371(ಜೆ) ವಿಧಿಗೆ ಬಲಿಷ್ಠ ಕಾನೂನು ರಚನೆಯಾಗಲಿ: ಡಾ.ರಾಜು ಆಗ್ರಹ
ಕನ್ನಡಪ್ರಭ ವಾರ್ತೆ ಗುಲ್ಬರ್ಗ ನ.18
ಹೈ-ಕ ಪ್ರದೇಶದ ಅಭಿವೃದ್ಧಿಗೆ ಪೂರಕವಾಗಿರುವ ಸಂವಿಧಾನದ 371ನೇ (ಜೆ) ವಿಧಿಗೆ ಸಂವಿಧಾನದ ಬದ್ಧವಾದ ಬಲಿಷ್ಠ ಕಾನೂನು ರಚನೆ ಮಾಡಬೇಕು ಎಂದು ಹೈ-ಕ ಯುವ ಹೋರಾಟ ಸಮಿತಿ ಅಧ್ಯಕ್ಷ ಡಾ.ರಾಜು ಕುಳಗೇರಿ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 371ನೇ (ಜೆ) ವಿಧಿಗೆ ನಿಯಮಾವಳಿ ರೂಪಿಸುವಲ್ಲಿ ಸಣ್ಣಪುಟ್ಟ ದೋಪದೋಷಗಳಾಗಿವೆ. ಅವುಗಳನ್ನು ಸರಿಪಡಿಸಿ ಬರುವ ಅಧಿವೇಶನದಲ್ಲಿ ಕಾನೂನು ಉಲ್ಲಂಘನೆ ಆಗದಂತೆ ಬಲಿಷ್ಠ ಕಾನೂನು ರಚನೆ ಮಾಡಬೇಕು ಎಂದು ಆಗ್ರಹಿಸಿದರು.
ವಿದರ್ಭ ಮತ್ತು ತೆಲಂಗಾಣ ವಿಶೇಷ ಸ್ಥಾನಮಾನಗಳ ಎರಡು ಮಾದರಿಯಂತೆಯೇ ಕರ್ನಾಟಕ ರಾಜ್ಯದಲ್ಲಿ 371 (ಜೆ) ವಿಧಿ ನೀಡಲಾಗಿದೆ. ವಿದರ್ಭ ಮತ್ತು ತೆಲಂಗಾಣ ವಿಶೇಷ ಸ್ಥಾನಮಾನ ಕಲ್ಪಿಸಿದರೂ ಸಹ ಅಲ್ಲಿ ಅವುಗಳ ಸಮರ್ಪಕವಾಗಿ ಅನುಷ್ಠಾನಗೊಳ್ಳುವಲ್ಲಿ ವಿಫಲವಾಗಿವೆ. ನಮ್ಮ ರಾಜ್ಯದಲ್ಲಿಯೂ ಹಾಗಾದಂತೆ ನೋಡಿಕೊಳ್ಳಬೇಕಾಗಿದೆ ಎಂದರು.
ವಿದರ್ಭ ಮತ್ತು ತೆಲಂಗಾಣ ವಿಶೇಷ ಸ್ಥಾನಮಾನಗಳ ಮಾದರಿಯೇ ಯಥಾವತ್ತಾಗಿ ರಾಜ್ಯದಲ್ಲಿ 371ನೇ (ಜೆ) ಅನುಷ್ಠಾನಗೊಳಿಸಲಾಗುತ್ತಿದೆ. ಕೂಡಲೇ ರಾಜ್ಯ ಸರ್ಕಾರ ಬರುವ ಅಧಿವೇಶನದಲ್ಲಿ ಭವಿಷ್ಯದಲ್ಲಿ ತಪ್ಪುಗಳು ಆಗದಂತೆ ಬಲಿಷ್ಠ ಕಾನೂನು ರಚನೆ ಮಾಡಬೇಕು. ಇಲ್ಲವಾದರೆ ಬರುವ 5 ವರ್ಷಗಳ ನಂತರ ಮತ್ತೆ ರಾಜ್ಯದಲ್ಲಿ ಪ್ರತ್ಯೇಕ ರಾಜ್ಯದ ಕೂಗು ಏಳಬಹುದು ಎಂದು ಎಚ್ಚರಿಕೆ ಸಹ ಅವರು ನೀಡಿದರು.
371ನೇ (ಜೆ) ನಿಯಾಮಾವಳಿ ಸಮಿತಿ ಸದಸ್ಯರಾದ ಈ ಭಾಗದ ಸಚಿವರಾದ ಖಮರುಲ್ ಇಸ್ಲಾಂ ಮತ್ತು ಡಾ. ಶರಣಪ್ರಕಾಶ ಪಾಟೀಲ್ ಅವರ ಬಳಿ ನಿಯೋಗ ತೆರಳಿ ಅಧಿವೇಶನದಲ್ಲಿ ಸಂವಿಧಾನಬದ್ಧ ಕಾನೂನು ರೂಪಿಸಬೇಕು ಎಂದು ಒತ್ತಾಯಿಸಲಾಗುವುದು ಎಂದರು.
ರಾಜ್ಯದ ಪ್ರತಿಯೊಂದು ಜಿಲ್ಲಾ, ತಾಲೂಕು ಕೇಂದ್ರಗಳಲ್ಲಿ ಉದ್ಯೋಗ ವಿನಿಮಿಯ ಕೇಂದ್ರ ಕಚೇರಿ ಸ್ಥಾಪಿಸಿ ಅಲ್ಲಿ ಉದ್ಯೋಗಾಂಕ್ಷಿಗಳ ಹೆಸರು ನೋಂದಾಯಿಸಿ ಆ ಮೂಲಕ ದಾಖಲಾತಿಗಳು ಪರಿಶೀಲಿಸಬೇಕು. ದಾಖಲಾತಿಗಳನ್ನು ತಿರುಚಿ ಹುದ್ದೆಗಳ ನೀಡುವ ಅಧಿಕಾರಿಗಳಿಗೆ ಶಿಕ್ಷೆ ವಿಧಿಸುವ ಕಾನೂನು ರಚನೆ ಮಾಡಬೇಕು, ಡಾ. ನಂಜುಂಡಪ್ಪ ವರದಿ ಆಧಾರದ ಮೇಲೆ ಪ್ರತಿ ವರ್ಷ ಹೈ-ಕ ಪ್ರದೇಶಾಭಿವೃದ್ಧಿ ಮಂಡಳಿಗೆ 2000 ಸಾವಿರ ಕೋಟಿ ಬಜೆಟ್ನಲ್ಲಿ ಮೀಸಲಿಡಬೇಕು. ಶಿಕ್ಷಣ ಮತ್ತು ಉದ್ಯೋಗ ಕಲ್ಪಿಸುವಲ್ಲಿ ಕಡ್ಡಾಯವಾಗಿ ಪಡಿತರ ಚೀಟಿ ಅಥವಾ ಜಮೀನು ಪಹಣಿ ನೀಡಬೇಕು ಎಂದು ಡಾ.ರಾಜು ಕುಳಗೇರಿ ಸರ್ಕಾರಕ್ಕೆ ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಎಂ.ಎಸ್. ಪಾಟೀಲ್ ನರಿಬೋಳ ಇದ್ದರು.