ರಾಯರ ವೃಂದಾವನ ಪ್ರತಿಷ್ಠಾಪನೆ ಇಂದು
ಕನ್ನಡಪ್ರಭ ವಾರ್ತೆ, ಜೇವರ್ಗಿ, ನ.21
ನ.22ರ ಶುಕ್ರವಾರ ಪಟ್ಟಣದ ಬಸವೇಶ್ವರ ನಗರದಲ್ಲಿರುವ ರಾಘವೇಂದ್ರ ಸ್ವಾಮಿ ಮಠದಲ್ಲಿ ಮಂತ್ರಾಲಯದ ಉಭಯ ಶ್ರೀಗಳಿಂದ ರಾಯರ ವೃಂದಾವನ ಪ್ರತಿಷ್ಠಾಪನೆ ನಡೆಯುತ್ತಿದ್ದು, ಇದರ ಅಂಗವಾಗಿ ಕಳೆದ ಎರಡು ದಿನಗಳಿಂದ ಜೇವರ್ಗಿ ರಾಯರ ಮಠದಲ್ಲಿ ನಡೆಯುತ್ತಿರುವ ಧಾರ್ಮಿಕ ಕಾರ್ಯಕ್ರಮಗಳಿಗೆ ಭಕ್ತ ಸಾಗರ ಹರಿದು ಬರುತ್ತಿದೆ.
ಕಾರ್ಯಕ್ರಮಕ್ಕಾಗಿ ಟ್ರಸ್ಟ್ ಕಮಿಟಿ ಈಗಾಗಲೇ ಬೃಹತ್ ವೇದಿಕೆ ಸಿದ್ದಗೊಳಿಸಿದೆ. ಕಾರ್ಯಕ್ರಮದ ನಿಮಿತ್ತ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸ್ವಾಗತ ಕೋರುವ ಕಮಾನಗಳು, ಕೇಸರಿ ಧ್ವಜಗಳು ರಾರಾಜಿಸುತ್ತಿವೆ. ಎಲ್ಲೆಂದರಲ್ಲಿ ಭಕ್ತರು ಸ್ವಾಗತ ಕೋರುವ ಬ್ಯಾನರ್ ಹಾಕಿದ್ದಾರೆ.
ಭಕ್ತರಲ್ಲಿ ಭಾಸ: ವೃಂದಾವನ ಪ್ರತಿಷ್ಠಾಪನೆಯ ನಿಮಿತ್ತ ಮಠದಲ್ಲಿ ಹೋಮ ಹವನಗಳು ನಡೆಯುತ್ತಿವೆ. ವಿವಿಧೆಡೆಯಿಂದ ಬಂದ ಅರ್ಚಕ ವೃಂದದ ಪೂಜಾ ವೈಭವ ಮಂತ್ರಾಲಯವೇ ಜೇವರ್ಗಿ ಮಠದಲ್ಲಿ ಕಾಣುವಂತೆ ಭಕ್ತರಲ್ಲಿ ಭಾಸವಾಗುತ್ತಿದೆ.
ಕಳೆದ ಎರಡು ದಿನಗಳಿಂದ ಪೂಜಾ ಕೈಂಕರ್ಯ ನಡೆಯುತ್ತಿದ್ದು, ವಿವಿಧ ಸಂಗೀತ ಕಲಾವಿದರಿಂದ ಸಂಗೀತ ಸೇವೆ, ಮಹಿಳಾ ಮಂಡಳಿಯಿಂದ ಭಜನೆ ವೈಭವದಿಂದ ಜರುಗುತ್ತಿದೆ. ಬಂದ ಭಕ್ತಾಧಿಗಳಿಗೆ ಪ್ರಸಾದದ ವ್ಯವಸ್ಥೆ ಕಲ್ಪಿಸಲಾಗಿದೆ. ಸಭಾ ಮಂಟಪ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳಿಗೆ ಪ್ರತೇಕ ವೇದಿಕೆಗಳನ್ನು ಸ್ಥಾಪಿಸಲಾಗಿದೆ.
ಉಭಯ ಶ್ರೀಗಳು ಸಾನ್ನಿಧ್ಯ: ಶುಕ್ರವಾರ ಬೆಳಗ್ಗೆ 9ಕ್ಕೆ ಯತಿದ್ವಯರ ಸಾನ್ನಿಧ್ಯದಲ್ಲಿ ಪ್ರಾಣದೇವರ, ಮಂಚಾಲಮ್ಮನವರ ಹಾಗೂ ರಾಯರ ಮೃತ್ತಿಕಾ ವೃಂದಾವನ ಪ್ರತಿಷ್ಠಾಪನೆ ನಡೆಯಲಿದೆ. 10ಕ್ಕೆ ಶ್ರೀಮಠದ ಆವರಣದಲ್ಲಿ ಸಭಾ ಕಾರ್ಯಕ್ರಮ ನಡೆಯಲಿದ್ದು, ಉಭಯ ಶ್ರೀಗಳು ಸಾನ್ನಿಧ್ಯ ವಹಿಸಲಿದ್ದಾರೆ.
ಶ್ರೀಪಾದ ಪುತ್ರರಾದ ರಾಜಾ ಎಸ್ ಸುಜ್ಞಾನೇಂದ್ರಾಚಾರ್, ಶ್ರೀಗಳ ಆಪ್ತ ಕಾರ್ಯದರ್ಶಿ ರಾಜಾ ಎಸ್. ರಾಜಗೋಪಾಲಾಚಾರ್, ಎಸ್.ಎನ್. ಸುಯಮೀಂದ್ರಾಚಾರ್, ಮುಖ್ಯಅತಿಥಿಗಳಾಗಿ ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್, ಶಾಸಕರಾದ ಡಾ. ಅಜಯಸಿಂಗ್, ಅಲ್ಲಂಪ್ರಭು ಪಾಟೀಲ್, ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್, ಮಾಜಿ ಸಚಿವ ರೇವುನಾಯಕ ಬೆಳಮಗಿ, ಶಾಸಕರಾದ ದತ್ತಾತ್ರೇಯ ಪಾಟೀಲ್ ರೇವೂರ, ಅಮರನಾಥ ಪಾಟೀಲ್, ಮಲ್ಲಿನಾಥಗೌಡ ಯಲಗೋಡ, ಕೇದಾರಲಿಂಗಯ್ಯ ಹಿರೇಮಠ, ಅಪ್ಪಾಸಾಹೇಬಗೌಡ ಪಾಟೀಲ್ ರದ್ದೇವಾಡಗಿ ಸೇರಿದಂತೆ ಇತರ ಗಣ್ಯರು ಪಾಲ್ಗೊಳ್ಳಲಿದ್ದಾರೆ.
ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿರುವ ಭಕ್ತ ಸಮೂಹಕ್ಕೆ ಟ್ರಸ್ಟ್ ಕಮೀಟಿ ಪ್ರಸಾದದ ವ್ಯವಸ್ಥೆ ಕಲ್ಪಿಸಿದೆ.