'ಮಕ್ಕಳೇ ದೇಶದ ಭವಿಷ್ಯವೆಂದು ನಂಬಿದ್ದ ನೆಹರು'
ಆಳಂದ: ದೇಶದ ಮೊದಲ ಪ್ರಧಾನಿ ಜವಾಹರ್ಲಾಲ್ ನೆಹರು ಅವರ ತಮ್ಮ ಜನ್ಮದಿನವನ್ನು ಮಕ್ಕಳ ದಿನವನ್ನಾಗಿ ಆಚರಿಸಲು ಹೇಳಿದ ದೇಶದ ಮಾದರಿ ಪ್ರಧಾನಿ ಎಂದು ಸ್ಥಳೀಯ ನ್ಯಾಯಾಲಯದ ಪ್ರಧಾನ ಸಿವಿಲ್ ನ್ಯಾಯಾಧೀಶ ಪ್ರಭು ಎನ್. ಬಡಿಗೇರ್ ಹೇಳಿದರು.
ಪಟ್ಟಣದ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ಕಾನೂನು ಸೇವಾ ಸಮಿತಿ, ನ್ಯಾಯವಾದಿಗಳ ಸಂಘ ಮತ್ತು ಶಾಲೆ ಆಶ್ರಯದಲ್ಲಿ ನಡೆದ ಮಕ್ಕಳ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ನೆಹರು ಅವರೊಬ್ಬ ನಿಸ್ವಾರ್ಥಿ ರಾಜಕೀಯ ಮುತ್ಸದ್ದಿ ಎನ್ನುವುದಕ್ಕೆ ತಮ್ಮ ಜನ್ಮದಿನವನ್ನು ಮಕ್ಕಳ ದಿನವನ್ನಾಗಿ ಆಚರಿಸಲು ಹೇಳಿದ್ದು ಸಾಕ್ಷಿಯಾಗಿದೆ. ಮಕ್ಕಳೇ ದೇಶದ ಭಾವಿ ಭವಿಷ್ಯ ನಿರ್ಮಾಪಕರು. ಮಕ್ಕಳೇ ದೇಶದ ಆಸ್ತಿ ಎಂದು ಮಕ್ಕಳ ಮೇಲಿರುವ ಅವರ ಪ್ರೀತಿಯನ್ನು ತಮ್ಮ ಜನ್ಮದಿನಕ್ಕೆ ಅರ್ಪಿಸಿದ್ದಾರೆ ಎಂದರು. ಅಧ್ಯಕ್ಷತೆ ವಹಿಸಿದ್ದ ಶಾಲೆ ಮುಖ್ಯ ಶಿಕ್ಷಕ ಪ್ರಭಾಕರ್, ಯಾವುದೇ ಹುದ್ದೆ ಪಡೆಯಬೇಕಾದರೆ ಶಿಕ್ಷಣ ಮತ್ತು ಅಂಕ ಮುಖ್ಯ. ಕಠಿಣ ಶ್ರಮವಹಿಸಿ ಗುರು, ಹಿರಿಯರ ಮಾತಿನಂತೆ ನಡೆದುಕೊಂಡರೆ ಮಕ್ಕಳ ದಿನಾಚರಣೆ ಅರ್ಥ ಕಲ್ಪಿಸಲು ಸಾಧ್ಯವಾಗುತ್ತದೆ ಎಂದರು. ನ್ಯಾಯವಾದಿ ಸಿ.ಎಸ್. ತೋಳೆ, ಬಿ.ವೈ.ಶಿರೋಳೆ, ಎಂ.ವಿ. ಎಕಬೋಟೆ, ಯು.ಕೆ.ಇನಾಮದಾರ, ಬಿ.ಎಸ್. ನಿಂಬುರರ್ಗಿ, ಮುದಸರ್ ಮುಲ್ಲಾ, ಶಾಲೆಯ ಶಿಕ್ಷಕ ಮಧುಕರ್ ಪಾತ್ರೆ, ಅಣ್ಣಪ್ಪ ಹಾದಿಮನಿ, ಮಡಿವಾಳಪ್ಪ, ಬಸವರಾಜ ಹಾದಿಮನಿ, ಪದ್ಮಜಾ ಕಟ್ಕೆ ಮತ್ತು ಶಹೀನಾ ಸೇರಿದಂತೆ ಕನ್ನಡ ಮತ್ತು ಉರ್ದು ಮಾಧ್ಯಮದ ಪ್ರೌಢಶಾಲೆಯ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು. ಶಾಲೆ ಶಿಕ್ಷಕರಾದ ಮಲ್ಲಿನಾಥ ಖಜೂರಿ ಸ್ವಾಗತಿಸಿ, ಪಾಂಡುರಂಗ ಮೊದಲೆ ನಿರೂಪಿಸಿದರು. ದೈಹಿಕ ಶಿಕ್ಷಕ ರಾಣಪ್ಪಾ ಸಂಗನ ವಂದಿಸಿದರು.