ನಕಲಿ ಬೀಜ ತಡೆಗೆ ಒತ್ತಾಯಿಸಿ ಸಚಿವರಿಗೆ ಮನವಿ
ಶಹಾಪುರ: ಅತಿವೃಷ್ಟಿ ಮತ್ತು ಅನಾವೃಷ್ಟಿಯಿಂದ ತೊಂದರೆಗೀಡಾಗುತ್ತಿರುವ ಶಹಾಪುರ, ಸುರಪುರ ಭಾಗದ ರೈತರು ಇತ್ತೀಚಿಗೆ ನಕಲಿ ಬೀಜಗಳ ಹಾವಳಿಯಿಂದ ಹಾನಿಗೊಳಗಾಗುತ್ತಿದ್ದು, ಕೃಷಿ ಸಚಿವರು ಈ ಕುರಿತು ಕಠಿಣ ನಿಲುವು ಕೈಗೊಳ್ಳಬೇಕೆಂದು ಶಹಾಪುರ ಮಾಜಿ ತಾಪಂ ಉಪಾಧ್ಯಕ್ಷ ಶಿವನಗೌಡ ಪಾಟೀಲ ಮದ್ರಿಕಿ ಮನವಿ ಮಾಡಿದರು. ಕೃಷಿ ಸಚಿವ ಕೃಷ್ಣೆ ಭೈರೆಗೌಡರಿಗೆ ಭೇಟಿಯಾಗಿ ಸನ್ಮಾನಿಸಿ ಮನವಿ ನೀಡಿ, ಯಾದಗಿರಿ ಜಿಲ್ಲೆ ವ್ಯಾಪ್ತಿಗೆ ಬರುವ ತಾಲೂಕಾಗಳಿಗೆ ಸಂಬಂಧಿಸಿದಂತೆ ಆಂಧ್ರ ಮೂಲದ ಕೆಲವೊಬ್ಬರು ನಕಲಿ ಬೀಜ ಸರಬರಾಜು ಮಾಡುತ್ತಿದ್ದು ನಮ್ಮ ಭಾಗದ ರೈತರು ಅವುಗಳನ್ನು ಖರೀದಿಸಿ ಮೋಸ ಹೋಗುತ್ತಿದ್ದಾರೆ. ಸಂಬಂಧಿಸಿದ ಕೃಷಿ ಇಲಾಖೆ ಅಧಿಕಾರಿಗಳು ಕಾಣದಂತಿದ್ದಾರೆ. ಜಲಾನಯನಕ್ಕೆ ಸಂಬಂಧಿಸಿದಂತೆ ಕಾಮಗಾರಿಗಳಿಗಾಗಿ ಅನುದಾನ ಕಡಿಮೆ ಇದ್ದು ಅದನ್ನು ಹೆಚ್ಚಿಸಿ ಅನುಕೂಲ ಕಲ್ಪಿಸಬೇಕೆಂದರು.