ಕುಷ್ಠರೋಗ ಕಾಲೋನಿ ಮೂಲ ಸೌಕರ್ಯಕ್ಕೆ ಆಗ್ರಹಿಸಿ ರಸ್ತೆತಡೆ
ಗುಲ್ಬರ್ಗ: ನಗರದ ಕುಷ್ಠರೋಗ ಕಾಲೋನಿಗೆ ಅಗತ್ಯ ಮೂಲಭೂತ ಸೌಲಭ್ಯ ಕಲ್ಪಿಸುವಂತೆ ಒತ್ತಾಯಿಸಿ ಮಹಾತ್ಮ ಗಾಂಧಿ ಜಿಲ್ಲಾ ಕುಷ್ಠರೋಗಿಗಳ ಸಂಘವು ನಗರದ ಆಳಂದ ರಸ್ತೆಯಲ್ಲಿ ರಸ್ತೆತಡೆ ನಡೆಸಿತು.
ಬಡಾವಣೆಯಲ್ಲಿದ್ದ 48 ಮನೆಗಳಿಗೆ ಮಹಾನಗರ ಪಾಲಿಕೆಯ ಶೇ.22.75ರ ಅನುದಾನದಲ್ಲಿ ಉಚಿತವಾಗಿ ವಿದ್ಯುತ್ ಸೌಲಭ್ಯ ಒದಗಿಸಿ, ಪ್ರತಿಯೊಂದು ಮನೆಗೆ ಮೀಟರ್ ಅಳವಡಿಸಬೇಕು. ಬಡಾವಣೆಯ ಒಳಗಡೆ ಸಮರ್ಪಕ ಸಂಚಾರಕ್ಕಾಗಿ ಮಹಾನಗರ ಪಾಲಿಕೆಯ ಶೇ. 22.75 ಅನುದಾನ ಸಿಸಿ ರಸ್ತೆ ನಿರ್ಮಾಣ ಮಾಡಬೇಕು ಎಂದು ಸಂಘದ ಅಧ್ಯಕ್ಷ ಹಣಮಂತ ಎಚ್. ದೇವನೂರ ಒತ್ತಾಯಿಸಿದರು.
ಬಡಾವಣೆಗೆ ಹೋಗುವ ಮುಖ್ಯ ರಸ್ತೆಯನ್ನು ಡಾಂಬರಿಕರಣ ಮಾಡಬೇಕು. ಬಡಾವಣೆಗೆ ಹೋಗುವ ಮುಖ್ಯ ರಸ್ತೆಯಲ್ಲಿ ಹಾಗೂ ಬಡಾವಣೆಯ ಒಳಗಡೆ ವಿದ್ಯುತ್ ಕಂಬಗಳಿಗೆ ಸೋಡಿಯಂ ಲೈಟು ಅಳವಡಿಸಬೇಕು ಎಂದು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಬಡಾವಣೆಯ ನಾಗರಿಕರು ಭಾಗವಹಿಸಿದ್ದರು.