'ಕೃಷಿ ಅರಿವು ಕಾರ್ಯಾಗಾರ ಸದುಪಯೋಗವಾಗಲಿ'
ಅಫಜಲ್ಪುರ: ರೈತರ ಸಲುವಾಗಿ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಈ ಯೋಜನೆಗಳ ಅರಿವು ರೈತರಲ್ಲಿ ಮೂಡಿಸುವ ಉದ್ದೇಶದಿಂದ ಅರಿವು ಮೂಡಿಸುವ ಕಾರ್ಯಾಗಾರಗಳು ಆಯೋಜಿಸಲಾಗುತ್ತಿದೆ. ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಶಾಸಕ ಮಾಲೀಕಯ್ಯ ಗುತ್ತೇದಾರ ಹೇಳಿದರು.
ತಾಲೂಕಿನ ಕರ್ಜಗಿಯ ಸಿದ್ದರಾಮ ಗುರುಬಾಳಪ್ಪ ಫರೀಟರವರ ತೋಟದ ಮನೆಯಲ್ಲಿ ನಡೆದ ತೋಟಗಾರಿಕೆ ಇಲಾಖೆ, ಅಫಜಲ್ಪುರದ ಎಕೆ ಟ್ರೇಡರ್ಸ್ ಆಶ್ರಯದಲ್ಲಿ 2013-14ನೇ ಸಾಲಿನ ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆಯ ಕಾರ್ಯಾಗಾರವನ್ನು ಸಸಿ ನೆಡುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ರೈತರು ತಮ್ಮ ಜಮೀನಿನಲ್ಲಿ ಹನಿ ನೀರಾವರಿ ಮುಖಾಂತರ ಕೃಷಿ ಅಧ್ಯಯನ ಸಂಶೋಧನೆ ಮಾಡುವ ಮೂಲಕ ಹೊಸ ಹೊಸ ತಂತ್ರಜ್ಞಾನ ಅಳವಡಿಸಿಕೊಂಡು ಉತ್ತಮ ಬೆಳೆ ಬೆಳೆಯಲು ಸಾಧ್ಯವಾಗುತ್ತದೆ. ಇನ್ನೂ ರೈತರು ಹೆಚ್ಚು ಸಾವಯವ ಕೃಷಿಯ ಕಡೆಗೆ ವಾಲಿಕೊಳ್ಳಬೇಕು. ಇದರಿಂದ ಇಳುವರಿ ಹೆಚ್ಚಳವಾಗುವುದಲ್ಲದೆ ಉತ್ತಮ ಬೆಲೆಯೂ ಸಿಗುತ್ತದೆ. ಆರೋಗ್ಯದ ದೃಷ್ಟಿಯಿಂದಲೂ ಸಾವಯವ ಕೃಷಿ ಉತ್ತಮವಾದದ್ದು ಎಂದು ಹೇಳಿದರು.
ತಾಲೂಕಿನಲ್ಲಿ ನೀರಾವರಿ ಕ್ಷೇತ್ರ ಬಹಳ ಕಡಿಮೆ ಇರುವುದರಿಂದ ನೀರಿನ ಅಭಾವದಿಂದ ರೈತರು ಜಮೀನಗಳಲ್ಲಿ ತೋಟಗಾರಿಕೆ ಬೆಳೆಗಳನ್ನು ಬೆಳೆಯಲು ಸಾಧ್ಯವಾಗುತ್ತಿಲ್ಲ. ಮುಂಬರುವ ದಿನಗಳಲ್ಲಿ ಕರ್ಜಗಿ, ಮಣ್ಣೂರ, ಮಾಶಾಳ, ಉಡಚಾಣ ಗ್ರಾಮಗಳು ಸೇರಿದಂತೆ ತಾಲೂಕಿನ ಇನ್ನುಳಿದ ಗ್ರಾಮಗಳಿಗೆ ಏತ ನೀರಾವರಿ ಮುಖಾಂತರ ನೀರಾವರಿ ಸೌಲಭ್ಯ ಒದಗಿಸಲಾಗುವುದೆಂದು ಭರವಸೆ ನೀಡಿದರು.
ಈಗಾಗಲೇ ತಾಲೂಕಿನಲ್ಲಿ 40 ಹೆಕ್ಟೇರ್ ಪ್ರದೇಶದಲ್ಲಿ ಸಮಗ್ರ ತೋಟಗಾರಿಕೆ ಬೆಳೆ ಬೆಳೆಯಲಾಗುತ್ತಿದೆ. ಬರುವ ದಿನಗಳಲ್ಲಿ ರೈತರು ಆಸಕ್ತಿ ತೋರಿಸಿದರೆ ಇನ್ನೂ 50 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಗಳನ್ನು ಬೆಳೆಯಲು ಅನುಕೂಲ ಮಾಡಿಕೊಡಲಾಗುವುದು ಎಂದರು.
ಹಿರಿಯ ತೋಟಗಾರಿಕೆ ನಿರ್ದೇಶಕ ಶಂಕರ ಪಟವಾರಿ, ಸಲಹೆಗಾರ ಡಾ.ಎನ್.ಎಸ್. ಪಡಶೆಟ್ಟಿ ಹನಿ ನೀರಾವರಿ ಕುರಿತು ರೈತರಿಗೆ ಮಾಹಿತಿ ನೀಡಿದರು.
ಬಿ.ವೈ. ಪಾಟೀಲ್, ವಿಶ್ವನಾಥ ರೇವುರ, ಸಿದ್ದು ಹಳಗೋಧಿ, ಗ್ರಾಪಂ ಅಧ್ಯಕ್ಷ ವಾಹೀದ್ ಪಾಶಾ ಜಮಾದಾರ, ರಮೇಶ ಬಾಕಿ, ಮುಖಂಡರಾದ ಭೀಮರಾಯಗೌಡ ಪಾಟೀಲ್, ರಾಜು ಬಂದಗಾರ, ಶಂಕ್ರ ಮೇತ್ರಿ, ಪಪ್ಪು ಪಟೇಲ್, ಸಿದ್ದಣಗೌಡ ಪಾಟೀಲ್, ಗೌಡಪ್ಪಗೌಡ ಪಾಟೀಲ್, ಗುರುಬಾಳ ಜಕಾಪುರ, ಸಿದ್ದಣಗೌಡ ರೇವುರ ಹಾಗೂ ಅಪ್ಪಾರಾವ್ ಅಕ್ಕಲಕೋಟೆ, ಬೀಜ ತಯಾರಕ ಬಸವರಾಜ, ರೈತರು ಪಾಲ್ಗೊಂಡಿದ್ದರು.
ಕಾರ್ಯಕ್ರಮದಲ್ಲಿ ಅಂಜು ಕುಲಕರ್ಣಿ ಸ್ವಾಗತಿಸಿ, ಪಾಂಡುರಂಗ ನಿರೂಪಿಸಿ, ವಂದಿಸಿದರು.