48 ಕೋಟಿ ಬಿಡುಗಡೆಗೆ ಸರ್ಕಾರ ಸಮ್ಮತಿ
ಕನ್ನಡಪ್ರಭ ವಾರ್ತೆ, ಚಿಂಚೋಳಿ, ನ.21
ಚಿಂಚೋಳಿ ತಾಲೂಕಿನ ಕೆಳದಂಡೆ ಮುಲ್ಲಾಮಾರಿ ಯೋಜನೆಯ ಮುಖ್ಯ ಕಾಲುವೆ ಆಧುನೀಕರಣಗೊಳಿಸಲು ರಾಜ್ಯ ಸರ್ಕಾರ ಪ್ರಸಕ್ತ ಸಾಲಿನಲ್ಲಿ 48 ಕೋಟಿ ಬಿಡುಗಡೆಗೊಳಿಸಲು ಒಪ್ಪಿಗೆ ಸೂಚಿಸಿದೆ ಎಂದು ಶಾಸಕ ಡಾ. ಉಮೇಶ ಜಾಧವ ತಿಳಿಸಿದ್ದಾರೆ.
ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲೂಕಿನ ರೈತರ ಜೀವನಾಡಿ ಆಗಿರುವ ಕೆಳದಂಡೆ ಮುಲ್ಲಾಮಾರಿ ಯೋಜನೆಯ 34ನೇ ವಿತರಣಾ ಕಾಲುವೆ ಗೇಟ್ ದುರಸ್ತಿ ಮತ್ತು 34 ಕಿ.ಮೀ. ದಿಂದ 39ನೇ ಕಿ. ಮೀ.ವರೆಗಿನ ಹೂಳು ತೆಗೆಯುವುದು ಕಾಮಗಾರಿ ಸೇರಿದಂತೆ ಒಟ್ಟು 1 ರಿಂದ 80 ಕಿ.ಮೀ. ಮುಖ್ಯಕಾಲುವೆ ಹಾಗೂ ಇ.ಆರ್.ಎಂ ಕಾಮಗಾರಿಗಾಗಿ ಒಟ್ಟು 48 ಕೋಟಿ ಅಂದಾಜು ಮೊತ್ತವನ್ನು ಸರ್ಕಾರ ಬಿಡುಗಡೆ ಮಾಡಲು ಒಪ್ಪಿಗೆ ಸೂಚಿಸಿದೆ. ಈ ಹಣವನ್ನು ಎಐಬಿಪಿ ವತಿಯಿಂದ ಭರಿಸಲಾಗುವುದು ಎಂದರು.
ಕೆಳದಂಡೆ ಮುಲ್ಲಾಮಾರಿ ಯೋಜನೆಯಲ್ಲಿ 1.7176 ಟಿಎಂಸಿ ನೀರು ಲಭ್ಯವಿದ್ದು, ಪ್ರಸಕ್ತ ಸಾಲಿನಲ್ಲಿ ಬಲದಂಡೆ ಮುಖ್ಯ ಕಾಲುವೆಯಿಂದ 4173 ಹೆಕ್ಟೇರ್ ಜಮೀನಿಗೆ ನೀರು ಹರಿದು ಬಿಡಲಾಗುವುದು ಎಂದು ಗುಲ್ಬರ್ಗ ನಗರದಲ್ಲಿ ನ.19ರಂದು ನಡೆದ ನೀರು ಸಲಹಾ ಸಮಿತಿ ಸಭೆಯಲ್ಲಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ ಎಂದರು.
ತಾಲೂಕಿನಲ್ಲಿ ಅಧಿಕ ಪ್ರಮಾಣದಲ್ಲಿ ಸಂಪನ್ಮೂಲ ಸಿಗುತ್ತಿದ್ದರು ಸಹ ಅವುಗಳ ಸದ್ಬಳಕೆಯಾಗುತ್ತಿಲ್ಲ. ತಾಲೂಕು ಸಮಾಜ ಕಲ್ಯಾಣ ಇಲಾಖೆ ವತಿಯಿಂದ ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಅಭಿವೃದ್ಧಿ ಯೋಜನೆಯಡಿ ಜನರಿಗೆ ಸೌಲಭ್ಯಗಳನ್ನು ನೀಡಲು ನಿರ್ಧರಿಸಲಾಗಿದೆ. ಇದರ ಬಗ್ಗೆ ರಾಜ್ಯ ಸಮಾಜ ಕಲ್ಯಾಣ ಆಯುಕ್ತರು ಸಹ ಸಮ್ಮತಿ ನೀಡಿದ್ದಾರೆ ಎಂದರು.
ರಾಜ್ಯದಲ್ಲಿನ ಯಾದಗಿರಿ ಜಿಲ್ಲೆಯ ಜನರು ಹಾಗೂ ತಾಲೂಕಿನ ಜನರು ಬೇರೆ ರಾಜ್ಯಗಳಿಗೆ ಉದ್ಯೋಗಕ್ಕಾಗಿ ವಲಸೆ ಹೋಗುತ್ತಿದ್ದಾರೆ. ಇದನ್ನು ತಪ್ಪಿಸಲು ಪ್ರತಿ ಗ್ರಾಮಗಳಲ್ಲಿ ಹೈನುಗಾರಿಕೆ ಪ್ರೋತ್ಸಾಹ ನೀಡಲು ಉದ್ದೇಶಿಸಲಾಗಿದೆ ಎಂದರು.