ಜಾತಿ, ಧರ್ಮ ಮೀರಿದ ಚೈತನ್ಯ ಶಕ್ತಿ ಸಂಗೀತ: ಶಿವಾಚಾರ್ಯರು
ಸುರಪುರ: ಸಂಗೀತ ಭಾಷೆಯಲ್ಲ ,ಅದು ಉಸಿರು. ಜಾತಿ, ಧರ್ಮ ಮೀರಿದ ಚೈತನ್ಯ ಶಕ್ತಿ. ಅದು ಯಾವುದೇ ದೇಶ, ಜಾತಿ, ಸಿದ್ಧಾಂತ, ವರ್ಣಗಳಿಗೆ ಸೀಮಿತವಾಗಿಲ್ಲ ಎಂದು ದೇವಪುರ ಜಡಿಶಾಂತಲಿಂಗೇಶ್ವರ ಸಂಸ್ಥಾನ ಹಿರೇಮಠದ ಶಿವಮೂರ್ತಿ ಶಿವಾಚಾರ್ಯ ಹೇಳಿದರು.
ಸಮೀಪದ ರಂಗಂಪೇಟೆ ವೀರಶೈವ ಕಲ್ಯಾಣ ಮಂಟಪದಲ್ಲಿ ಬುಧವಾರ ಇಲ್ಲಿಯ ಶಿಲ್ಪಾ ನಾದ ಮಧುರ ಸಂಗೀತ ಮಹಾವಿದ್ಯಾಲಯವು ಕರ್ನಾಟಕ ಜಾನಪದ ಕಲಾ ವೈಭವದ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ, ಸೇವೆ ಸಲ್ಲಿಸಿದವರಿಗೆ ಪ್ರಶಸ್ತಿ ಪ್ರದಾನ, ಸನ್ಮಾನ ಸಮಾರಂಭಕ್ಕೆ ಚಾಲನೆ ನೀಡಿ ಆಶೀರ್ವಚನ ನೀಡಿದರು.
ಸಂಗೀತದ ತವರೂರು: ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಧೀಶರಾದ ರಾಜಾ ವೆಂಕಟಪ್ಪ ನಾಯಕ ಸಮಾರಂಭ ಉದ್ಘಾಟಿಸಿ, ಸುರಪುರ ಕಲೆ, ಸಾಹಿತ್ಯ ಮತ್ತು ಸಂಗೀತದ ತವರೂರು. ಇಲ್ಲಿ ಅನೇಕ ಶ್ರೇಷ್ಠ ಕಲಾವಿದರು ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಸುರಪುರಕ್ಕೆ ಕೀರ್ತಿ ತಂದಿದ್ದಾರೆ ಎಂದು ನೆನಪಿಸಿಕೊಂಡರು.
ಹೈಕ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ಸುರೇಶ ಸಜ್ಜನ್ ಮಾತನಾಡಿದರು. ನಾಗರಾಜ ಬಿಲ್ಲವ್ ಅಧ್ಯಕ್ಷತೆ ವಹಿಸಿದ್ದರು. ಗುವಿವಿ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ವಾಸುದೇವ ಸೇಡಂ, ಸಂಗೀತ, ನೃತ್ಯ, ನಾಟಕ ವಿಭಾಗಾಧೀಕ್ಷ ಬಿ.ಎನ್. ಭಜಂತ್ರಿ ಇದ್ದರು.
ಗೌರವ: ಇದೇ ಸಂದರ್ಭದಲ್ಲಿ ನಾನಾ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮತ್ತು ಸೇವೆ ಸಲ್ಲಿಸಿದ ಸಾಧಕರಿಗೆ ಕಲ್ಯಾಣ ನಾಡಿನ ಕಲಾರಾಧನ ಪ್ರಶಸ್ತಿ, ಕಲ್ಯಾಣ ನಾಡಿನ ಶಿಕ್ಷಣ ರತ್ನ ಪ್ರಶಸ್ತಿ, ಕರ್ನಾಟಕ ಶ್ರೀಗಂಧ ರತ್ನ ಪ್ರಶಸ್ತಿ, ಉದ್ಯಮಿ ಪ್ರವೀಣ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು. ಗಣ್ಯರು, ಅಧಿಕಾರಿಗಳು, ನಾಗರಿಕರು ಇದ್ದರು. ಮೌನೇಶ ಬಿಲ್ಲವ್ ಪ್ರಾಸ್ತಾವಿಕ ಮಾತನಾಡಿದರು. ಭೀಮಾಶಂಕರ ಸ್ವಾಗತಿಸಿ ಅಶೋಕ ಚೌಧರಿ ನಿರೂಪಿಸಿ, ವಂದಿಸಿದರು.