ಇಂದು ದಲಿತ ಸೇನೆ ಪ್ರತಿಭಟನೆ
ಆಳಂದ: ಪ್ರತಿಯೊಂದು ಹಳ್ಳಿಯಲ್ಲಿ ದಲಿತರಿಗೆ ಸ್ಮಶಾನ ಭೂಮಿ ಒದಗಿಸಬೇಕೆಂಬುದು ಸೇರಿದಂತೆ ಇತರ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ನ.19ರಂದು ತಾಲೂಕು ದಲಿತ ಸೇನೆಯ ಆಶ್ರಯದಲ್ಲಿ ಪ್ರತಿಭಟನಾ ಮೆರವಣಿಗೆಯೊಂದಿಗೆ ತಹಸೀಲ್ದಾರ್ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಸೇನೆ ತಿಳಿಸಿದೆ. ಈ ಕುರಿತು ಪ್ರಕಟಣೆ ನೀಡಿರುವ ಸೇನೆಯ ತಾಲೂಕಾಧ್ಯಕ್ಷ ಮಲ್ಲಿಕಾರ್ಜುನ ಬೋಳಣಿ ಅವರು, ತಾಲೂಕಿನ 129 ಗ್ರಾಮದ ಪೈಕಿ ಕೇವಲ 10 ಗ್ರಾಮದಲ್ಲಿ ಮಾತ್ರ ದಲಿತರಿಗೆ ತಮ್ಮದೇಯಾದ ಸ್ಮಶಾನ ಭೂಮಿಯಿದ್ದು, ಉಳಿದ ಕಡೆ ಸ್ಮಶಾನಭೂಮಿಯಿಲ್ಲದೆ ಶವಸಂಸ್ಕಾರಕ್ಕೆ ತೊಂದರೆ ಅನುಭವಿಸುತ್ತಿದ್ದಾರೆ. ಸರ್ಕಾರಿ ಗೌಠಾಣ ಜಮೀನು ಉಳುಮೆ ಮಾಡುತ್ತಿರುವ ದಲಿತರಿಗೆ ಹಕ್ಕು ಪತ್ರಗಳನ್ನು ನೀಡಬೇಕೆಂಬ ಬೇಡಿಕೆಗಾಗಿ ಸೇನೆಯ ರಾಜ್ಯ ಮುಖಂಡ ಹನುಮಂತ ಯಳಸಂಗಿ ನೇತೃತ್ವದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಶೋಷಿತ ಜನರ ಬಗ್ಗೆ ಕಾಳಜಿಯುಳ್ಳ ಎಲ್ಲರೂ ನ್ಯಾಯಯುತ ಈ ಹೋರಾಟದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದ್ದಾರೆ.