಾಯಕ ರಾಠೋಡ, ಭೀಮಾನಾಯಕ ಸೊನ್ನಾಪುರ, ಮೋತಿಲಾಲ, ದೇವು ಗೋಪಾಳಿ, ಇತರರು ಇದ್ದರು.
ವೆಂಕಟಪ್ಪನಾಯಕ ಸಾಂತ್ವನ
ಸುರಪುರ: ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಹಲಕಿ ಕ್ರಾಸ್ ಬಳಿ ಸಂಭವಿಸಿದ ದುರಂತದಲ್ಲಿ ಸುರಪುರ ತಾಲೂಕಿನ 22 ಜನ ಮೃತಪಟ್ಟ ಸುದ್ದಿ ತಿಳಿಯುತ್ತಿದ್ದಂತೆ ಶಾಸಕ ರಾಜಾ ವೆಂಕಟಪ್ಪನಾಯಕ ಬೆಳಗಾವಿಗೆ ದೌಡಾಯಿಸಿದರು. ಬೈಲಹೊಂಗಲ, ಸವದತ್ತಿ, ಬೆಳಗಾವಿ ಆಸ್ಪತ್ರೆಗಳಿಗೆ ಭೇಟಿ ನೀಡಿ ಮೃತರ ಕುಟುಂಬಗಳ ಸದಸ್ಯರಿಗೆ ಸಾಂತ್ವನ ಹೇಳಿದರು. ಗಾಯಗೊಂಡು ಚಿಕಿತ್ಸೆ ಪಡಯುತ್ತಿರುವವರಿಗೆ ವೈಯಕ್ತಿಕವಾಗಿ ತಲಾ 5000 ಧನಸಹಾಯ ನೆರವು ಕಲ್ಪಿಸಿರುವುದಾಗಿ ದೂರವಾಣಿ ಮೂಲಕ ತಿಳಿಸಿದರು.