ಕಾಂಗ್ರೆಸ್ಸಿಗೆ ತಾನಾಜಿ ನೇಮಕ
ಆಳಂದ: ಬಹುದಿನಗಳಿಂದ ನೆನೆಗುದ್ದಿಗೆ ಬಿದ್ದಿದ್ದ ಆಳಂದ ಬ್ಲಾಕ್ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ತಾನಾಜಿ ಟಿ. ಸೂರ್ಯವಂಶಿ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.
ಈ ಕುರಿತು ಪ್ರಕಟಣೆಯ ಮೂಲಕ ಪಕ್ಷದ ಬ್ಲಾಕ್ ಸಮಿತಿ ಅಧ್ಯಕ್ಷ ಮಹ್ಮದ್ ಮಕ್ದುಮ್ ಅನ್ಸಾರಿ ಕಾಲೇಮಿರ್ ಅವರು, ತಾನಾಜಿ ಅವರಿಗೆ ನೇಮಕಮಾಡಿ ಆದೇಶ ನೀಡಿದ್ದಾರಲ್ಲದೆ, ಪಕ್ಷದ ಜಿಲ್ಲಾಧ್ಯಕ್ಷರು ಮತ್ತು ರಾಜ್ಯಾಧ್ಯಕ್ಷರು ಅನುಮೋದಿಸುವಂತೆ ಪ್ರತ್ಯೇಕವಾಗಿ ಕೋರಿದ್ದಾರೆ.
ಅಭಿನಂದನೆ: ಸದಾ ಬಡ ಜನರ ಮಧ್ಯದಲ್ಲಿದ್ದು ಕೆಲಸ ನಿರ್ವಹಿಸುವ ತಾನಾಜಿ ಟಿ. ಸೂರ್ಯವಂಶಿ ಅವರಿಗೆ ಪಕ್ಷದ ಪ್ರಧಾನ ಕಾರ್ಯದರ್ಶಿ ಹುದ್ದೆ ನೀಡಿರುವುದು ಸೂಕ್ತವಾಗಿದೆ ಎಂದು ಜಿಲ್ಲಾ ಮತ್ತು ತಾಲೂಕು ಮುಖಂಡರಿಗೆ ಸ್ಥಳೀಯ ಮುಖಂಡ ಮಹ್ಮದ್ ಅಲಿ, ಖಲೀಲ್ ಅನ್ಸಾರಿ, ಕೃಷ್ಣಾ ಜಾಧವ ಮತ್ತು ಶಿವಾ ಭಕರೆ ಅಭಿನಂದಿಸಿದ್ದಾರೆ.
22ರಂದು ಆಂದೋಲಾ ಕರುಣೇಶ್ವರರ ಜಾತ್ರೆ
ಜೇವಗಿ: ಜೇವರ್ಗಿ ತಾಲೂಕಿನ ಸುಕ್ಷೇತ್ರ ಆಂದೋಲಾ ಆರಾಧ್ಯದೈವ ಕರುಣೇಶ್ವರರ ಜಾತ್ರಾ ಮಹೋತ್ಸವ ನಿಮಿತ್ತ ನ.22ರಂದು ವೈಭವದ ರಥೋತ್ಸವ ಜರುಗಲಿದೆ. ಉತ್ಸವದ ನಿಮಿತ್ತ 17ರಂದು ರಥಕ್ಕೆ ವಿಶೇಷ ಪೂಜೆ ನೆರವೇರಿಸಲಾಯಿತು. 18ರಂದು ಕಟ್ಟಿಸಂಗಾವಿಯ ಭೀಮಾ ನದಿಯಲ್ಲಿ ಗಂಗಾಸ್ನಾನ ನೆರವೇರಲಿದ್ದು ನಂತರ ಪಾದಯಾತ್ರೆ ಮೂಲಕ ಪಲ್ಲಕ್ಕಿ ಉತ್ಸವ ಆಂದೋಲಾ ಗ್ರಾಮಕ್ಕೆ ಆಗಮಿಸಲಿದೆ. 19ರಂದು ಆನೆ ಉಚ್ಚಾಯ, 20ರಂದು ನವಿಲು ಉಚ್ಚಾಯ, 21ರಂದು ಸಿಂಹ ಉಚ್ಚಾಯ, 22ರ ಸಂಜೆ 6 ಗಂಟೆಗೆ ಭವ್ಯ ರಥೋತ್ಸವ ಜರುಗಲಿದೆ.ಆಂದೋಲಾದ ಕರುಣಯ್ಯ ಸ್ವಾಮೀಜಿ ನೇತೃತ್ವದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಶಖಾಪುರದ ಸಿದ್ಧರಾಮ ಶಿವಾಚಾರ್ಯರು, ಆಲಮೇಲದ ಚಂದ್ರಶೇಖರ ಶ್ರೀ, ಹೊನ್ನಕಿರಣಗಿಯ ಚಂದ್ರಗುಂಡ ಶ್ರೀ, ಕನ್ಯಾಕೋಳರಿನ ಚನ್ನವೀರ ಶ್ರೀ, ಯಂಕಂಚಿಯ ರುದ್ರಮುನಿ ಶ್ರೀ ಸೇರಿದಂತೆ ಅನೇಕ ಮಠಾಧೀಶರು ಉಪಸ್ಥಿತಿಯಲ್ಲಿ ಕಾರ್ಯಕ್ರಮ ನೆರವೇರಲಿದೆ.