ಆಳ್ವಾಸ್ನಿಂದ ಸಂಸ್ಥೆ ನಾಡು, ನುಡಿ ಕಟ್ಟುವ ಕೆಲಸ: ಪೆರ್ಲ್
ಯಾದಗಿರಿ: ದಕ್ಷಿಣ ಕನ್ನಡದ ಮೂಡಬಿದರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯು ಕಳೆದ ಹಲವಾರು ದಶಕಗಳಿಂದ ನಾಡಿನಲ್ಲಿ ನಾಡು ನುಡಿ ಕಟ್ಟುವ ಕೆಲಸವನ್ನು ನಿಮ್ಮೆಲ್ಲರ ಸಹಾಯ ಸಹಕಾರದಿಂದ ಮಾಡುತ್ತಿದೆ ಎಂದು ಸಂಸ್ಥೆಯ ಸಂಘಟನಾ ಕಾರ್ಯದರ್ಶಿ ಸದಾನಂದ ಪೆರ್ಲ್ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಮಾತನಾಡಿದ ಅವರು, ನ.25ರಂದು ಜಿಲ್ಲಾ ಕೇಂದ್ರದಲ್ಲಿ ನಡೆಯಲಿರುವ ಆಳ್ವಾಸ್ ಸಾಂಸ್ಕೃತಿಕ ವೈಭವ ಕಾರ್ಯಕ್ರಮದ ಆಹ್ವಾನ ಪತ್ರಿಕೆಗಳನ್ನು ಬಿಡುಗಡೆ ಮಾಡಿದರು.
ಸಂಸ್ಥೆಯು ನಾಡಿನ ಕಲೆ, ಸಾಹಿತ್ಯ, ಸಂಸ್ಕೃತಿಯನ್ನು ವಿಶ್ವದ ನಾನಾ ದೇಶಗಳಿಗೆ ಪರಿಚಯಿಸಿದೆ. ಅದರಂತೆ ರಾಜ್ಯದ ಉತ್ತರ ಕರ್ನಾಟಕದ ಪ್ರತಿ ಜಿಲ್ಲೆಯಲ್ಲಿ ತನ್ನ ಘಟಕಗಳನ್ನು ಸ್ಥಳೀಯರ ಸಹಕಾರದಿಂದ ಸ್ಥಾಪಿಸಿ ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ ಎಂದು ತಿಳಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮ: ಶಿಕ್ಷಣ ಸಂಸ್ಥೆಯ 235 ಕಲಾವಿದರ ತಂಡ ನ.24ರಂದು ಸುರಪುರದ ರಂಗಮಂದಿರದಲ್ಲಿ, 25ರಂದು ಯಾದಗಿರಿ ಸರ್ಕಾರಿ ಪಪೂ ಕಾಲೇಜು ಮೈದಾನದಲ್ಲಿ ಈ ಭಾಗದ ಜನರಿಗೆ ಸಾಂಸ್ಕೃತಿಕ ಕಾರ್ಯಕ್ರಮದ ಮೂಲಕ ನಾಡಿನ ಸಂಸ್ಕೃತಿ ಪರಿಚಯಿಸಲಿದ್ದಾರೆ ಎಂದು ತಿಳಿಸಿದರು.
ಡಿ.19ರಿಂದ 22ರವರೆಗೆ ಮೂಡಬಿದರೆಯ ವಿದ್ಯಾಗಿರಿಯಲ್ಲಿ ಆಳ್ವಾಸ್ ವಿಶ್ವ ನುಡಿಸಿರಿ ವಿರಾಸತ್-2013 ಅಂತಾರಾಷ್ಟ್ರೀಯ ಮಟ್ಟದ ಕಾರ್ಯಕ್ರಮ ಆಯೋಜಿಸಲಾಗಿದೆ. ನಾಲ್ಕು ದಿನಗಳ ಕಾರ್ಯಕ್ರಮದಲ್ಲಿ ರಾಜ್ಯ, ರಾಷ್ಟ್ರ ಮಟ್ಟದ ಸುಮಾರು 5 ಸಾವಿರ ಕಲಾವಿದರು ಭಾಗವಹಿಸಲಿದ್ದಾರೆ. ದೇಶ ವಿದೇಶಗಳಿಂದ 10 ಲಕ್ಷ ಜನ ಭಾಗವಹಿಸುವ ನಿರೀಕ್ಷೆಯಿದೆ. ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನತೆ ಭಾಗವಹಿಸಿ ನಾಡು, ನುಡಿ ಕಟ್ಟುವ ಕೆಲಸಕ್ಕೆ ಶಕ್ತಿ ತುಂಬಬೇಕೆಂದು ಮನವಿ ಮಾಡಿದರು.
ನಾಡಿನ ವೈಭವ ತಿಳಿಸುವ ಉದ್ದೇಶ: ನುಡಿಸಿರಿ ಬಳಗದ ಜಿಲ್ಲಾಧ್ಯಕ್ಷ ಸುರೇಶ ಸಜ್ಜನ ಮಾತನಾಡಿ, ಈ ಭಾಗದ ಜನರಿಗೆ ನಾಡಿನ ಸಾಂಸ್ಕೃತಿಕ ವೈಭವವನ್ನು ಪರಿಚಯಿಸುವ ದೃಷ್ಟಿಯಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಜಿಲ್ಲೆಯ ಹೆಚ್ಚಿನ ಜನಸಂಖ್ಯೆ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.
ಬಳಗದ ಪ್ರಧಾನ ಕಾರ್ಯದರ್ಶಿ ಅನೀಲ ದೇಶಪಾಂಡೆ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ, ಕಾರ್ಯಕ್ರಮದ ಮಾಹಿತಿ ವಿವರಿಸಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಯತಿರಾಜ ಶೆಟ್ಟಿ, ಜಿಪಂ ಮಾಜಿ ಸದಸ್ಯ ಶ್ರೀನಿವಾಸರಡ್ಡಿ ಪಾಟೀಲ್ ಚನ್ನೂರ್, ಬಳಗದ ಜಿಲ್ಲಾ ಉಪಾಧ್ಯಕ್ಷ ಸಂಜೀವರಾವ ಕುಲಕಣರ್, ಎಂ.ಕೆ. ಬೀರನೂರ್, ವಿಶ್ವನಾಥ ಶಿರವಾರ್, ಕೆಜೆಪಿ ಜಿಲ್ಲಾಧ್ಯಕ್ಷ ಡಾ. ಶರಣ ಭೂಪಾಲರಡ್ಡಿ ನಾಯ್ಕಲ್, ಕರವೇಯ ಶರಣು ಗದ್ದುಗೆ, ನೀಲಕಂಠರಾಯ ಯಲ್ಹೇರಿ, ಶಾಂತರಡ್ಡಿ ಚೌದ್ರಿ, ಬಸವರಾಜ ಸ್ವಾಮೀ ಸ್ವಾವರ ಮಠ, ಭೀಮುನಾಯಕ, ಬಸವರಡ್ಡಿ ತಿಪ್ಪಡಂಪಲ್ಲಿ, ಶರಣು ಗಡೇದ್, ವೆಂಕಟರೆಡ್ಡಿ ಹತ್ತಿಕುಣಿ, ಭೀಮರಾಯ ಜಂಗಳಿ, ಪ್ರಶಾಂತರೆಡ್ಡಿ ಯಲ್ಹೇರಿ, ಶಾಂತಪ್ಪ ಖಾನಳ್ಳಿ, ಚಂದ್ರಾಮಪ್ಪ ರಾಮಸಮುದ್ರ, ಚಂದ್ರಶೇಖರ ದಾಸನಕೇರಿ, ಭೀಮರೆಡ್ಡಿ ಕೌಳೂರ, ಶ್ರೀಕಾಂತ ಭೀಮನಳ್ಳಿ, ರೆಡ್ಡಿನಾಯಕ ಸೇರಿದಂತೆ ನೂರಾರು ಯುವಕರು ಭಾಗವಹಿಸಿದ್ದರು.
ಇದಕ್ಕೂ ಮೊದಲು ಬಳಗದ ಸಭೆ ನಡೆದು ಕಾರ್ಯಕ್ರಮದ ರೂಪರೇಶಗಳ ಕುರಿತು ಜಿಲ್ಲೆಯ ಯುವ ಬಳಗದೊಂದಿಗೆ ಚರ್ಚಿಸಲಾಯಿತು.