ಕಾಮಗಾರಿ ಬಿಲ್ ಬಾಕಿ: ಗ್ರಾಮಸ್ಥರ ಆಕ್ರೋಶ
ಕನ್ನಡಪ್ರಭ ವಾರ್ತೆ ಶಹಾಪುರ ನ.17
'ಉದ್ಯೋಗ ಖಾತ್ರಿ ಯೋಜನೆ ಬಗ್ಗೆ ಉದ್ದುದ್ದ ಭಾಷಣ ಮಾಡ್ಬೇಡ್ರಿ. ಮೊದಲ 2012-13ರಲ್ಲಿ ಮಾಡಿದ ಕಾಮಗಾರಿಗಳ ಹಣ ಪಾವತಿ ಮಾಡ್ರಿ. ನಿಮ್ಮಾತು ಕೇಳಿ ಹೈರಾಣಾಗೀವಿ. ಪರಿಶೀಲ್ನಿ ಅದೂ ಇದೂ ಅಂತ ಹೇಳಿ ಬಿಲ್ ಪೆಂಡಿಗ್ ಇಟ್ಟೀರಿ. ಕೆಲ್ಸ ಎಲ್ಲ ಹಾಳ್ಯಾಗ್ಹೋಗ್ಯಾವೆ...'
ಹೈಯಾಳ(ಬಿ) ಹೋಬಳಿ ವ್ಯಾಪ್ತಿಯ ಕೊಳ್ಳೂರ, ಕೊಂಕಲ್, ಕಾಡಂಗೇರಾ, ಹತ್ತಿಗುಡೂರ ಪಂಚಾಯಿತಿ ವ್ಯಾಪ್ತಿಗೆ ಸಂಬಂಧಿಸಿದ ಖಾತ್ರಿ ಯೋಜನೆಯ ವೈಯಕ್ತಿಕ ಕಾಮಗಾರಿಗಳ ಅಭಿಯಾನ ಕಾರ್ಯಕ್ರಮದಲ್ಲಿ ಗ್ರಾಮಸ್ಥರು ಅಸಮಾಧಾನದಿಂದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಪರಿಯಿದು.
ಕಾರ್ಯಕ್ರಮದ ವೇದಿಕೆಯತ್ತ ದಿಢೀರ್ ಲಗ್ಗೆಯಿಟ್ಟ ಗ್ರಾಮಸ್ಥರು ಮುಖಂಡರು, ಮತ್ತು ಜಿಪಂ ಸಿಇಒ ಜಿಲಾನಿ ಅವರನ್ನು ಒಂದು ವರ್ಷದಿಂದ ಅಭಿವೃದ್ಧಿ ಕಾಮಗಾರಿ ಬಾಕಿ ಉಳಿದ ಬಗ್ಗೆ ಖಾತ್ರಿ ಯೋಜನೆ ಕಾರ್ಯಕ್ರಮದಲ್ಲಿ ಪ್ರಶ್ನಿಸಿದರು.
ಗ್ರಾಮದ ಅಭಿವೃದ್ಧಿ, ಬಡವರು, ಕೂಲಿಕಾರ್ಮಿಕರಿಗೆ ಯೋಜನೆ ಸಂಪೂರ್ಣ ಪ್ರಯೋಜನ ಲಭ್ಯವಾಗುತ್ತಿಲ್ಲ. ಎಲ್ಲೆಡೆ ಭ್ರಷ್ಟಾಚಾರ ತುಂಬಿದೆ. ಕೆಲವರು ಶಿಫಾರ್ಸಿನ ಮೇಲೆ ಬೋಗಸ್ ಕಾಮಗಾರಿ ಮಾಡಿ ಸರ್ಕಾರದ ಹಣ ಹೊಡೆಯುತ್ತಿದ್ದಾರೆ. ಇನ್ನು ನೆರವೇರಿಸಿದ ಕಾಮಗಾರಿಗಳ ಬಿಲ್ ಪೆಂಡಿಂಗ್ ಇಟ್ಟಿರುವುದರಿಂದ ಉಳಿದ ಅಭಿವೃದ್ಧಿ ಯೋಜನೆಗಳು ಸ್ಥಗಿತಗೊಂಡಿವೆ. ಈ ಹಿನ್ನೆಲೆಯಲ್ಲಿ ಶೀಘ್ರ ಬಾಕಿ ಇರುವ ಕಾಮಗಾರಿಗಳ ಬಿಲ್ ಬಿಡುಗಡೆಗೆ ಗ್ರಾಮಸ್ಥರು ಪಟ್ಟು ಹಿಡಿದರು. ಸಭೆ ಗೊಂದಲದ ಗೂಡಾಯಿತು.
ಈ ಸಂದರ್ಭ ಅಸಮಾಧಾನಗೊಂಡವರನ್ನು ಸಮಾಧಾನಪಡಿಸುವ ಅಧಿಕಾರಿಗಳು, ಮುಖಂಡರ ಪ್ರಯತ್ನ ಫಲ ನೀಡಲಿಲ್ಲ. ಅಸಮಾಧಾನ ಮಾತ್ರ ತಣ್ಣಗಾಗಲಿಲ್ಲ ನಂತರ ಮಾತನಾಡಿದ ಸಿಇಓ ಎಸ್.ಜಿಲಾನಿ 2012-13ನೇ ಸಾಲಿನಲ್ಲಿ ಸಣ್ಣಪುಟ್ಟ ದೋಷಗಳಾಗಿವೆ. ಆನ್‌ಲೈನ್ ವ್ಯವಸ್ಥೆಯಲ್ಲಿ ಎಂ.ಐ.ಎಸ್. ಹೊಂದಾಣಿಕೆಯಾಗದೆ ಹಲವು ನಿಯಮಗಳು ಮಾರ್ಪಾಡಾದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದಿಂದಲೇ ಅಡೆತಡೆಯಾಗಿದೆ. ಆದಷ್ಟು ಶೀಘ್ರವೇ 2012- 13ನೇ ಸಾಲಿನ ಖಾತ್ರಿ ಹಣ ಪಾವತಿಸಲು ಎಲ್ಲ ರೀತಿಯ ಪ್ರಯತ್ನ ನಡೆಸಲಾಗುವುದು. ಸರ್ಕಾರದ ಮೇಲಿನ ವಿಶ್ವಾಸದಿಂದ ಕೆಲಸ ಮುಂದುವರಿಸಿ ಎಂದು ಎಲ್ಲರನ್ನು ಸಮಾಧಾನಪಡಿಸಲು ಪ್ರಯತ್ನಿಸಿದರು.