ಮಧುಮೇಹದ ಅರಿವು ಜನರಲ್ಲಿ ಮೂಡಿಸಬೇಕು: ಕಂದಕೂರ
ಗುರುಮಠಕಲ್: ಭಾರತದಲ್ಲಿ ಮಧುಮೇಹ ಪ್ರಮಾಣ ಹೆಚ್ಚಳವನ್ನು ತಡೆಯಲು ಜನರಲ್ಲಿ ಅರಿವು ಮೂಡಿಸಬೇಕಾಗಿದೆ ಎಂದು ಜಿಲ್ಲಾ ಸಮೃದ್ಧ ಕರ್ನಾಟಕ ಸಮಾಜ ಸೇವಾ ಸಂಘ ಅಧ್ಯಕ್ಷ ಡಾ. ಸಿದ್ದಲಿಂಗರೆಡ್ಡಿ ಪಾಟೀಲ ಕಂದಕೂರ ಹೇಳಿದರು. ಅವರು ಕಂದಕೂರ ಗ್ರಾಮದ ಕುವೆಂಪು ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮಧುಮೇಹ ರೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಸಮಯಕ್ಕೆ ಸರಿಯಾಗಿ ಊಟ ಮಾಡದಿದ್ದಾಗ, ಬೇಕರಿ ಪದಾರ್ಥಗಳ ದಾಸರಾಗಿರುವುದರಿಂದ, ಧೂಮಪಾನ, ಮದ್ಯಪಾನ ಮಾಡುವುದರಿಂದ ಮಧುಮೇಹ ಹರಡಲು ಕಾರಣವಾಗುತ್ತದೆ. ಇದನ್ನು ನಿಯಂತ್ರಣಕ್ಕೆ ದಿನನಿತ್ಯ ವ್ಯಾಯಮ, ಯೋಗ ಮಾಡಬೇಕು ಎಂದು ಸೂಚಿಸಿದರು.
ಅತಿಮೂತ್ರ ವಿಸರ್ಜನೆ, ಬಾಯರಿಕೆ, ದೇಹ ದಣಿಕೆ, ಸಣ್ಣಪುಟ್ಟ ಗಾಯಗಳು ವಾಸಿಯಾಗದಿರುವುದು ಮಧುಮೇಹ ರೋಗದ ಲಕ್ಪಣಗಳಾಗಿವೆ. ಐಷರಾಮಿ ಜೀವನ ಬಿಟ್ಟು, ಶ್ರಮಜೀವಿಗಳಾಗಿ ಜೀವಿಸುವುದು ಉತ್ತಮ ಮಾರ್ಗ ಎಂದು ತಿಳಿಸಿದರು. ಶಾಲೆ ಮುಖ್ಯಗುರು ಬಾಲಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶಿಕ್ಷಕಿ ಬಸಮ್ಮ, ಮೇರಿ, ಅಂಬಿಕಾ ವೇದಿಕೆಯಲಿದ್ದರು. ಶಿಕ್ಷಕಿ ಮೌಲಿನಾ ಸ್ವಾಗತಿಸಿ, ಶಿಕ್ಷಕ ಬಸವರಾಜ ನಿರೂಪಿಸಿ, ಶಿಕ್ಷಕಿ ವೀಣಾ ವಂದಿಸಿದರು.