ಕರವೇ ಪಂಚ ಉತ್ಸವ
ಕನ್ನಡಪ್ರಭ ವಾರ್ತೆ ಟಿ ಗುಲ್ಬರ್ಗ ಟಿ ನ.18
ಹೈ.ಕ. ಭಾಗದಲ್ಲಿ ಸಂಗೀತ, ಸಾಹಿತ್ಯ, ನೃತ್ಯ, ಕಲೆ, ಕ್ರೀಡೆ ಮತ್ತು ಸಾಂಸ್ಕೃತಿಕ, ಜಾನಪದ ವೈಭವಗಳ ಸಂಗಮಗೊಳಿಸಲು ಕರವೇ (ಶಿವರಾಮೆಗೌಡ, ಪ್ರವೀಣಶೆಟ್ಟಿ ಬಣ) ಪಂಚ ಉತ್ಸವಗಳನ್ನು ಆಯೋಜಿಸಲು ನಿರ್ಧರಿಸಿದೆ.
ನ.20ರಂದು ಯಾದಗಿರಿ ಜಿಲ್ಲೆಯ ಸೈದಾಪುರದಲ್ಲಿ ಗಡಿಕನ್ನಡಿಗರ ನುಡಿ ಉತ್ಸವ, ನ.28ರಂದು ಗುಲ್ಬರ್ಗದಲ್ಲಿ ಕಲ್ಯಾಣ ಕರ್ನಾಟಕ ಉತ್ಸವ, ಡಿ.10ರಂದು ಗುಲ್ಬರ್ಗ ಜಿಲ್ಲೆಯ ಸೇಡಂ ತಾಲೂಕಿನ ಮಳಖೇಡದಲ್ಲಿ ರಾಷ್ಟ್ರಕೂಟರ ವೈಭವ, ಯಾದಗಿರಿಯಲ್ಲಿ ಡಿ.19ರಂದು ಗಿರಿಕನ್ನಡಿಗರ ಉತ್ಸವ ಹಾಗೂ ಡಿ.30ರಂದು ಶಹಾಪುರದಲ್ಲಿ ಸಗರನಾಡು ಉತ್ಸವ ಹೀಗೆ ಪಂಚ ಉತ್ಸವಗಳು ಹಮ್ಮಿಕೊಳ್ಳಲಾಗಿದೆ ಎಂದು ವೇದಿಕೆ ಉತ್ತರ ಕರ್ನಾಟಕ ಅಧ್ಯಕ್ಷ ಶರಣು ಗದ್ದುಗೆ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಜಾಗೃತಿ ರ್ಯಾಲಿ: ನ.27ರಂದು ಗುಲ್ಬರ್ಗದ ಕೇಂದ್ರ ಬಸ್ ನಿಲ್ದಾಣದಿಂದ ಜಗತ್ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿವರೆಗೆ ಬೃಹತ್ ಜಾಗೃತಿ ರ್ಯಾಲಿ ನಡೆಸಿ ನ.28ರಂದು ಗುಲ್ಬರ್ಗದ ಡಾ. ಪಂಡಿತ ರಂಗ ಮಂದಿರದಲ್ಲಿ ನಡೆಸುವ ಕಲ್ಯಾಣ ಕರ್ನಾಟಕ ಉತ್ಸವದಲ್ಲಿ ಕಲಾವಿದರು, ಸಾರ್ವಜನಿಕರು ಪಾಲ್ಗೊಳ್ಳಲು ಮನವಿ ಮಾಡಲಾಗುವುದು. ನಂತರ ಜಿಲ್ಲಾಧಿಕಾರಿಗಳಿಗೆ ಮನವಿಪತ್ರ ಸಲ್ಲಿಸಿ ಕಡ್ಡಾಯ ಕನ್ನಡ ನಾಮಫಲಕ ಎಲ್ಲ ಇಲಾಖೆಗಳಲ್ಲಿ ಅಳವಡಿಸಲು ಕೋರಲಾಗುವುದು ಎಂದರು.
28ರಂದು ಸಂಜೆ 5ಕ್ಕೆ ನಡೆಯುವ ಉತ್ಸವವನ್ನು ಸಚಿವ ಖಮರುಲ್ ಇಸ್ಲಾಂ ಉದ್ಘಾಟಿಸಲಿದ್ದಾರೆ. ಶಾಸಕ ಜಿ.ರಾಮಕೃಷ್ಣ ಸಮ್ಮುಖ ವಹಿಸಲಿದ್ದಾರೆ. ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ, ಕರವೇ ರಾಜ್ಯ ಕಾರ್ಯಾಧ್ಯಕ್ಷ ಪ್ರವೀಣಕುಮಾರ್ ಶೆಟ್ಟಿ, ಎಂಎಲ್ಸಿ ಅಲ್ಲಂಪ್ರಭು ಪಾಟೀಲ್, ಬೆಳಮಗಿ, ಶರಣಬಸಪ್ಪಗೌಡ ದರ್ಶನಾಪುರ, ಎಲ್.ಬಿ.ಕೆ. ಆಲ್ದಾಳ, ನಮೋಶಿ, ಚನ್ನವೀರ ಸಲಗರ, ಅಂಬಾರಾಯ ಅಷ್ಟಗಿ, ಜಗದೀಶ್ವರಿ, ದಿಲೀಪ ಪಾಟೀಲ್, ಶ್ಯಾಮು ನಾಟೆಕಾರ್ ಪಾಲ್ಗೊಳ್ಳಲಿದ್ದಾರೆ.
ಸಾಧಕರಿಗೆ ಸನ್ಮಾನ: ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಿತ್ರನಟಿ ನವ್ಯಾ ಚಾಲನೆ ನೀಡುವರು. ಕಿರುತೆರೆ ನಟರಾದ ನಿರಂಜನ್ ಶೆಟ್ಟಿ ಪಾಲ್ಗೊಳ್ಳಲಿದ್ದಾರೆ. ನಾಡಿನ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಗಣ್ಯರಿಗೆ ಸೇವಾ ಗೌರವ ಸನ್ಮಾನ ಮಾಡಲಾಗುವುದು. ನಟಿ ನವ್ಯಾ ಅವರಿಗೆ ಕರ್ನಾಟಕ ಕಲಾಸಿರಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಶರಣು ಗದ್ದುಗೆ ಹೇಳಿದರು.
ಬೇಸರ: ಹೈ.ಕ. ಭಾಗದ ಸಂಗೀತ, ಸಾಹಿತ್ಯ, ನೃತ್ಯ, ಕಲೆ, ಕ್ರೀಡೆ-ಸಾಂಸ್ಕೃತಿಕ, ಜಾನಪದ ಕಲೆಗಳಿಗೆ ಪ್ರೋತ್ಸಾಹಿಸಿ ಬೆಳೆಸುವ ನಿಟ್ಟಿನಲ್ಲಿ ಕರವೇ ಕಳೆದ 8 ವರ್ಷಗಳಿಂದ ಕಲ್ಯಾಣ ಕರ್ನಾಟಕ ಉತ್ಸವ, 5 ವರ್ಷಗಳಿಂದ ಹೈ.ಕ. ಕನ್ನಡ ಅಭಿಮಾನ ಉತ್ಸವ ಆಚರಿಸುತ್ತ ಬಂದಿದೆ. ಆದರೆ, ಕನ್ನಡ ಸಂಸ್ಕೃತಿ ಇಲಾಖೆ ಅನುದಾನ ನೀಡುವಲ್ಲಿ ವಿಫಲವಾಗುತ್ತಿದೆ ಎಂದು ಶರಣಗು ಗದ್ದುಗೆ ಬೇಸರ ವ್ಯಕ್ತಪಡಿಸಿದರು.