ನೇಕಾರರ ಗೋಳು ಕೇಳೋರ್ಯಾರು?
ಗುರುಮಠಕಲ್: ಯಾದಗಿರಿ ತಾಲೂಕಿನ ಗುರುಮಠಕಲ್ನಲ್ಲಿ ನೇಕಾರರ ಬದುಕು ಅಸ್ತವ್ಯಸ್ಥಗೊಂಡಿದ್ದು, ಹೊತ್ತಿನ ತುತ್ತು ಅನ್ನಕ್ಕಾಗಿ ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ನಮ್ಮ ಗೋಳು ಕೇಳೋರಿಲ್ಲ ಎಂದು ನೇಕಾರರರು ಬೇಸರ ವ್ಯಕ್ತಪಡಿಸಿದ್ದಾರೆ.
ಯಾದಗಿರಿ ಜಿಲ್ಲೆಯಲ್ಲೇ ಗುರುಮಠಕಲ್ ಪಟ್ಟಣವು ನೇಕಾರಿಕೆಗೆ ಪ್ರಸಿದ್ಧಿ ಪಡೆದಿತ್ತು. ಅವರ ವಾಸಕ್ಕಾಗಿ ಪಟ್ಟಣದಲ್ಲಿ 30 ವರ್ಷಗಳ ಹಿಂದೆ ನೇಕಾರರಿಗೆ ಕೆಎಚ್ಡಿಸಿ ಕಾಲೋನಿ ನಿರ್ಮಿಸಿ ಮನೆಗಳ ಹಕ್ಕು ಪತ್ರಗಳನ್ನು ನೀಡಲಾಗಿತ್ತು.
ಇಲ್ಲಿಯವರೆಗೆ ಹಕ್ಕು ಪತ್ರ ನೀಡಿದರೆ ಹೊರತು ಬಡ ನೇಕಾರರ ಹೆಸರಿಗೆ ಮನೆಗಳು ನೋಂದಣಿಯಾಗಿಲ್ಲ. ಅಂದಿನಿಂದ ಈವರೆಗೂ ಅವರತ್ತ ಯಾವೊಬ್ಬ ಅಧಿಕಾರಿ, ಜನಪ್ರತಿನಿಧಿ ಗಮನಹರಿಸಿಲ್ಲ ಎಂದು 'ಕನ್ನಡಪ್ರಭ' ಅಳಲು ತೋಡಿಕೊಂಡರು.
ಶಿಥಿಲಾವಸ್ಥೆಯಲ್ಲಿ ಮನೆಗಳು: ಮನೆಗಳು ಸಂಪೂರ್ಣ ಶಿಥಿಲಾವಸ್ಥೆಗೆ ಬಂದಿದ್ದು, ಕೆಲವೊಬ್ಬರ ಮನೆ ಗೋಡೆಗಳು ಬಿರುಕು ಬಿಟ್ಟಿವೆ. ಇನ್ನು ಕೆಲವರ ಮನೆ ಚಾವಣಿ ಕುಸಿದು ಬೀಳುವ ಸ್ಥಿತಿಯಲ್ಲಿದ್ದು, ಭಯದಲ್ಲಿ ವಾಸ ಮಾಡುತ್ತಿದ್ದಾರೆ.
ಉದ್ಯೋಗಾವಕಾಶದ ನಿರೀಕ್ಷೆ: ಮಳೆಗಾಲದಲ್ಲಿ ಮಳೆ ನೀರು ಸೋರಿಕೆಯಾಗಿ ಮನೆಗಳಲ್ಲಿ ನೀರು ತುಂಬಿ ರಾತ್ರಿಯೆಲ್ಲಾ ಜಾಗರಣೆ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಮೂಲ ಸೌಕರ್ಯಗಳಾದ ಚರಂಡಿ, ಕುಡಿಯುವ ನೀರು, ವಿದ್ಯುತ್ ಮತ್ತು ನೇಕಾರರ ನೂಲು ಮುಂತಾದ ಸಮಸ್ಯೆಗಳನ್ನು ಎದುರಿಸುತ್ತಿದ್ದು, ನೇಕಾರರ ಕಚ್ಚಾ ನೂಲು ತಯಾರಿ ಕೇಂದ್ರವನ್ನು ಗುರುಮಠಕಲ್ನಲ್ಲಿ ಸ್ಥಾಪಿಸಿ ನೇಕಾರರಿಗೆ ಹಾಗೂ ಅವರ ಕುಟುಂಬದವರಿಗೆ ಉದ್ಯೋಗ ಅವಕಾಶದ ನಿರೀಕ್ಷೆಯಲ್ಲಿ ನೇಕಾರರಿದ್ದಾರೆ.
ಗುರುಮಠಕಲ್ ಕ್ಷೇತ್ರದ ಶಾಸಕ ಬಾಬುರಾವ ಚಿಂಚನಸೂರ ಅವರೇ ಜವಳಿ ಖಾತೆಯ ಸಚಿವರಾಗಿದ್ದು, ನೇಕಾರರ ಸಮಸ್ಯೆಗಳಿಗೆ ಸ್ಪಂದಿಸಿ ಶೀಘ್ರವೇ ಪರಿಹಾರ ಕಲ್ಪಿಸುವಂತೆ ಪಪಂ ಸದಸ್ಯ ರಾಜಾ ರಮೇಶಗೌಡ ಮನವಿ ಮಾಡಿದ್ದಾರೆ.
ಗುರುಮಠಕಲ್ ಪಟ್ಟಣಕ್ಕೆ ಆಗಮಿತ್ತಿರುವ ಸಿಎಂ ಅವರಾದರೂ ನೇಕಾರರತ್ತ ಚಿತ್ತ ಹರಿಸಿ ಅವರ ಸಮಸ್ಯೆಗಳನ್ನು ಆಲಿಸುವರೇ ಕಾದು ನೋಡಬೇಕು.