ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

'ರೈತರಿಗೆ ಇನ್ನು ಗುಣಮಟ್ಟದ ಬೀಜ'

Mainashree
Updated On : 17 Nov 2013, 10:38 am

ಗುಲ್ಬರ್ಗ: ಗುಲ್ಬರ್ಗದಲ್ಲಿ ಬೀಜ ಸಂಸ್ಕರಣ ಘಟಕ ಸ್ಥಾಪನೆಯಾಗಿರುವುದರಿಂದ ಈಗ ಜಿಲ್ಲೆಯ ರೈತರಿಗೆ ಸರಿಯಾದ ಸಮಯಕ್ಕೆ ಸಂಸ್ಕರಣಗೊಂಡ ಗುಣಮಟ್ಟದ ಬಿತ್ತನೆ ಬೀಜ ಲಭ್ಯವಾಗಲಿದ್ದು, ಈ ಭಾಗದ ರೈತರು ಆತಂಕಗೊಳ್ಳುವ ಅಗತ್ಯವಿಲ್ಲ ಎಂದು ಕೃಷಿ ಸಚಿವ ಕೃಷ್ಣ ಬೈರೇಗೌಡ ಹೇಳಿದರು.
ನಗರದ ಹೊರವಲಯದ ಕೋಟನೂರನ ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಆವರಣದಲ್ಲಿ ಕರ್ನಾಟಕ ರಾಜ್ಯ ಬೀಜ ನಿಗಮ ನಿಯಮಿತದಿಂದ ನೂತನವಾಗಿ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿಯಲ್ಲಿ ನಿರ್ಮಿಸಲಾದ ಬೀಜ ಸಂಸ್ಕರಣ ಘಟಕವನ್ನು ಉದ್ಘಾಟಿಸಿ ಅವರು ಮಾತನಾಡಿದರು.
3 ಕೋಟಿ ವೆಚ್ಚದಲ್ಲಿ ಬೀಜ ಸಂಸ್ಕರಣ ಘಟಕ ಸ್ಥಾಪಿಸಲಾಗಿದ್ದು, ಗುಲ್ಬರ್ಗ ಸೇರಿದಂತೆ ಸುತ್ತಮುತ್ತಲಿನ ಜಿಲ್ಲೆಗಳ ರೈತರಿಗೆ ಸಮಯಕ್ಕೆ ಸರಿಯಾಗಿ ಬೀಜ ಸಂಸ್ಕರಿಸಿ ಬಿತ್ತನೆ ಬೀಜ ನೀಡಲು ಅನುಕೂಲವಾಗಲಿದೆ ಎಂದರು.
ಕರ್ನಾಟಕ ರಾಜ್ಯ ಬೀಜ ನಿಗಮ ನಿಯಮಿತ ಅಧಿಕಾರಿ, ಸಿಬ್ಬಂದಿಗಳು ಗುಲ್ಬರ್ಗದಲ್ಲಿ ಸ್ಥಾಪಿಸಿರುವ ಬೀಜ ಸಂಸ್ಕರಣ ಘಟಕದ ಕುರಿತು ರೈತರಿಗೆ ಮಾಹಿತಿ ತಲುಪಿಸುವ ಕೆಲಸ ಮಾಡಬೇಕು. ಸರಿಯಾದ ಸಮಯಕ್ಕೆ ಬಿತ್ತನೆ ಬೀಜಗಳನ್ನು ನೀಡುವ ವ್ಯವಸ್ಥೆ ಮಾಡಬೇಕೆಂದು ಸೂಚನೆ ನೀಡಿದರು.
ಮುಂಗಾರು ಮಳೆ ಆರಂಭವಾದ ತಕ್ಷಣ ರೈತರಿಗೆ ಸೂಕ್ತ ಸಮಯಕ್ಕೆ ಸಮರ್ಪಕ ಬೆಲೆಗೆ ಗುಣಮಟ್ಟದ ಬೀಜಗಳನ್ನು ಪೂರೈಕೆ ಮಾಡಲು ರಾಜ್ಯ ಸರ್ಕಾರ ರಾಜ್ಯದ ಎಲ್ಲಡೆ ಬೀಜಗಳ ಸಂಸ್ಕರಣ ಘಟಕ ಮತ್ತು ಗೋದಾಮು ಸ್ಥಾಪಿಸುತ್ತಿದೆ. ರೈತರು ಆರ್ಥಿಕವಾಗಿ ಮುಂದೆ ಬರಲು ಸೂಕ್ತ ಕ್ರಮ ಕೈಗೊಳ್ಳುತ್ತಿದೆ ಎಂದು ಹೇಳಿದರು.
ಹೊಸ ತೊಗರಿ ತಳಿ ರೈತರಿಗೆ ತಲುಪಿಲ್ಲ: ರಾಜ್ಯ ಸರ್ಕಾರ ತೊಗರಿ ಸೇರಿದಂತೆ ಇತರ ಬೆಳೆಗಳ ಸುಧಾರಿತ ಬೀಜ ತಳಿ ಸಂಶೋಧನೆ ಕೈಗೊಂಡು ಲೋಕಾರ್ಪಣೆ ಮಾಡಿದೆ. ಆದರೆ, ಆ ತಳಿಗಳ ಮಾಹಿತಿ ರೈತರಿಗೆ ತಲುಪಿಸುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ. ಸುಧಾರಿತ ಬೀಜಗಳ ತಳಿಗಳ ಮಾಹಿತಿ ನೀಡುವಲ್ಲಿ ಅಧಿಕಾರಿಗಳು ಮುಂದಾಗಬೇಕು ಎಂದರು.
19ರಂದು ಬೆಂಗಳೂರಿನಲ್ಲಿ ಎಲ್ಲ ವಿವಿ ಮುಖ್ಯಸ್ಥರ ಸಭೆ ಕರೆಯಲಾಗಿದ್ದು, ಹೊಸ ತಳಿಗಳ ಸಂಶೋಧನೆ ಕೈಗೊಳ್ಳುವ ಮಾರ್ಗೋಪಾಯಗಳ ಕುರಿತು ಹಾಗೂ ಸರ್ಕಾರ ಬಿಡುಗಡೆಗೊಳಿಸುವ ಅನುದಾನದ ಕುರಿತು ಚರ್ಚೆ ನಡೆಯಲಿದೆ ಎಂದರು.
ಜಿಪಂ ಅಧ್ಯಕ್ಷ ರಮೇಶ ಮರಗೋಳ, ಉಪಾಧ್ಯಕ್ಷ ಅನೀತಾ ಪವನಕುಮಾರ್ ವಳಕೇರಿ, ಕೃಷಿ ಮತ್ತು ಕೈಗಾರಿಕ ಸ್ಥಾಯಿ ಸಮಿತಿ ಅಧ್ಯಕ್ಷ ಬಸವರಾಜ ಮಾಲಿಪಾಟೀಲ್, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಸಿದ್ರಾಮಪ್ಪ ಪಾಟೀಲ್ ಧಂಗಾಪುರ, ರಾಜ್ಯ ಬೀಜ ನಿಗಮ ನಿಯಮಿತದ ನಿರ್ದೇಶಕ ಸಿದ್ದಲಿಂಗಪ್ಪ. ಟಿ.ಹೊಸಮನಿ, ಎಸ್.ರಾಜೇಂದ್ರ ಪ್ರಸಾದ, ಐ.ಎಸ್. ಪಾಟೀಲ್, ಕೆ.ಆನಂದ ಕೃಷ್ಣ, ವ್ಯವಸ್ಥಾಪಕ ಎಸ್.ಜಿ. ಚಿಮಕೋಡೆ, ಉಪ ಪ್ರಧಾನ ವ್ಯವಸ್ಥಾಪಕ ಜಿ.ಎಂ. ಬೊಮ್ಮಯ್ಯ, ಕೃಷಿ ಇಲಾಖೆಯ ಆಯುಕ್ತ ಡಾ. ಧರ್ಮರಾಜನ್ ಉಪಸ್ಥಿತರಿದ್ದರು.
ರೈತ ಗೀತೆ ಮರೆತ ಸಂಘಟಕರು: ವಿಳಂಬವಾಗಿ ಆರಂಭಗೊಂಡ ಸಮಾರಂಭದಲ್ಲಿ ಕೇವಲ ನಾಡಗೀತ ಹಾಡಲಾಯಿತು. ಆದರೆ, ರೈತರ ಕಾರ್ಯಕ್ರಮದಲ್ಲಿ ರೈತ ಗೀತೆಯೇ ಮರೆಯಲಾಯಿತು. ಘಟಕ ಉದ್ಘಾಟಿಸಿದ ಕೃಷಿ ಸಚಿವ ಕೃಷ್ಣ ಬೈರೇಗೌಡರ ಉದ್ಘಾಟನಾ ಭಾಷಣ ನಂತರ ರಾಜ್ಯ ಬೀಜ ನಿಗಮ ನಿಯಮಿತದ ಅಧಿಕಾರಿಗಳಾಗಲಿ, ಆಯುಕ್ತರಾಗಲಿ ಈ ಸಂಸ್ಕರಣ ಘಟಕದ ಸಂಪೂರ್ಣ ಮಾಹಿತಿ ನೀಡುವ ಗೋಜಿಗೆ ಹೋಗದೆ ಕಾರ್ಯಕ್ರಮ ಮೊಟಕುಗೊಳಿಸಿ ವಂದನೆ ಸಲ್ಲಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement