ಶೋಷಣೆ ರಹಿತ ಸಮಾಜ ನಿರ್ಮಾಣ ಆಗಲಿ
ಕನ್ನಡಪ್ರಭ ವಾರ್ತೆ ಗುಲ್ಬರ್ಗ ನ.20
ಹಿಂದಿನ ಶತಮಾನಗಳಲ್ಲಿ ಕನಕದಾಸರು, ಬಸವಣ್ಣ, ವಾಲ್ಮೀಕಿ, ಬಾಬಾ ಸಾಹೇಬ ಅಂಬೇಡ್ಕರ್ ಹಾಗೂ ಗೌತಮ ಬುದ್ಧರು ಸಮಾಜದಲ್ಲಿರುವ ಮೇಲು ಕೀಳುಗಳನ್ನು ಹಾಗೂ ಶೋಷಣೆಯನ್ನು ಹೊಡೆದುಹಾಕಲು ಸಿದ್ಧಾಂತಗಳನ್ನು ರೂಪಿಸಿ ಸಾರಿ ಹೇಳಿದರು ಹಾಗೂ ತತ್ವಗಳನ್ನು ಬೋಧಿಸಿದರು. ಈ ಮಹಾಪುರುಷರ ತತ್ವಗಳನ್ನು ಪಾಲಿಸುವುದರ ಮೂಲಕ ಶೋಷಣೆ ರಹಿತ ಸಮಾಜ ನಿರ್ಮಾಣಕ್ಕೆ ಎಲ್ಲರೂ ಪಣತೊಡಬೇಕೆಂದು ಕೇಂದ್ರ ರೇಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಕರೆ ನೀಡಿದರು.
ಭಾವಚಿತ್ರಕ್ಕೆ ಪುಷ್ಪಾರ್ಪಣೆ: ನಗರದ ಎಸ್.ಎಂ. ಪಂಡಿತ್ ರಂಗಮಂದಿರದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಭಕ್ತ ಕನಕದಾಸ ಜಯಂತಿ ಉತ್ಸವ ಸಮಿತಿಯ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಭಕ್ತ ಕನಕದಾಸರ ಜಯಂತಿಯಲ್ಲಿ ಕನಕದಾಸರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿದರು.
ಕನಕಗುರು ಪೀಠದ ಸಿದ್ಧರಾಮಾನಂದಪುರಿ ಶ್ರೀ ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದರು. ಪೌರಾಡಳಿತ, ಸಾರ್ವಜನಿಕ ಉದ್ಯಮಗಳು, ಅಲ್ಪಸಂಖ್ಯಾತರ ಕಲ್ಯಾಣ ವಕ್ಫ್ ಮತ್ತು ಹಜ್ ಹಾಗೂ ಗುಲ್ಬರ್ಗ ಜಿಲ್ಲಾ ಉಸ್ತುವಾರಿ ಸಚಿವ ಖಮರುಲ್ ಇಸ್ಲಾಂ, ಗುಲ್ಬರ್ಗ ದಕ್ಷಿಣ ಕ್ಷೇತ್ರದ ಶಾಸಕ ದತ್ತಾತ್ರೆಯ ಪಾಟೀಲ, ಜಿಪಂ ಅಧ್ಯಕ್ಷ ರಮೇಶ ಶಂಕ್ರಪ್ಪ ಮರಗೋಳ, ಉಪಾಧ್ಯಕ್ಷೆ ಅನಿತಾ ಪವನಕುಮಾರ ಒಳಕೇರಿ, ವಿಧಾನ ಪರಿಷತ್ತಿನ ಸದಸ್ಯರಾದ ಅಲ್ಲಂಪ್ರಭು ಪಾಟೀಲ, ಅಮರನಾಥ ಪಾಟೀಲ, ಕರ್ನಾಟಕ ಪ್ರದೇಶ ಕುರುಬರ ಸಂಘದ ಜಿಲ್ಲಾಧ್ಯಕ್ಷ ದೇವೆಂದ್ರಪ್ಪ ಮರತೂರ, ಜಿಲ್ಲಾಧಿಕಾರಿ ಡಾ. ಎನ್.ವಿ. ಪ್ರಸಾದ, ಜಿಪಂ ಸಿಇಒ ಅಧಿಕಾರಿ ಟಿ.ಎಚ್.ಎಂ. ಕುಮಾರ, ಶ್ರೀಗುರು ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ. ಶಂಕರ ಎಂ. ಬಾಳಿ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
ಇದಕ್ಕೂ ಮುನ್ನ ನಗರೇಶ್ವರ ಶಾಲೆಯಿಂದ ಎಸ್.ಎಂ. ಪಂಡಿತ ರಂಗಮಂದಿರದವರೆಗೆ ಹಮ್ಮಿಕೊಂಡಿದ ಭಕ್ತ ಕನಕದಾಸರ ಮೆರವಣಿಗೆಯನ್ನು ಪೌರಾಡಳಿತ, ಸಾರ್ವಜನಿಕ ಉದ್ಯಮಗಳು, ಅಲ್ಪಸಂಖ್ಯಾತರ ಕಲ್ಯಾಣ ವಕ್ಫ್ ಮತ್ತು ಹಜ್ ಹಾಗೂ ಗುಲ್ಬರ್ಗ ಜಿಲ್ಲಾ ಉಸ್ತುವಾರಿ ಸಚಿವ ಖಮರುಲ್ ಇಸ್ಲಾಂ ಉದ್ಘಾಟಿಸಿದರು.