ಸಪ್ತ ನಿರ್ಣಯ ಈಡೇರಿಕೆಗೆ ಸಮ್ಮೇಳನದ ಹಕ್ಕೊತ್ತಾಯ
ಯಾದಗಿರಿ: ಜಿಲ್ಲಾ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾನುವಾರ ಪ್ರಮುಖ 7 ನಿರ್ಣಯಗಳನ್ನು ಮಂಡಿಸಿ, ಈಡೇರಿಕೆಗಾಗಿ ಸರ್ಕಾರವನ್ನು ಸಮ್ಮೇಳನದ ಮೂಲಕ ಒತ್ತಾಯಿಸಲಾಯಿತು.
ಜಿಲ್ಲಾ ಕಸಾಪ ಅಧ್ಯಕ್ಷತೆಯಲ್ಲಿ ನಡೆದ ಬಹಿರಂಗ ಸಮಾರಂಭದಲ್ಲಿ ಗೌರವ ಕಾರ್ಯದರ್ಶಿ ಡಾ. ಸುಭಾಶ್ಚಂದ್ರ ಕೌಲಗಿಯವರು 7 ಪ್ರಮುಖ ನಿರ್ಣಯಗಳನ್ನು ಮಂಡಿಸಿದರು.
1 ಯಾದಗಿರಿ ಶೈಕ್ಷಣಿಕವಾಗಿ ಸಾಕಷ್ಟು ಹಿಂದುಳಿದಿದ್ದು, ಯಾದಗಿರಿಯಲ್ಲಿ ವಿಶ್ವವಿದ್ಯಾನಿಲಯ ಸ್ಥಾಪಿಸಬೇಕು.
2 ಕರ್ನಾಟಕ ಸಾಂಸ್ಕೃತಿಕ ನೀತಿಯಲ್ಲಿ ಹೈದ್ರಾಬಾದ್ ಕರ್ನಾಟಕ ಭಾಗಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡಬೇಕು.
3 ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಒಳಗೊಂಡಂತೆ ಸರ್ಕಾರದಿಂದ ನೀಡುವ ಎಲ್ಲ ಪ್ರಶಸ್ತಿಗಳಲ್ಲಿ ಜಿಲ್ಲೆಗೂ ಪ್ರಾತಿನಿಧ್ಯ ನೀಡಬೇಕು.
4 ರಾಜ್ಯದ ವಿವಿಧ ಅಕಾಡಮಿಗಳಿಗೆ ಶೀಘ್ರ ನೇಮಕ ಮಾಡಬೇಕು, ನೇಮಕಗಳಲ್ಲಿ ನಮ್ಮ ಭಾಗಕ್ಕೆ ಹೆಚ್ಚಿನ ಪ್ರಾತಿನಿಧ್ಯ ನೀಡಬೇಕು.
5 ಬಸವಸಾಗರ ಜಲಾಶಯದ ನೀರು ಕೊನೆಯಂಚಿನ ರೈತರಿಗೂ ತಲುಪಿಸಬೇಕು, ಯಾದಗಿರಿ ತಾಲೂಕಿನ ಎಲ್ಲ ಕೆರೆಗಳ ಹೂಳನ್ನು ಎತ್ತಿಸಿ ನೀರಾವರಿಗೆ ಅನಕೂಲ ಮಾಡಿಕೊಡಬೇಕು.
6 ಜಿಲ್ಲೆಯಲ್ಲಿ ತಾಲೂಕು ಪುನರ್ ವಿಂಗಡಣೆ ಮಾಡಿ, ಇನ್ನೂ 3-4 ತಾಲೂಕುಗಳನ್ನು ಶೀಘ್ರವೇ ರಚಿಸಬೇಕು.
7 ನಮ್ಮ ನಗರವನ್ನು ಈವರಿಗೆ ಯಾದಗಿರ್ ಎಂದು ಸರ್ಕಾರಿ ದಾಖಲೆಗಳಲ್ಲಿ ಬಳಸುತ್ತಿದ್ದು, ಅದನ್ನು ಯಾದಗಿರಿ ಎಂದು ಮಾರ್ಪಾಡಿಸಲು ಸರ್ಕಾರಕ್ಕೆ ಒತ್ತಾಯಿಸಲಾಯಿತು.
ಈ ವೇಳೆ ಯಾದಗಿರಿ ಕಸಾಪ ತಾಲೂಕು ಅಧ್ಯಕ್ಷ ಶ್ರೀನಿವಾಸ ಕಲರ್, ಸುರಪುರ ಕಸಾಪ ಅಧ್ಯಕ್ಷ ಶಾಂತಪ್ಪ ಬೂದಿಹಾಳ, ಶಹಾಪುರ ಕಸಾಪ ಅಧ್ಯಕ್ಷ ಸಿದ್ದಲಿಂಗಪ್ಪ ಆನೆಗುಂದಿ ಮತ್ತು ಗುರುಮಠಕಲ್ ವಲಯ ಕಸಾಪ ಅಧ್ಯಕ್ಷ ಡಾ. ಭೀಮಾಶಂಕರ ಉಪಸ್ಥಿತರಿದ್ದರು.