ಇಂದು ತಾಲೂಕು ಆಡಳಿತದಿಂದ ಕನಕ ಜಯಂತಿ
ಚಿಂಚೋಳಿ: ತಾಲೂಕು ಆಡಳಿತ ವತಿಯಿಂದ ನ.20ರಂದು ಆಚರಿಸುತ್ತಿರುವ ಭಕ್ತ ಕನಕದಾಸರ ಜಯಂತಿಗೆ ತಾಲೂಕಿನ ಕುರುಬ ಸಮಾಜ ಮುಖಂಡರು ಭಾಗವಹಿಸುತ್ತಿಲ್ಲ ಎಂದು ಕರ್ನಾಟಕ ಪ್ರದೇಶ ಕುರುಬರ ಸಂಘದ ತಾಲೂಕು ಅಧ್ಯಕ್ಷ ರೇವಣಸಿದ್ದಪ್ಪ ಅಣಕಲ್ ತಿಳಿಸಿದ್ದಾರೆ.
ತಾಲೂಕು ಕುರುಬರ ಸಂಘದ ಅಧ್ಯಕ್ಷ ಮಲಕಪ್ಪ ಬಿರಾಪುರ ಅಧ್ಯಕ್ಷತೆಯಲ್ಲಿ ಸಭೆ ಸೇರಿ ತಾಲೂಕು ಆಡಳಿತ ವತಿಯಿಂದ ಭಕ್ತ ಕನಕದಾಸರ ಜಯಂತಿ ಆಚರಣೆ ಬಗ್ಗೆ ಪೂರ್ವಭಾವಿ ಸಭೆ ಕರೆಯುವಂತೆ ಅನೇಕ ಸಲ ತಹಸೀಲ್ದಾರರಿಗೆ ಮೌಖಿಕವಾಗಿ ತಿಳಿಸಲಾಗಿದೆ. ಆದರೆ, ತಾಲೂಕಿನ ಯಾವುದೇ ಇಲಾಖೆ ಅಧಿಕಾರಿಗಳಿಗೆ ಭಕ್ತ ಕನಕದಾಸರ ಜಯಂತಿ ಅದ್ಧೂರಿ ಆಚರಣೆ ಬಗ್ಗೆ ಪ್ರಚಾರ ಕೈಕೊಳ್ಳದೆ ದಾಸ ಶ್ರೇಷ್ಠ ಭಕ್ತ ಕನಕದಾಸರನ್ನು ಅವಮಾನಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಕುರುಬ ಸಮಾಜದ ಗಣ್ಯರ ಮಾತಿಗೆ ಬೆಲೆ ಕೊಡದಿರುವುದರಿಂದ ಕನಕದಾಸರ ಜಯಂತಿ ದಿನದಂದು ಭಾಗವಹಿಸದಂತೆ ಸಭೆಯಲ್ಲಿ ನಿರ್ಣಯ ಕೈಕೊಳ್ಳಲಾಗಿದೆ ಎಂದು ರೇವಣಸಿದ್ದಪ್ಪ ಅಣಕಲ್ ತಿಳಿಸಿದ್ದಾರೆ.
ಹಣಮಂತ ಪೂಜಾರಿ, ಮಲ್ಲಿಕಾರ್ಜುನ ಸಕ್ರಿ, ನರಸಪ್ಪ ಕುಪನೂರ, ಜಗನ್ನಾಥ ತಳವಾರ, ಶರಣಪ್ಪ ಅಣವಾರ, ಶಿವಕುಮಾರ್ ಪಸ್ತಪುರ, ರಾಮಣ್ಣ ರುಸ್ತಂಪುರ, ಜಗನ್ನಾಥ ಮಾಡಗಿ, ಶಂಕರ ಐನೋಳಿ, ರವಿ ಕುಂಚಾವರಂ, ರಾಜೇಂದ್ರ ದೇಗಲಮಡಿ, ಜಗನ್ನಾಥ ಪೂಜಾರಿ ತೇಗಲತಿಪ್ಪಿ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿದ್ದರು.