ಬದುಕು ಆನಂದ ಮಾಡಿಕೊಳ್ಳಿ
ಕನ್ನಡಪ್ರಭ ವಾರ್ತೆ ಸುರಪುರ ನ.18
ಕಾಳು ಕಡಿಗಳನ್ನು ತಿಂದು ಆನಂದದಿಂದ ಹಾಡುವ ಕೋಗಿಲೆಯಂತೆ ವ್ಯಕ್ತಿ ನಿಸರ್ಗದಲ್ಲಿ ಗಳಿಸಿದ ಸಂಪತ್ತನ್ನು ಸಕಲ ಜೀವಿಗಳಿಗೆ ವಿನಿಯೋಗಿಸಿ ಬದುಕನ್ನು ಆನಂದ ಮಂದಿರ ಮಾಡಿಕೊಳ್ಳಬೇಕು ಎಂದು ಬಿಜಾಪುರ ಜ್ಞಾನ ಯೋಗಾಶ್ರವುದ ಸಿದ್ದೇಶ್ವರ ಶ್ರೀಗಳು ಹಿತೋಪದೇಶ ನೀಡಿದರು.
ರಂಗಂಪೇಟೆ ವೀರಶೈವ ಕಲ್ಯಾಣ ಮಂಟಪದಲ್ಲಿ ತಾಲೂಕು ವೀರಶೈವ ಸಮಿತಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಪ್ರವಚನ ನೀಡಿದರು. ಕೋಗಿಲೆ ಪ್ರಶಸ್ತಿ ಪದಕಗಳಿಗಾಗಿ ಅಥವಾ ಇತರರನ್ನು ಖುಷಿ ಪಡಿಸುವುದಕ್ಕಾಗಿ ಇಲ್ಲಾ ಹೊಗಳಿಕೆಗಾಗಿ ಹಾಡುವುದಿಲ್ಲ. ಅದು ತನ್ನ ಆನಂದಕ್ಕಾಗಿ ಹಾಡುತ್ತದೆ. ಆನಂದವಾದಾಗ ಹಾಡುವುದೇ ಅದರ ನಿರಪೇಕ್ಷಿತ ಕರ್ತವ್ಯ. ಅದೇ ರೀತಿ ವ್ಯಕ್ತಿ ಕೂಡಾ ಪ್ರಶಸ್ತಿ ಪದಕಗಳ ಬೆನ್ನು ಹತ್ತದೆ ಹೊಗಳಿಕೆಯನ್ನು ನಿರೀಕ್ಷಿಸದೆ ತನ್ನ ಪಾಲಿನ ಕರ್ತವ್ಯವನ್ನು ಅತ್ಯಂತ ಶ್ರದ್ಧೆಯಿಂದ ಪ್ರಾಮಾಣಿಕವಾಗಿ ಪ್ರತಿಫಲಾಪೇಕ್ಷೆಯಿಲ್ಲದೆ ಮಾಡಿದರೆ ಕೋಗಿಲೆಯಂತೆ ಸಾರ್ಥಕ ಜೀವನವಾಗುತ್ತದೆ ಎಂದರು.
ವ್ಯಾಪಾರೀಕರಣ ಬೇಡ: ಜಗಜ್ಯೋತಿ ಬಸವೇಶ್ವರರು ಕೂಡಾ ಕಾಯಕ ದಾಸೋಹಕ್ಕೆ ಹೆಚ್ಚಿನ ಮಹತ್ವ ನೀಡಿದ್ದರು. ಸಂಪತ್ತು ಇದ್ದಾಗ ಒಬ್ಬರೇ ತಿನ್ನುವುದಲ್ಲ. ಹಂಚಿ ತಿನ್ನುವುದೇ ದಾಸೋಹ. ಸಂಸ್ಥೆಯನ್ನು ಕಟ್ಟಿ ವ್ಯಾಪಾರೀಕರಣ ಮನೋಭಾವ ಸೃಷ್ಟಿಸಿದರೆ ಅದು ನಿಷ್ಪ್ರಯೋಜಕ. ಕಟ್ಟಿದ ಸಂಸ್ಥೆಯಿಂದ ನಾಲ್ಕು ಜನರಿಗೆ ನೆರವಾದರೆ ಅದುವೇ ದಾಸೋಹ. ನಮ್ಮ ಶರಣರು ಸಂತರು ಮಹಾತ್ಮರು ದಾಸೋಹಕ್ಕೆ ಹೆಚ್ಚಿನ ಮಹತ್ವ ನೀಡಿದರು. ದಾಸೋಹದಿಂದ ಮಾತ್ರ ಬದುಕನ್ನು ಸುಂದರ ಮಾಡಿಕೊಳ್ಳಲು ಸಾಧ್ಯ ಎಂದರು.
ದೇವರು ಸುಂದರ ಜೀವನ ಕೊಟ್ಟಿದ್ದಾನೆ. ಕಣ್ಣುಗಳೆರಡು, ಕಿವಿಗಳೆರಡು ಒಳ್ಳೆಯದು ಕೆಟ್ಟದ್ದು ಎರಡನ್ನು ನೋಡುತ್ತವೆ ಕೇಳುತ್ತವೆ. ಆದರೆ ಬಾಯಿ ಮಾತ್ರ ಒಂದೇ. ಅದು ಕೆಟ್ಟದನ್ನು ಬಿಟ್ಟು, ಒಳ್ಳೆಯದನ್ನೇ ಹೇಳಬೇಕು. ಒಂದು ಕೈಯಿಂದ ಪಡೆದರೆ, ಮತ್ತೊಂದು ಕೈಯಿಂದ ನೀಡಬೇಕು. ರೈತನ ಕೈಯಲ್ಲಿ ಮಣ್ಣು ಚಿನ್ನವಾಯಿತು. ವಿಜ್ಞಾನಿಯ ಕೈಯಲ್ಲಿ ವಿಸ್ಮಯ ತಾಂತ್ರಿಕ ಜಗತ್ತು ರೂಪಗೊಂಡಿತು. ಕಲಾವಿದನ ಕೈಯಲ್ಲಿ ಜಗತ್ತು ಮೆಚ್ಚುವಂತ ಕಲೆ ಅರಳಿತು. ಸಂಗೀತಗಾರರು ವೀಣೆ ನುಡಿಸಿ ಗಾನಸುಧೆ ಹರಡಿದರು. ನಮಗೂ ದೇವರು ಇಂತಹ ಕೈಗಳನ್ನೇ ನೀಡಿದ್ದಾನೆ. ಇವುಗಳಿಂದ ನಾವು ಕೂಡಾ ಸಾಧನೆ ಮಾಡಬಹುದಾಗಿತ್ತು, ಸಂತಸ ಪಡಬಹುದಾಗಿತ್ತು.
ವ್ಯಥೆ ಏಕೆ?: ಆದರೆ ನಾವದನ್ನು ಅರಿಯದೆ ಮಾಡಿದ್ದೇನು? ಕೈಗೆ ಬಂಗಾರ, ಬೆಳ್ಳಿಯ ಕಡಗವಿಲ್ಲ. ತಿರುಗಲು ಕಾರು, ಇರಲು ಬಂಗಲೆ ಇಲ್ಲ ಎಂದು ಮರುಕದಿಂದ ವ್ಯಥೆ ಪಡುತ್ತೇವೆ. ಕಾಗೆ, ಗುಬ್ಬಿ ಗೂಡು ಕಟ್ಟಿ ಕಾಳಗಳನ್ನು ಹಂಚಿ ತಿನ್ನುತ್ತಾ ಸೌಖ್ಯ ಪಡುತ್ತವೆ. ಒಂದು ಹೂ ಪರಿಸರದಲ್ಲಿ ಮಕರಂದವನ್ನು ಬೀರಿ ಜೀವನ ಸಾರ್ಥಕ ಮಾಡಿಕೊಳ್ಳುತ್ತದೆ. ಆದರೆ ನಾವು ಭವ್ಯ ಬಂಗಲೆ ಕಟ್ಟಿ ಸಿರಿ ಸಂಪತ್ತು ಗಳಿಸಿದರು ಜೀವನದಲ್ಲಿ ನೆಮ್ಮದಿ ಇರದೆ ಮರುಕ ಪಡುತ್ತೇವೆ ಎಂದರು. ಕಡ್ಲೆಪ್ಪನವರ ವಿರಕ್ತ ಮಠದ ಪ್ರಭುಲಿಂಗ ಮಹಾಸ್ವಾಮಿ, ರುಕ್ಮಾಪುರದ ಗುರುಶಾಂತಮೂರ್ತಿ ಶಿವಾಚಾರ್ಯ, ದೇವರ ಗೋನಾಲದ ಮಾರ್ತಾಂಡಪ್ಪ ಪೂಜಾರಿ, ವಿಶ್ವ ಪ್ರಾಣಿ ದಯಾ ಸಂಘದ ರಾಜ್ಯಾಧ್ಯಕ್ಷ ದಯಾನಂದ ಸ್ವಾಮಿ, ಸಮಾಜದ ಗೌರವಾಧ್ಯಕ್ಷ ಬಸವಲಿಂಗಪ್ಪ ಪಾಟೀಲ್ ವೇದಿಕೆಯಲ್ಲಿದ್ದರು. ವೀರಶೈವ ಸಮಿತಿ ತಾಲೂಕು ಅಧ್ಯಕ್ಷ ಸುರೇಶ ಸಜ್ಜನ್ ಪ್ರಾಸ್ತವಿಕ ಮಾತನಾಡಿದರು. ಅಮರಯ್ಯ ಸ್ವಾಮಿ ಜಾಲಿಬೆಂಚಿ ನಿರೂಪಿಸಿ ವಂದಿಸಿದರು.