ಜಿಲ್ಲೆಯ ಜನರ ನಿರೀಕ್ಷೆ ಹುಸಿಗೊಳಿಸಿದ ಸಿಎಂ
ಗುರುಮಠಕಲ್: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಗುರುಮಠಕಲ್ ಪಟ್ಟಣಕ್ಕೆ ಆಗಮಿಸಿ, ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿ ನಂತರ ಪಟ್ಟಣ ಪಂಚಾಯತಿಯ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳ ಪ್ರಗತಿ ಪರಿಶಿಲನಾ ಸಭೆ ನಡೆಸದೇ ಹಿಂತಿರುಗಿದರು. ಇದು ಈ ಭಾಗದ ಜನತೆಗೆ ನಿರಾಸೆ ತಂದಿತು.
ಪೂರ್ವನಿಗದಿತ ಸಮಯದಂತೆ ಮುಖ್ಯ ಮಂತ್ರಿಗಳು ಗುರುಮಠಕಲ್ ಪಟ್ಟಣಕ್ಕೆ ಬರಲಿಲ್ಲ. ಪರಿಣಾಮ ಕಾರ್ಯಕ್ರಮದಲ್ಲಿ ತಡವಾಗಿ, ತಮ್ಮ ನಿರ್ಗಮನಕ್ಕೆ ಸಮಯವಾದ ಕಾರಣದಿಂದಾಗಿ ನಡೆಯಬೇಕಾದ ಪ್ರಗತಿ ಪರಿಶೀಲನಾ ಸಭೆ ನಡೆಯಲಿಲ್ಲ. ಈ ಭಾಗದ ಸಮಸ್ಯೆಗಳಿಗೆ ಮುಕ್ತಿ ದೊರೆಯದೆ ಈ ಭಾಗದ ಸಮಸ್ಯೆಗಳು ಸಮಸ್ಯೆಗಳಾಗಿಯೇ ಉಳಿದುಕೊಂಡವು.
ಬಂದದ್ದು ತಡವಾಯ್ತು: ನಿಗದಿತ ಸಮಯಕ್ಕೆ ಬರಬೇಕಾದ ಮುಖ್ಯಮಂತ್ರಿಗಳು ಬರುವುದರಲ್ಲಿ ತಡವಾದ ಹಿನ್ನೆಲೆಯಲ್ಲಿ ಪೂರ್ವ ನಿಗದಿಯಾಗಿದ್ದ ಕಾರ್ಯಕ್ರಮ ರದ್ದಾಯಿತು. ಸಕಾಲಕ್ಕೆ ಜಿಲ್ಲಾ ಮಟ್ಟದ ಅಧಿಕಾರಿಗಳ ಜೊತೆಯಲ್ಲಿ ಮುಖ್ಯಮಂತ್ರಿಗಳು ಪಟ್ಟಣ ಪಂಚಾಯತಿ ಕಾರ್ಯಾಲಯದಲ್ಲಿ ಸಭೆ ನಡೆಸಬೇಕಾಗಿತ್ತು. ಅದರೆ ತಡವಾಗಿ ಬಂದು ಕಾರಣದಿಂದಾಗಿ ನೀರು ಸರಬರಾಜು ಮಾಡುವ ಯೋಜನೆಯನ್ನು ಉದ್ಘಾಟಿಸಿ, ಕಾರ್ಯಕ್ರಮ ಮುಗಿಯುವಷ್ಟರಲ್ಲಿ ಸಮಯ 3 ಗಂಟೆಯಾಗಿತ್ತು.
ಪರಿಶೀಲನಾ ಸಭೆ ರದ್ದಾಯ್ತು: ಕಾರ್ಯಕ್ರಮದ ವೇದಿಕೆಯಿಂದ ನೇರವಾಗಿ ಪ್ರವಾಸಿ ಮಂದಿರಕ್ಕೆ ಆಗಮಿಸಿದ ಮುಖ್ಯಮಂತ್ರಿಗಳು ಊಟ ಮುಗಿಸಿಕೊಂಡು ಸಂಜೆ ಬೆಂಗಳೂರಿನಲ್ಲಿ ನಡೆಯಲ್ಲಿರುವ ಕಾರ್ಯಕ್ರಮದಲ್ಲಿ ಭಾಗವಹಿಸಬೇಕಾಗಿದೆ ಎಂದು ಬೆಂಗಳೂರಿಗೆ ತೆರಳಿದ ಹಿನ್ನೆಲೆಯಲ್ಲಿ ನಡೆಯಬೇಕಾದ ಪ್ರಗತಿ ಪರಿಶೀಲನಾ ಸಭೆಯು ನಡೆಯದೆ ರದ್ದಾಯಿತು. ಈ ಭಾಗಕ್ಕೆ ಮುಖ್ಯಮಂತ್ರಿಗಳಾದ ನಂತರ ಪ್ರಥಮ ಬಾರಿಗೆ ಆಗಮಿಸಿದ್ದ ಸಿದ್ದರಾಮಯ್ಯ, ಈ ಭಾಗದ ಪ್ರಮುಖ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಿ, ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವರು ಎನ್ನುವ ಭರವಸೆಯನ್ನು ಇಲ್ಲಿನ ಜನರು ಇಟ್ಟುಕೊಂಡಿದ್ದರು. ರದ್ದಾದ ಪ್ರಗತಿ ಪರಿಶೀಲನಾ ಕಾರ್ಯಕ್ರಮ ಜನರ ಭರವಸೆಗೆ ತಣ್ಣೀರು ಎರಚಿದ್ದಂತೂ ಹೌದು.
--
ಉಪ್ಪಲದಿನ್ನಿ: ಮೃತ ಕುಟುಂಬಗಳಿಗೆ ಹೆಚ್ಚುವರಿ ರು. 1 ಲಕ್ಷ ಪರಿಹಾರ ಧನ
ಸುರಪುರ: ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಹಲಕಿ ಕ್ರಾಸ್ ಬಳಿ ಇತ್ತೀಚೆಗೆ ಕ್ಯಾಂಟರ್ ಪಲ್ಟಿಯಾಗಿ ಮೃತಪಟ್ಟ ತಾಲೂಕಿನ ಉಪ್ಪಲದಿನ್ನಿ ಮತ್ತು ಇತರೆ ತಾಂಡಾದ 22 ಜನ ಮೃತ ಕುಟುಂಬಗಳಿಗೆ ಹೆಚ್ಚುವರಿಯಾಗಿ ತಲಾ ಒಂದು ಲಕ್ಷ ರೂಪಾಯಿ ಪರಿಹಾರ ಧನ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಜಿಲ್ಲಾಧಿಕಾರಿಗೆ ಮೌಖಿಕ ಆದೇಶ ನೀಡಿದ್ದಾರೆ ಎಂದು ಮಾಜಿ ಸಚಿವ ರಾಜೂಗೌಡ ತಿಳಿಸಿದ್ದಾರೆ.
ಗುರುಮಠಕಲ್ಗೆ ಬುಧವಾರ ವಿವಿಧ ಕಾಮಗಾರಿ ಉದ್ಘಾಟನೆಗೆ ಆಗಮಿಸಿದ್ದ ಸಿಎಂ ಅವರನ್ನು ತಾವು ನಿಯೋಗದೊಂದಿಗೆ ಭೇಟಿಯಾಗಿ, ಮೃತ ಕುಟುಂಬಗಳಿಗೆ ತಲಾ ರು. 5 ಲಕ್ಷ ಪರಿಹಾರ ನೀಡುವಂತೆ ಮನವಿ ಸಲ್ಲಿಸಿದ್ದಾಗಿ ತಿಳಿಸಿದರು. ಮೃತ ಕುಟುಂಬಗಳ ಅನುಭವಿಸುವ ಯಾತನೆ ಮತ್ತು ಸ್ಥಿತಿಗತಿಗಳ ಬಗ್ಗೆ ಸಿಎಂ ಅವರಿಗೆ ಮನವರಿಕೆ ಮಾಡಿಕೊಟ್ಟೆ. ತಕ್ಷಣ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿಗಳು ಸರಿಯಪ್ಪಾ, ಇನ್ನೊಂದು ಲಕ್ಷ ರು. ಕೊಡುತ್ತೇನೆ ಎಂದು ಅಲ್ಲಿಯೇ ಇದ್ದ ಡಿಸಿ ಎಫ್.ಆರ್. ಜಮಾದಾರ್ಗೆ ಸೂಚನೆ ನೀಡಿದರು.
ಸಿಎಂ ಬಳಿ ಹೋದ ನಿಯೋಗದಲ್ಲಿ ಗುಲ್ಬರ್ಗ ಜಿಪಂ ಮಾಜಿ ಅಧ್ಯಕ್ಷ ಯಲ್ಲಪ್ಪ ಕುರುಕುಂದಿ, ಜಿಪಂ ಸದಸ್ಯ ದೇವರಾಜ ನಾಯಕ, ಬಂಜಾರಾ ಸಮುದಾಯದ ತಾಲೂಕು ಅಧ್ಯಕ್ಷ ನಿಂಗಾನಾಯಕ ರಾಠೋಡ, ಶೇಖರನಾಯ್ಕ ಜೋಗುಂಡಬಾವಿ, ಗುಂಡು ನಾಯ್ಕ ಹಲವರು ಇದ್ದರು ಎಂದು ಮಾಜಿ ಸಚಿವರು ಹೇಳಿದ್ದಾರೆ.