7.94 ಲಕ್ಷ ಮೌಲ್ಯದ ಸಿಮೆಂಟ್, ಲಾರಿ ಕಳವು
ಗುಲ್ಬರ್ಗ: ನಗರದ ಕೆಸರಟಗಿ ಉದ್ದಿಮೆ ವಸಾಹತು ಬಳಿಯ ಇಂಡಿಯನ್ ಆಯಿಲ್ ಕಾರ್ಪೋರೇಷನ್ ಸಮೀಪ 8 ಜನರಿದ್ದ ಗುಂಪೊಂದು ಸಿಮೆಂಟ್ ತುಂಬಿಕೊಂಡು ಹೊರಟಿದ್ದ ಲಾರಿಯನ್ನು ಅಡ್ಡಗಟ್ಟಿ ಚಾಲಕನನ್ನು ಥಳಿಸಿ, ಲಾರಿ- ಅದರಲ್ಲಿದ್ದ ಲಕ್ಷಾಂತರ ಮೌಲ್ಯದ ಸಿಮೆಂಟ್ ದರೋಡೆ ಮಾಡಿರುವ ಘಟನೆ 2 ದಿನ ತಡವಾಗಿ ಬೆಳಕಿಗೆ ಬಂದಿದೆ.
ನ.19ರ ಮಧ್ಯರಾತ್ರಿ ಗುಲ್ಬರ್ಗ ಹೊರವಲಯದ ಕೆಸರಟಗಿ ಬಳಿಯ ರಸ್ತೆಯಲ್ಲಿ ದುಷ್ಕರ್ಮಿಗಳು ಲಾರಿ ಅಡ್ಡಗಟ್ಟಿ ಆಳಂದ ತಾಲೂಕಿನ ಗಡಿ ಹಳ್ಳಿಯೊಂದರಲ್ಲಿ ಇಳಿಸಿ, ತಾವು ದೋಚಿದ್ದ ಲಾರಿ, ಸಿಮೆಂಟ್, ಹಣ, ಮೊಬೈಲ್ ಸಮೇತ ಪರಾರಿಯಾಗಿದ್ದಾರೆ. ದರೋಡೆ ವೇಳೆ ಚಾಲಕ ಹುಮ್ನಾಬಾದ್ ತಾಲೂಕು ಮುಸ್ತಾಪುರ ಗ್ರಾಮದ ಮಹೇಶ ತಂದೆ ಲಕ್ಷಣ ಅವರ ಬಾಯಿಗೆ ಬಟ್ಟೆ ತುರುಕಿ ಜೀಪಿನಲ್ಲಿ ಎತ್ತಿಹಾಕಿಕೊಂಡು ಹೋಗಿ ಆಳಂದ ತಾಲೂಕಿನ ಸಾವಳಿ(ಬಿ) ಗ್ರಾಮದ ಬಳಿ ಕೆಳಗಿಳಿಸಿ ತೆರಳಿದ್ದರು. ವಾಡಿಯ ಸಿಮೆಂಟ್ ಕಂಪನಿಯಿಂದ 17 ಟನ್ ಸಿಮೆಂಟ್ ತುಂಬಿಕೊಂಡು ಮಹೇಶ್ ಬೀದರ್ಗೆ ಹೊರಟಿದ್ದರು. ಈ ಘಟನೆ ಸಂಭವಿಸಿದೆ. ಇಂಡಿಯನ್ ಆಯಿಲ್ ಕಾರ್ಪೋರೇಷನ್ ಗೋದಾಮು ಬರುತ್ತಿದ್ದಂತೆಯೇ 8 ಜನರಿದ್ದ ತಂಡ ತಮ್ಮ ಬೋಲೇರೋ ವಾಹನವನ್ನು ಲಾರಿಗೆ ಅಡ್ಡ ನಿಲ್ಲಿಸಿ ದರೋಡೆ ನಡೆಸಿದ್ದಾರೆ. ಗುಲ್ಬರ್ಗ ವಿವಿ ಪೊಲೀಸರಿಗೆ ಮಹೇಶ್ ದೂರು ನೀಡಿದ್ದಾರೆ.
ಕ್ರಿಮಿನಾಶಕ ಸಿಂಪಡಣೆ: ವ್ಯಕ್ತಿ ಸಾವು
ಗುಲ್ಬರ್ಗ: ಕರಕಿ ಹುಲ್ಲಿಗೆ ಕ್ರಿಮಿನಾಶಕ ಸಿಂಪರಣೆ ಮಾಡುತ್ತಿದ್ದ ವೇಳೆ ಕ್ರಿಮಿನಾಶಕ ದೇಹದೊಳಗೆ ಪ್ರವೇಶಿಸಿ ತೀವ್ರ ಅಸ್ವಸ್ಥಗೊಂಡಿದ್ದ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.
ಆಳಂದ ತಾಲೂಕಿನ ಮಾದನಹಿಪ್ಪರಗಾ ಠಾಣೆ ವ್ಯಾಪ್ತಿಯ ಖೇಡ ಉಮ್ಮರ್ಗಾದ ಶಿವಲಿಂಗಪ್ಪ ಕುಂಬಾರ ಮೃತನು. ಕ್ರಿಮಿನಾಶಕ ತಗುಲಿ ತೀವ್ರ ಅಸ್ವಸ್ಥಗೊಂಡಿದ್ದ ಈತನನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಈ ಕುರಿತು ಮಾದನಹಿಪ್ಪರಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಕ್ಷಿಣೆ: ಪತಿ ವಿರುದ್ಧ ದೂರು
ಗುಲ್ಬರ್ಗ: ವರದಕ್ಷಿಣೆ ಕಿರುಕುಳ ನೀಡಿ ಜೀವ ಬೆದರಿಕೆ ಹಾಕಿದ ಪತಿಯ ವಿರುದ್ಧ ಪತ್ನಿಯೊಬ್ಬಳು ಚಿಂಚೋಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ. ಚಿಂಚೋಳಿ ತಾಲೂಕಿನ ಚಂದಾಪುರ ಗಣೇಶ ನಗರದ ಶ್ವೇತಾ ಪತಿ ಅನೀಲ್ ಪವಾರ ವಿರುದ್ಧ ದೂರು ಸಲ್ಲಿಸಿದ್ದಾಳೆ.
ಅಪಘಾತ: ಮಗ ಸಾವು
ಗುಲ್ಬರ್ಗ: ಆಳಂದ ತಾಲೂಕಿನ ಕಡಗಂಚಿ ಬಳಿ ಅಪಘಾತ ಸಂಭವಿಸಿ ವ್ಯಕ್ತಿಯೊಬ್ಬ ಮೃತಪಟ್ಟ ಘಟನೆ ನಡೆದಿದೆ. ಕಡಗಂಚಿ ಗ್ರಾಮದ ರಾಜಕುಮಾರ್ ತಂದೆ ಅಂಬಾರಾಯ ಮೃತನು. ಲಕ್ಷ್ಮೀಕಾಂತ ಮತ್ತು ರಾಜಕುಮಾರ್ ಇಬ್ಬರೂ ಬೈಕ್ ಮೇಲೆ ಹೋಗುತ್ತಿದ್ದಾಗ ಕಡಗಂಚಿ ಬಳಿ ಟಾಟಾ ಸಫಾರಿ ವಾಹನ ಡಿಕ್ಕಿ ಹೊಡೆದ ಪರಿಣಾಮ ರಾಜಕುಮಾರ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಲಕ್ಷ್ಮೀಕಾಂತ ಗಾಯಗೊಂಡಿದ್ದಾನೆ. ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಾವು ಕಚ್ಚಿ ಮಹಿಳೆ ಸಾವು
ಗುಲ್ಬರ್ಗ: ಕವಲಗಾ (ಬಿ) ಗ್ರಾಮದಲ್ಲಿ ಹಾವು ಕಚ್ಚಿ ಮಹಿಳೆ ಮೃತಪಟ್ಟ ಘಟನೆ ನಡೆದಿದೆ. ಅಕ್ಕ ನಾಗಮ್ಮ ಮೃತಳು. ಹೊಲದಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಹಾವು ಕಚ್ಚಿದ್ದು, ಆಕೆಯನ್ನು ಗುಲ್ಬರ್ಗದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾಳೆ. ಫರಹತಾಬಾದ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದುಧನಿ ಕ್ರಾಸ್ ಬಳಿ ಸಿಕ್ಕಿಬಿದ್ದ ಕುರಿಗಳ್ಳರು
ಅಫಜಲ್ಪುರ: ತಾಲೂಕಿನ ಮದರಾ (ಬಿ) ಗ್ರಾಮದ ತಾಂಡಾದಲ್ಲಿ ಸುಮಾರು ದಿನಗಳಿಂದ ಚರ್ಚೆಗೆ ಗ್ರಾಸವಾಗಿದ್ದ ಕುರಿಗಳ್ಳರು ಶನಿವಾರ ಪೊಲೀಸರ ಅತಿಥಿಯಾಗಿದ್ದು, ಗ್ರಾಮಸ್ಥರಲ್ಲಿ ಸಂತಸ ತಂದಿದೆ.
ರಾಜು ಚವ್ಹಾಣ ಮತ್ತು ಬಾಬು ರಾಠೋಡರನ್ನು ಬಂಧಿಸಲಾಗಿದೆ. ಗ್ರಾಮದ ಬಾಬು ಖೇರು ಚವ್ಹಾಣ ಎಂಬುವರು ಅತನೂರ ಸಂತೆಯಲ್ಲಿ ಖರೀದಿ ಮಾಡಿದ್ದರು. ನಂತರ ಒಂದುವರೆ ತಿಂಗಳ ಹಿಂದೆ ಮನೆಯಲ್ಲಿದ್ದ 7 ಕುರಿಗಳು ಕಳುವಾಗಿದ್ದವು. ಈ ಕುರಿತು ಅಫಜಲ್ಪುರ ಠಾಣೆಯಲ್ಲಿ ದೂರು ನೀಡಿದ್ದರು.
ಅಫಜಲ್ಪುರ ಸಿಪಿಐ ಪಿ.ವಿ. ಸಾಲಿಮಠ ಮಾರ್ಗದರ್ಶನದಲ್ಲಿ ಒಂದು ತಂಡ ರಚಿಸಿ ಆರೋಪಿಗಳಾದ ರಾಜು ಚವ್ಹಾಣ ಹಾಗೂ ಬಾಬು ರಾಠೋಡರನ್ನು ದುಧನಿ ಕ್ರಾಸ್ ಬಳಿ ಪಿಎಸ್ಐ ಎಸ್.ಎಸ್. ದೊಡ್ಮನಿ ಮತ್ತು ಸಿಬ್ಬಂದಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.