ಅತ್ಯಾಚಾರ ಆರೋಪಿ ಪ್ರೇಮ್ಸಿಂಗ್ ಬಂಧನ
ಚಿಂಚೋಳಿ: ಚಿಂಚೋಳಿ ತಾಲೂಕಿನ ಪಾಲತ್ಯಾ ತಾಂಡಾದ ಯುವತಿಯ ಮೇಲೆ ಅತ್ಯಾಚಾರ ನಡೆಸಿದ ಚೌಕಿ ತಾಂಡಾದ ಆರೋಪಿ ಪ್ರೇಮ್ಸಿಂಗ್(28)ನನ್ನು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಲಾಗಿದೆ ಎಂದು ಚಿಂಚೋಳಿ ಸಿಪಿಐ ಇಸ್ಮಾಯಿಲ್ ಶರೀಫ್ ತಿಳಿಸಿದರು.
ಪ್ರೇಮ್ಸಿಂಗ್ 20 ವರ್ಷದ ಯುವತಿಯನ್ನು ಬುಧವಾರ ಬೆಳಗ್ಗೆ ಒತ್ತಾಯವಾಗಿ ತನ್ನ ಮೋಟಾರ್ ಸೈಕಲ್ ಮೇಲೆ ಕರೆದುಕೊಂಡು ಹೋಗಿ, ತೊಗರಿ ಹೊಲದಲ್ಲಿ ಅತ್ಯಾಚಾರ ನಡೆಸಿದ್ದ. ಯುವತಿಯ ಚೀರಾಟ ಕೇಳಿದ ಪಕ್ಕದ ಹೊಲದಲ್ಲಿ ಕೆಲಸ ಮಾಡುತ್ತಿದ್ದ ಜನರು ಆರೋಪಿಯನ್ನು ಹಿಡಿದಿದ್ದಾರೆ ಎಂದರು.
ಇತ್ತ ವಿಷ ಸೇವಿಸಿ ತೀವ್ರ ಅಸ್ವಸ್ಥಗೊಂಡ ಯುವತಿಯನ್ನು ಚಿಂಚೋಳಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಗುಲ್ಬರ್ಗ ಜಿಲ್ಲಾ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಲಾಗಿದೆ ಎಂದರು.
ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ತನಿಖೆ ನಡೆಸಲಾಗಿದೆ. ಯುವತಿ ನೀಡಿದ ದೂರಿನ ಮೇರೆಗೆ ಚಿಂಚೋಳಿ ಠಾಣೆಯಲ್ಲಿ ಪಿಎಸ್ಐ ಶಿವಶಂಕರ ಸಾಹು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.
ಬಂಧಿತ ಆರೋಪಿಗೆ ಕಳೆದ ಏಪ್ರಿಲ್ನಲ್ಲಿ ಮದುವೆಯಾಗಿತ್ತು. ಇದೇ ಠಾಣೆಯ ವ್ಯಾಪ್ತಿಯಲ್ಲಿ ಚಿಮ್ಮನಚೋಡ ಗ್ರಾಮದ ಯುವತಿಯೊಬ್ಬಳು ಪೊಲೀಸ್ ಪೇದೆಯಿಂದ ಅತ್ಯಾಚಾರಕ್ಕೊಳಗಾಗಿದ್ದಳು.