ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಬಸವಸಾಗರ ದಡದಲ್ಲಿ ದುಃಖಸಾಗರ

Mainashree
Updated On : 18 Nov 2013, 11:02 am

ಕ.ಪ್ರ. ವಾರ್ತೆ  ಗುಲ್ಬರ್ಗ/ಹುಣಸಗಿ  ನ.17
ಬೆಳಗಾವಿ ಜಿಲ್ಲೆಯ ರಸ್ತೆ ಅಪಘಾತದಲ್ಲಿ ಮೃತರಾದ ಯಾದಗಿರಿ ಜಿಲ್ಲೆ ಸುರಪುರ ತಾಲೂಕಿನ ಕೊಡೇಕಲ್ ಸುತ್ತಲಿನ ಉಪ್ಪಲದಿನ್ನಿ ಸೇರಿದಂತೆ ತಾಂಡಾಗಳ 22 ಜನರ ಪಾರ್ಥೀವ ಶರೀರಗಳ ಅಂತ್ಯ ಸಂಸ್ಕಾರ ಸಮೀಪದ ಬಸವಸಾಗರ ಜಲಾಶಯ ಮುಂಭಾಗದಲ್ಲಿರುವ ಖಾಲಿ ಸ್ಥಳದಲ್ಲಿ ಶನಿವಾರ ರಾತ್ರಿ ನಡೆಯಿತು.
  11 ವಯಸ್ಕರ ಪಾರ್ಥೀವ ಶರೀರಗಳಿಗೆ ಅಗ್ನಿಸ್ಪರ್ಶ ಮಾಡುವುದರ ಮೂಲಕ ಹಾಗೂ 8 ಮಕ್ಕಳ ಶವಗಳನ್ನು ಭೂಮಿ ತಾಯಿ ಮಡಿಲಲ್ಲಿ ಸಂಸ್ಕಾರ ಮಾಡುವ ಮೂಲಕ ಗುಳೆ ಹೊರಟಿದ್ದವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯ್ತು. ಈ ಸಂದರ್ಭದಲ್ಲಿ ಬಂಧುಗಳ ಆಕ್ರಂದನ ಮುಗಿಲು ಮುಟ್ಟಿತ್ತು. ಬಸವಸಾಗರದ ದಡದಲ್ಲಿ ದುಃಖ ಮಡುಗಟ್ಟಿತ್ತು.
22 ಜನರ ದುರ್ಮರಣ: ಶನಿವಾರ ಬೆಳಗ್ಗೆ ಬೆಳಗಾವಿ ಜಿಲ್ಲೆ ಹಲಕಿ ಕ್ರಾಸ್ ಬಳಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಸುರಪುರ ತಾಲೂಕಿನ ಉಪ್ಪಲದ್ದಿನ್ನಿ ತಾಂಡಾ, ಯರಿಕಿಹಾಳ, ಮಾವಿನಗಿಡ ತಾಂಡಾ, ಐಬಿ ತಾಂಡಾ, ಜುಮಾಲಪುರ ತಾಂಡಾಗಳ 22 ಜನ ದುರ್ಮರಣ ಹೊಂದಿದ್ದರು.
 ಅವರ ಪಾರ್ಥೀವ ಶರೀರಗಳನ್ನು ರಾತ್ರಿ 8ಕ್ಕೆ ಸಾರಿಗೆ ಸಂಸ್ಥೆ ಬಸ್ಸುಗಳ ಮೂಲಕ ನಾರಾಯಣಪುರಕ್ಕೆ ತರಲಾಯಿತು. ಈ ಮೊದಲೆ ಮಾಜಿ ಸಚಿವ ರಾಜುಗೌಡರ ನಿರ್ಣಯದಂತೆ ಹಾಗೂ ಮೃತರ ಬಂಧುಗಳ ಅಣತಿಯಂತೆ ಬಸವಸಾಗರ ಮುಂಭಾಗದಲ್ಲಿ ಸಾಮೂಹಿಕ ಅಂತ್ಯಸಂಸ್ಕಾರಕ್ಕೆ ಎಲ್ಲ ಸಿದ್ಧತೆಗಳನ್ನು ಮಾಡಲಾಗಿತ್ತು.
ಆಕ್ರಂದನ: ಶವಗಳನ್ನು ಮೊದಲು ಸಾಲಾಗಿ ಮಲಗಿಸಲಾಯಿತು. ಈ ಸಂದರ್ಭದಲ್ಲಿ ಮೃತರ ಸಂಬಂಧಿಗಳ ಆಕ್ರಂದನ ಮುಗಿಲು ಮುಟ್ಟಿತ್ತು. ಇದು ನೆರದಿದ್ದವರ ಮನಕಲುಕುವಂತಿಂತ್ತು. ನಂತರ ನಡೆದ ಶವಸಂಸ್ಕಾರ ಕ್ರಿಯೆಯಲ್ಲಿ ತಮ್ಮ ಸಂಪ್ರದಾಯದಂತೆ ಅಗ್ನಿ ಸ್ಪರ್ಶ ಮಾಡಿದರು.
ಪರಿಹಾರ ಮೊತ್ತ ಹೆಚ್ಚಿಸಲು ಧರಣಿ: ಇನ್ನು ಮಕ್ಕಳ ಶವಗಳನ್ನು ಹತ್ತಿರದಲ್ಲಿ ತೆಗೆಯಲಾಗಿದ್ದ ಕುಣಿಯಲ್ಲಿ ಸಂಸ್ಕಾರ ಮಾಡಲಾಯಿತು. ಇದಕ್ಕೂ ಪೂರ್ವದಲ್ಲಿ ಅಪಘಾತದಲ್ಲಿ ಮೃತಪಟ್ಟ ಸಂಬಂಧಿಗಳು ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ಕೆಲ ಸಮಯ ಧರಣಿ ನಡೆಸಿದರು. ಸರ್ಕಾರ ಘೋಷಿಸಿದ ಪರಿಹಾರ ಮೊತ್ತವನ್ನು ಹೆಚ್ಚಿಸಲು ಮೃತರ ಸಂಬಂಧಿಗಳು ಧರಣಿ ನಡೆಸಿದರು.
  ಈ ವೇಳೆ ಬಿಗಿಪೊಲೀಸ್ ಬಂದೋಬಸ್ತ್ ನಡುವೆ ಅಧಿಕಾರಿಗಳು ಧರಣಿನಿರತರ ಮನವೊಲಿಸಲು ಯತ್ನಿಸಿದರೂ ಸಫಲವಾಗದಿದ್ದಾಗ ಮಾಜಿ ಸಚಿವ ರಾಜುಗೌಡ ಸ್ಥಳಕ್ಕೆ ಆಗಮಿಸಿ ಸರ್ಕಾರ ಘೋಷಿಸಿದ ಪರಿಹಾರ ಮೊತ್ತವನ್ನು ಹೆಚ್ಚಿಸಲು ಸರ್ಕಾರಕ್ಕೆ ತಿಳಿಸುವುದಾಗಿ ಹೇಳಿ ಮನವೊಲಿಸಿ ಮುಂದಿನ ಕ್ರಿಯೆಗೆ ಅನುವು ಮಾಡಿಕೊಟ್ಟರು.
  ಮಾಜಿ ಸಚಿವ ರಾಜುಗೌಡ ಸೇರಿದಂತೆ ಎಚ್.ಸಿ. ಪಾಟೀಲ, ಬಿ.ಎಂ. ಅಳ್ಳಿಕೋಟೆ, ನಾರಾಯಣಪುರ ಗ್ರಾಮದ ಪ್ರಮುಖರು, ಬಂಜರಾ ಸಮುದಾಯದ ಪ್ರಮುಖರು, ಸುತ್ತಮುತ್ತಲಿನ ಗ್ರಾಮದ ಪ್ರಮುಖರು ಮತ್ತು ತಹಸೀಲ್ದಾರ್ ಅರುಣ ಕುಮಾರ ಕುಲಕರ್ಣಿ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದರು.
  ಅಪಾರ ಸಂಖ್ಯೆಯಲ್ಲಿ ನೆರದಿದ್ದ ಮೃತರ ಸಂಬಂಧಿಗಳು, ಸಾರ್ವಜನಿಕರು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು. ಹುಣಸಗಿ ಸಿಪಿಐ ನೇತೃತ್ವದಲ್ಲಿ ಕೊಡೇಕಲ್ ಪಿಎಸ್‌ಐ, ಸಿಬ್ಬಂದಿ ಪೊಲೀಸ್ ಬಂದೋಬಸ್ತ್ ಒದಗಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement