ರಕ್ತದಾನಕ್ಕಿಂತ ಶ್ರೇಷ್ಠ ಮತ್ತೊಂದಿಲ್ಲ: ಡಾ. ಉಮೇಶ್
ಕನ್ನಡಪ್ರಭ ವಾರ್ತೆ ಚಿಂಚೋಳಿ ನ.16
ರಕ್ತದಾನ ಅತ್ಯಂತ ಶ್ರೇಷ್ಠವಾಗಿದ್ದು, ಇದಕ್ಕಿಂತ ದೊಡ್ಡ ದಾನ ಯಾವುದೂ ಇಲ್ಲವೆಂದು ಶಾಸಕ ಡಾ. ಉಮೇಶ ಜಾಧವ ಅಭಿಪ್ರಾಯಪಟ್ಟರು.
ಪಟ್ಟಣದ ಚಂದಾಪುರ ನಗರದ ಹಾರಕೂಡ ಚೆನ್ನಬಸವ ಪ್ರೌಢಶಾಲೆ ಆವರಣದಲ್ಲಿ ಹಾರಕೂಡ- ಚಿಂಚೋಳಿ ಹಿರೇಮಠ ಸಂಸ್ಥಾನ ಪೀಠಾಧಿಪತಿ ಶಿವಾಚಾರ್ಯ ಚೆನ್ನವೀರ ಶಿವಾಚಾರ್ಯರವರ 51ನೇ ಜನ್ಮದಿನ ಪ್ರಯುಕ್ತರಕ್ತದಾನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ನಡೆದಾಡುವ ದೇವರೆಂದೇ ಖ್ಯಾತಿ: ಹಾರಕೂಡ ಶ್ರೀಗಳು ಬಸವಣ್ಣ ತತ್ವ ವಿಚಾರದಲ್ಲಿ ಎಲ್ಲ ಜಾತಿ ಜನಾಂಗದವರನ್ನು ಪ್ರೀತಿಯಿಂದ ಕಾಣುತ್ತಿದ್ದರು. ಈ ಭಾಗದ ನಡೆದಾಡುವ ದೇವರೆಂದೇ ಖ್ಯಾತಿ ಪಡೆದಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲಿ ಗಣನೀಯವಾಗಿ ಸೇವೆ ಸಲ್ಲಿಸುತ್ತಿರುವ ಹಾರಕೂಡ ಶ್ರೀಗಳಿಗೆ ಗುವಿವಿ ಗೌರವ ಡಾಕ್ಟರೇಟ್ ಪದವಿ ಸಿಗಲಿ ಎಂದು ಶುಭ ಹಾರೈಸಿದರು.
ಹಾರಕೂಡ ಚೆನ್ನವೀರ ಶಿವಾಚಾರ್ಯರು ಆಶೀರ್ವಚನ ನೀಡಿ, ನಾನೊಬ್ಬ ಹಾರಕೂಡ ಸೇವಕನಾಗಿ ಸೇವೆ ಸಲ್ಲಿಸುತ್ತಿದ್ದೇನೆ. ಸೇವಕರಿಗಾಗಿ ಸೇವೆ ಮಾಡಿದವರ ಹಿಂದೆ ಚೆನ್ನಬಸವ ಶಿವಯೋಗಿಗಳವರ ಆಶೀರ್ವಾದವಿದೆ. ಒಂದು ಕೋಟಿ ಜಪಗಿಂತಲೂ ರಕ್ತದಾನ ಶ್ರೇಷ್ಠವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಮಾಜಿ ಸಚಿವ ಸುನೀಲ್ ವಲ್ಯಾಪುರೆ ಮಾತನಾಡಿದರು. ಸಂತೋಷ ಕಡಗದ ಸ್ವಾಗತಿಸಿದರು. ಮಲ್ಲಿಕಾರ್ಜುನ ಪಾಲಾಮೂರ ನಿರೂಪಿಸಿದರು. ಜಗನ್ನಾಥ ಸೇರಿಕಾರ ವಂದಿಸಿದರು.
ಶಿಬಿರದಲ್ಲಿ ಶಾಸಕ ಡಾ. ಉಮೇಶ ಜಾಧವ ಸೇರಿದಂತೆ ಸುಭಾಷ ಸೀಳಿನ್, ಅಜೀತ್ ಪಾಟೀಲ್, ಮಹೇಶ ಬೆಮಳಗಿ, ಡಾ. ತುಕಾರಾಮ ಪವಾರ, ರೇವಣಸಿದ್ದ ಮಜ್ಜಗಿ, ನಾಗರಾಜ ಕಲಬುರ್ಗಿ, ಜಗನ್ನಾಥ ಇದಲಾಯಿ, ಸಂತೋಷ ಗಡಂತಿ ಇತರರು ಸೇರಿದಂತೆ ನಗರದ ಒಟ್ಟು 142 ಭಕ್ತರು ರಕ್ತದಾನ ಮಾಡಿದರು.