ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ನೂತನ ಯೋಜನೆ, ಆದೇಶ ಗಮನಕ್ಕೆ ತನ್ನಿ

Lingaraj Badiger
Updated On : 22 Nov 2013, 11:39 am

ಕನ್ನಡಪ್ರಭ ವಾರ್ತೆ, ಚಿಂಚೋಳಿ, ನ.21
ಸರ್ಕಾರದಿಂದ ಹೊಸದಾಗಿ ಮಂಜೂರಾದ ಕಾಮಗಾರಿ, ಆದೇಶ ಹಾಗೂ ಯೋಜನೆಗಳನ್ನು ಚುನಾಯಿತ ಜನಪ್ರತಿನಿಧಿಗಳ ಗಮನಕ್ಕೆ ತರಬೇಕೆಂದು ಶಾಸಕ ಡಾ. ಉಮೇಶ ಜಾಧವ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ತಾಪಂ ಸಭಾಂಗಣದಲ್ಲಿ ಗುರುವಾರ ಕೆಡಿಪಿ ಸಭೆಯಲ್ಲಿ ತಾಲೂಕಿನ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿ, ತಾಲೂಕಿಗೆ ಬಿಡುಗಡೆಯಾಗಿರುವ ಅನುದಾನದಲ್ಲಿ ತಾರತಮ್ಯ ಕಂಡು ಬಂದಲ್ಲಿ ಇಲ್ಲವೇ ಅನುದಾನದಲ್ಲಿ ಮಲತಾಯಿ ಧೋರಣೆಯಾಗಿದ್ದಲ್ಲಿ ಶಾಸಕರ ಗಮನಕ್ಕೆ ತರಬೇಕು. ಯಾವುದೇ ಇಲಾಖೆ ಸಿಬ್ಬಂದಿ ವರ್ಗಾವಣೆಗೊಂಡರೂ ಮಾಹಿತಿ ನೀಡಬೇಕೆಂದು ಸೂಚಿಸಿದರು.
ಬಸ್‌ಗಳ ಅವ್ಯವಸ್ಥೆ: ತಾಲೂಕಿನಲ್ಲಿ ಅನೇಕ ಬಸ್‌ಗಳು ಸೂಕ್ತ ಸಮಯಕ್ಕೆ ಚಲಿಸುತ್ತಿಲ್ಲ. ಅನೇಕ ಕಡೆ ಕೆಟ್ಟು ನಿಲ್ಲುತ್ತಿವೆ. ಇದರಿಂದ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತಿದೆ. ತಾಲೂಕಿನಲ್ಲಿ ರಸ್ತೆ, ನೀರು, ಬಸ್ಸುಗಳ ಅವ್ಯವಸ್ಥೆ ನಮಗೆ ತುಂಬಾ ತಲೆನೋವಾಗಿದೆ. ಇದರ ಬಗ್ಗೆ ಅಧಿಕಾರಿಗಳು ಗಮನಿಸಬೇಕೆಂದು ಸಭೆಯಲ್ಲಿ ತಿಳಿಸಿದರು.
ಜಿಪಂ ಎಇಇ ರೇವಣಸಿದ್ದಪ್ಪ ಹಾಗರಗಿ ಮಾತನಾಡಿ, ಸಮಾಜ ಕಲ್ಯಾಣ ಇಲಾಖೆಯಿಂದ ಸಿಮೆಂಟ್ ರಸ್ತೆ, ಚರಂಡಿ ಹಾಗೂ ಕುಡಿವ ನೀರು, ವಿದ್ಯುತ್ ದೀಪಗಳ ವ್ಯವಸ್ಥೆಗೆ 1.80 ಕೋಟಿ ಮಂಜೂರಿಯಾಗಿದೆ. ಕ್ರಿಯಾ ಯೋಜನೆ ಸಿದ್ಧಪಡಿಸಬೇಕಾಗಿದೆ. ಸುವರ್ಣ ಗ್ರಾಮೋದಯ ಯೋಜನೆ ಅಡಿಯಲ್ಲಿ ಅಂಗನವಾಡಿ ಕಟ್ಟಡ ಮತ್ತು ಸಮುದಾಯ ಭವನೆ ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದರು.
ವಿದ್ಯಾರ್ಥಿ ವೇತನ: ತಾಲೂಕು ಸಮಾಜ ಕಲ್ಯಾಣ ಅಧಿಕಾರಿ ವಿಜಯಕುಮಾರ್ ಸುಗಂಧಿ ಮಾತನಾಡಿ, ತಾಲೂಕಿನಲ್ಲಿ ಸರ್ಕಾರಿ ಪ್ರಾಥಮಿಕ, ಮಾಧ್ಯಮಿಕ, ಪ್ರೌಢಶಾಲೆಗಳು ಸೇರಿದಂತೆ 1-10ನೇ ತರಗತಿವರೆಗೆ ವಿದ್ಯಾಬ್ಯಾಸ ಮಾಡುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಗುತ್ತಿದ್ದು, ಒಟ್ಟು 17,107 ಪರಿಶಿಷ್ಟ ಜಾತಿ ಶಾಲಾ ವಿದ್ಯಾರ್ಥಿಗಳಲ್ಲಿ ಕೇವಲ 654 ವಿದ್ಯಾರ್ಥಿಗಳ ಅರ್ಜಿಗಳು ಬಂದಿವೆ ಎಂದರು.
ಕಳೆದ ಸಾಲಿನಲ್ಲಿ ತಾಲೂಕಿನಲ್ಲಿ 7,702 ವಿದ್ಯಾರ್ಥಿಗಳಿಗೆ ಶಿಷ್ಯವೇತನ ನೀಡಲಾಗಿತ್ತು ಎಂದಾಗ ಬಿಇಒ ಮಾತನಾಡಿ, ತಾಲೂಕಿನಲ್ಲಿ ಮುಖ್ಯಗುರುಗಳು ಇದರ ಬಗ್ಗೆ ಹೆಚ್ಚಿನ ನಿರ್ಲಕ್ಷ್ಯ ವಹಿಸುತ್ತಿರುವುದರಿಂದ ವಿಳಂಬವಾಗಿದೆ. ಚಿಂಚೋಳಿ ತಾಲೂಕು ಅತಿ ಹಿಂದುಳಿದ ಪ್ರದೇಶವಾಗಿದೆ. ಎಲ್ಲ ವರ್ಗದ ಮಕ್ಕಳಿಗೆ ಸರ್ಕಾರದ ವಿದ್ಯಾರ್ಥಿ ವೇತನ ಸಿಗಬೇಕು. ಇದರ ಬಗ್ಗೆ ಗಮನ ಹರಿಸಬೇಕೆಂದು ಸೂಚಿಸಿದರು.
ತಾಲೂಕಲ್ಲಿ 193 ಅಪೌಷ್ಟಿಕ ಮಕ್ಕಳು: ಸಿಡಿಪಿಒ ಭೀಮಶೇನ ಚವ್ಹಾಣ ಮಾತನಾಡಿ. ತಾಲೂಕಿನಲ್ಲಿ ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳ ಸಂಖ್ಯೆ 193 ಇವೆ. ಸರ್ಕಾರದಿಂದ ಬಾಲ ಸಂಜೀವಿನಿ ಯೋಜನೆ ಅಡಿಯಲ್ಲಿ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸೆ ನೀಡಲಾಗುತ್ತಿದೆ ಎಂದಾಗ ಇಲಾಖೆಯ ಪ್ರಗತಿಯ ಬಗ್ಗೆ ಶಾಸಕರು ಅಸಮಾಧಾನ ವ್ಯಕ್ತಪಡಿಸಿದರು.
ಚಂದ್ರಪಳ್ಳಿ ನೀರಾವರಿ ಯೋಜನೆ ವ್ಯಾಪ್ತಿಯ ಕೊಳ್ಳೂರು ಪಟಪಳ್ಳಿ, ಎಂಪಳ್ಳಿ ರಸ್ತೆಗೆ ನಬಾರ್ಡ್ ಯೋಜನೆ ಅಡಿಯಲ್ಲಿ 6.2 ಕಿಮೀ ರಸ್ತೆಗೆ 177 ಲಕ್ಷ ಮಂಜೂರಿಯಾಗಿದೆ. ರೈತರ ಬೆಳೆಗಳಿಗೆ ನೀರಿನ ಅವಶ್ಯಕತೆಯಿರುವುದರಿಂದ ಕಾಲುವೆಗೆ ನೀರು ಹರಿದು ಬಿಡಲಾಗಿದೆ ಎಂದು ಯೋಜನೆ ಸಕಾಅ ವಿಜಯಕುಮಾರ್ ಹೇಳಿದರು.
ವಲಯ ಅರಣ್ಯಾಧಿಕಾರಿ ಎಂ.ಎಲ್. ಭಾವಿಕಟ್ಟಿ, ಸಾಮಾಜಿಕ ಅರಣ್ಯಾಧಿಕಾರಿ ಶರಮಸ್ತ, ಸಾರಿಗೆ ವ್ಯವಸ್ಥಾಪಕ ಧೂಳಪ್ಪ, ಜಲ ನಿರ್ಮಲ, ತೋಟಗಾರಿಕೆ, ಆರೋಗ್ಯ, ಪಶುಸಂಗೋಪನಾ ಇಲಾಖೆ, ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ತಮ್ಮ ಇಲಾಖೆಗಳ ಪ್ರಗತಿಯನ್ನು ಸಭೆಯಲ್ಲಿ ವಿವರಿಸಿದರು.
ಶಾಸಕರ ಪ್ರಗತಿ ಪರಿಶೀಲನಾ ಸಭೆ ಶುಕ್ರವಾರವೂ ಮುಂದುವರಿಯಲಿದೆ ಎಂದು ತಾಪಂ ಅಧಿಕಾರಿ ಜಗದೇವ ಬೈಗೊಂಡ ಎಲ್ಲ ಅಧಿಕಾರಿಗಳಿಗೆ ಮಾಹಿತಿ ನೀಡಿದರು.
ತಾಪಂ ಅಧ್ಯಕ್ಷೆ ತಾರಾಮತಿ ಕುಂಬಾರ, ತಹಸೀಲ್ದಾರ್ ಮೋಹನ ಜೋಶಿ ಸಭೆಯಲ್ಲಿ ಭಾಗವಹಿಸಿದ್ದರು. ಲಕ್ಷ್ಮಣ ಚವ್ಹಾಣ ಸ್ವಾಗತಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement