ಅದ್ಧೂರಿ ಕನಕ ಜಯಂತಿ ಆಚರಣೆಗೆ ನಿರ್ಧಾರ
ಕನ್ನಡಪ್ರಭ ವಾರ್ತೆ ಟಿ ಗುಲ್ಬರ್ಗ ಟಿ ನ.18
ನಗರದಲ್ಲಿ ಭಕ್ತ ಶ್ರೇಷ್ಠ ಕನಕದಾಸರ ಜಯಂತಿಯನ್ನು ನ.20ರಂದು ಸಂಭ್ರಮದಿಂದ ಆಚರಿಸಲು ಜಿಲ್ಲಾಧಿಕಾರಿ ಎನ್.ವಿ. ಪ್ರಸಾದ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಕನಕದಾಸರ ಜಯಂತಿ ಆಚರಣೆ ಸಮಿತಿ ಸಭೆಯು ತೀರ್ಮಾನಿಸಿತು.
ಅಂದು ಬೆ.10ರಿಂದ ಮ.1.30ರವರೆಗೆ ನಗರೇಶ್ವರ ಬಾಲವಿಕಾಸ ಮಂದಿರದಿಂದ ಡಾ. ಪಂಡಿತ ರಂಗಮಂದಿರವರೆಗೆ ಕನಕದಾಸರ ಭಾವಚಿತ್ರ ಮೆರವಣಿಗೆ ಕೈಗೊಳ್ಳಲು ಸಂಬಂಧಿಸಿದ ಅಧಿಕಾರಿಗಳು ಸಿದ್ಧತೆ ಕೈಗೊಳ್ಳಬೇಕು. ಮೆರವಣಿಗೆಯಲ್ಲಿ ತೋಟಗಾರಿಕೆ, ಪಪೂ ಶಿಕ್ಷಣ ಇಲಾಖೆ ಮತ್ತು ಈಶಾನ್ಯ ಸಾರಿಗೆ ಸಂಸ್ಥೆಯು ದಾಸರ ಸಂದೇಶ ಸಾರುವಂತಹ ಸ್ತಬ್ಧಚಿತ್ರಗಳು, ಡೊಳ್ಳು ತಂಡಗಳು ಮತ್ತು ಸ್ತ್ರೀಶಕ್ತಿ ಗುಂಪುಗಳಿಂದ ಕುಂಭಮೇಳದೊಂದಿಗೆ ಹಾಜರಾಗುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಜಯಂತಿ ದಿನದಂದು ಶಾಲಾ-ಕಾಲೇಜುಗಳು ಅಂದು ತಮ್ಮ ಶಾಲೆಗಳಲ್ಲಿ ಜಯಂತಿ ಆಚರಿಸಿ ತದನಂತದ ರಂಗಮಂದಿರದಲ್ಲಿ ಮ.2ಕ್ಕೆ ಜರುಗುವ ಉದ್ಘಾಟನಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಎಲ್ಲ ಶಿಕ್ಷಕರು ಹಾಜರಾಗುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಕ್ರಮ ಕೈಗೊಳ್ಳಬೇಕೆಂದು ಹೇಳಿದರು. ಉದ್ಘಾಟನಾ ಕಾರ್ಯಕ್ರಮದಲ್ಲಿ ನಾಡಗೀತೆ, ರೈತಗೀತೆಯೊದಿಗೆ ಕನಕದಾಸರ ಕೀರ್ತನೆಗಳನ್ನು ಹಾಡಿಸುವ ವ್ಯವಸ್ಥೆ ಮಾಡಿಸಬೇಕು. ಕಾರ್ಯಕ್ರಮ ಸ್ಥಳದಲ್ಲಿ ಸ್ವಚ್ಛತೆ, ಕುಡಿವ ನೀರಿನ ಸೌಲಭ್ಯ ಒದಗಿಸುವಂತೆ ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಸೂಚಿಸಲಾಯಿತು. ಪೊಲೀಸ್ ಇಲಾಖೆ ಸೂಕ್ತ ಭದ್ರತೆ ನೀಡಲು ಪೊಲೀಸ್ ಉಪಾಧೀಕ್ಷರಿಗೆ ತಿಳಿಸಿದರು.