ಇಂದು ವಿದ್ಯುತ್ ಪೂರೈಕೆ ವ್ಯತ್ಯಯ
ಗುಲ್ಬರ್ಗ: ಜೆಸ್ಕಾಂ ವ್ಯಾಪ್ತಿಯ 220 ಕೆವಿ ಕಪನೂರ ವಿತರಣಾ ಕೇಂದ್ರದಿಂದ ಹೊರಹೋಗುವ 110 ಕೆವಿ ಆಳಂದ ಮಾರ್ಗದ ಸುಧಾರಣೆ ಕೆಲಸ ಕೈಗೊಂಡಿರುವ ಪ್ರಯುಕ್ತ ಆಳಂದ ಉಪ ವಿತರಣಾ ಕೇಂದ್ರದ ವ್ಯಾಪ್ತಿಯ ಆಳಂದ ಪಟ್ಟಣ, ಭೂಸನೂರ, ಕೊರಳ್ಳಿ ಸೇರಿದಂತೆ 33 ಕೆವಿ ತಡಕಲ್, 33 ಕೆವಿ ಖಜೂರಿ, 33 ಕೆವಿ ಸರಸಂಬಾ, 33 ಕೆವಿ ಜಿಡಗಾ ಮತ್ತು 33 ಕೆವಿ ಮಾದನಹಿಪ್ಪರಗಾ ಉಪ ವಿತರಣಾ ಕೇಂದ್ರಗಳ ವ್ಯಾಪ್ತಿಯ ಎಲ್ಲ ಗ್ರಾಮಗಳಿಗೆ ನ.19ರಂದು ಬೆ.6ರಿಂದ ಸಂಜೆ 6ರವರೆಗೆ ವಿದ್ಯುತ್ ಸರಬರಾಜು ಇರುವುದಿಲ್ಲ. ಗ್ರಾಹಕರು ಜೆಸ್ಕಾಂನೊಂದಿಗೆ ಸಹಕರಿಸುವಂತೆ ಜೆಸ್ಕಾಂ ಕೋರಿದೆ.ಅದೇ ರೀತಿ ಜೆಸ್ಕಾಂ ವ್ಯಾಪ್ತಿಯ ಗುಲ್ಬರ್ಗ ನಗರದ 110/33 ಕೆವಿ ದಕ್ಷಿಣ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತುರ್ತು ದುರಸ್ತಿ ಕಾರ್ಯ ಪ್ರಯುಕ್ತ ನ.19ರಂದು ಬೆ.11ರಿಂದ ಮ.3ರವರೆಗೆ ನೃಪತುಂಗ, ಕೆಎಚ್ಬಿ ಮತ್ತು ಆಲ್ ಇಂಡಿಯಾ ರೇಡಿಯೋ ಸ್ಟೇಷನ್ ಫೀಡರ್ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದ್ದು, ಗ್ರಾಹಕರು ಜೆಸ್ಕಾಂನೊಂದಿಗೆ ಸಹಕರಿಸಲು ಗುಲ್ಬರ್ಗ ನಗರ ಕಾರ್ಯ ಮತ್ತು ಪಾಲನೆ ವಿಭಾಗದ ಕಾರ್ಯನಿರ್ವಾಹಕ ಎಂಜಿನೀಯರ್(ವಿ) ಕೋರಿದ್ದಾರೆ.
ಬಾಗಿಲು ತೆರೆಯದ ಅಂಗನವಾಡಿ
ಶಹಾಪುರ: ತಾಲೂಕಿನ ನಾಗನಟಿಗಿ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಢೋಂಗ್ರೆನಾಯಕ ತಾಂಡಾ ನಂ. 3ರಲ್ಲಿ ಅಂಗನವಾಡಿ ಕೇಂದ್ರದ ಮುಖ್ಯಸ್ಥರು ಸರ್ಕಾರದ ಯೋಜನೆಗಳನ್ವಯ ಕರ್ತವ್ಯ ನಿರ್ವಹಿಸದೆ ಮನಸ್ಸಿಗೆ ಬಂದಾಗ ಕೇಂದ್ರ ತೆರೆಯುತ್ತಾರೆ.ಅಲ್ಲಿನ ಮುಗ್ಧ ಮಕ್ಕಳಿಗೆ ಸರಿಯಾದ ಸೌಲಭ್ಯ ನೀಡುತ್ತಿಲ್ಲ ಎಂದು ಕರುನಾಡು ಸೇನೆಯ ಜಿಲ್ಲಾಧ್ಯಕ್ಷ ಗುರುರಾಜ ಯಕ್ಚಿಂತಿ ಆರೋಪಿಸಿ ಮೇಲಾಧಿಕಾರಿಗಳಿಗೆ ದೂರು ನೀಡಿದ್ದಾರೆ.ಈ ಕುರಿತು ತಿಳಿಸಿರುವ ಅವರು, ಮಕ್ಕಳಿಗೆ ಸರಿಯಾದ ಆಹಾರ ನೀಡುತ್ತಿಲ್ಲ. ತಾಂಡಾದ ಜನತೆಗೆ ಅಂಗನವಾಡಿಯಿಂದ ಸಿಗಬೇಕಾದ ನೆರವು ದೊರಕಿಸಿಕೊಡುವಲ್ಲಿ ವಿಫಲರಾಗಿದ್ದಾರೆ. ಏನೇ ಕೇಳಿದರೂ ನಮಗೆ ಸಂಬಂಧವಿಲ್ಲವೆಂದು ಹೇಳುತ್ತಾರೆ. ಅಂಗನವಾಡಿ ಕೇಂದ್ರವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ಈ ಕುರಿತು ಸಂಬಂಧಿಸಿದ ಸಿಡಿಪಿಓ ತಕ್ಷಣವೇ ಪರಿಶೀಲಿಸಬೇಕೆಂದು ಯಕ್ಚಿಂತಿ ಆಗ್ರಹಿಸಿದ್ದಾರೆ.