ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಚುರುಕಾಗದಿದ್ರೆ ಸಮಸ್ಯೆ ಎದುರಿಸಬೇಕಾದೀತು!

Lingaraj Badiger
Updated On : 23 Nov 2013, 11:12 am

ಕನ್ನಡಪ್ರಭ ವಾರ್ತೆ  ಆಳಂದ  ನ.22
ಸರ್ಕಾರಿ ಯೋಜನೆಗಳನ್ನು ಜನರಿಗೆ ತಲುಪಿಸುವಲ್ಲಿ ಕೃಷಿ, ತೋಟಗಾರಿಕೆ, ಭೂಸೇನಾ, ಜಿಪಂ ಸೇರಿ ಹಲವು ಪ್ರಮುಖ ಇಲಾಖೆಗಳ ಪ್ರಗತಿ ಕುಂಠಿತವಾಗಿದೆ. ಅಧಿಕಾರಿಗಳು ಇನ್ನಾದರೂ ಚುರುಕಿನಿಂದ ತಮ್ಮ ಆಡಳಿತವನ್ನು ಸುಧಾರಿಸಿಕೊಳ್ಳದಿದ್ದಲ್ಲಿ ಸಮಸ್ಯೆ ಎದುರಿಸಬೇಕಾಗುತ್ತದೆ ಎಂದು ಶಾಸಕ ಬಿ.ಆರ್. ಪಾಟೀಲ್ ಎಚ್ಚರಿಸಿದರು.
  ಪಟ್ಟಣದ ತಾಪಂ ಸಭಾಂಗಣದಲ್ಲಿ ಇತ್ತೀಚೆಗೆ ಕೆಡಿಪಿ ಸಭೆಯ ಅಧ್ಯಕ್ಷತೆ ಮಾತನಾಡಿದ ಅವರು, ಇಲಾಖೆವಾರು ಪ್ರಗತಿ ಪರಿಶೀಲನೆ ಕೈಗೊಳ್ಳುವ ಬದಲು ಅಧಿಕಾರಿಗಳ ಆಡಳಿತ ಕಾರ್ಯವೈಖರಿ ಸುಧಾರಣೆಗೆ ಒತ್ತು ನೀಡುವಂತೆ ತಾಕೀತು ನೀಡಿದರು.
ಜಿಲ್ಲಾ ಕೇಂದ್ರಗಳಲ್ಲಿ ಕುಳಿತರೆ ಆಗದು: ತಾಲೂಕು ಮಟ್ಟದ ಅಧಿಕಾರಿಗಳು ತಮ್ಮ ಕಚೇರಿಗೆ ಬರುವುದಿಲ್ಲ. ಇನ್ನೂ ಕೆಲವರು ಗ್ರಾಮೀಣ ಭಾಗಕ್ಕೆ ಹೋಗಿ ಜನರಿಗೆ ಯೋಜನೆ ತಿಳಿಪಡಿಸುವುದಾಗಲಿ ಅಥವಾ ಅನುಷ್ಠಾನಗೊಳಿಸಬೇಕಾಗಿರುವ ಯೋಜನೆಗಳ ಕುರಿತು ಪರಿಶೀಲನೆ ಮಾಡದೆ, ಕೇವಲ ಸರ್ಕಾರಿ ವೇತನ ಪಡೆದು ಜಿಲ್ಲಾ ಕೇಂದ್ರಗಳಲ್ಲಿ ಮನೆಮಾಡಿಕೊಂಡಿದ್ದಾರೆ ಎಂಬ ದೂರುಗಳಿವೆ. ಸಾರ್ವಜನಿಕ ಜೀವನದಲ್ಲಿರುವ ಅಧಿಕಾರಿಗಳು ಮತ್ತು ತಮ್ಮನ್ನು ಒಳಗೊಂಡ ಎಲ್ಲ ಜನಪ್ರತಿನಿಧಿಗಳು ಸರ್ಕಾರದ ಯೋಜನೆಗಳನ್ನು ಅನುಷ್ಠಾನಗೊಳಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದರೆ ಮಾತ್ರ ಜನರಿಗೆ ಅನುಕೂಲವಾಗುತ್ತದೆ ಎಂದರು.
  ಕರ್ತವ್ಯ ನಿರ್ವಹಿಸಿರುವ ಕುರಿತು ಅಧಿಕಾರಿಗಳು ತಮ್ಮ ದಿನಚರಿ ಬರೆದ ಡೈರಿಯನ್ನು ತೋರಿಸಬೇಕು ಎಂದಾಗ ಯಾರೂ ಡೈರಿ ನಿರ್ವಹಣೆ ಮಾಡದೆ ಇರುವುದು ಕಂಡು ಬಂದಿತು. ಜಿಪಂ ಎಇಇ ಅಬ್ದುಲ್ ಸಲಾಂ ಅವರಿಗೆ ಪಂಚಾಯತ್ ರಾಜ್ ಇಲಾಖೆಯ ಕೆರೆ ನಿರ್ಮಾಣ, ಆಟದ ಮೈದಾನ ಸೇರಿ ಸಪ್ತ ಕಾರ್ಯಕ್ರಮಗಳ ಜಾರಿಗಾಗಿ ಕ್ರಿಯಾಯೋಜನೆ ರೂಪಿಸಿಕೊಡುವಂತೆ ಸೂಚನೆ ನೀಡಿದರು.
ಶಿಕ್ಷಕರ ಕೊರತೆಗೆ ಅಧಿಕಾರಿಗಳೇ ಕಾರಣ: ಬಿಸಿಎಂ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ, ಜೆಸ್ಕಾಂ, ಅಕ್ಷರದಾಸೋಹ ಸಂಬಂಧಿತ ಸಮಸ್ಯೆ ನಿವಾರಣೆ ಶಾಸಕರು ತಾಕೀತು ಮಾಡಿದರು. ಖಜೂರಿಯಲ್ಲಿ ಶಿಕ್ಷಕರ ಕೊರತೆಗೆ ಅಧಿಕಾರಿಗಳೇ ಕಾರಣ ಎಂದು ಅಧ್ಯಕ್ಷೆ ಪ್ರಭಾವತಿ ಢಗೆ ಶಾಸಕರ ಗಮನಕ್ಕೆ ತಂದಾಗ, ಇಲಾಖೆ ದೊಡ್ಡ ತಪ್ಪಿನಿಂದಾಗಿ ಮಕ್ಕಳ ಶೈಕ್ಷಣಿಕ ವ್ಯವಸ್ಥೆ ಹಾಳಾಗಿದೆ ಎಂದು ಹಾಜರಿದ್ದ ಸಮನ್ವಯಾಧಿಕಾರಿ ಬಸವಂತರಾಯ ಜಿಡ್ಡಿ ವಿರುದ್ಧ ಕಿಡಿಕಾರಿದರು.
ಎಂಜಿನಿಯರ್ ಹೊರಕ್ಕೆ: ಭೂಸೇನಾ ಸಹಾಯಕ ನಿರ್ದೇಶಕ ಗೈರು ಹಾಜರಾಗಿದ್ದ ಹಿನ್ನೆಲೆಯಲ್ಲಿ ಪರವಾಗಿ ಆಗಮಿಸಿದ್ದ ಎಂಜಿನಿಯರ್ ಎಸ್.ಎಂ. ನಾಯಕ ಅವರನ್ನು ಮಾಹಿತಿ ಇಲ್ಲದಿದ್ದರೆ ಸಭೆಗೆ ಹಾಜರಾಗಕೂಡದು ಎಂದು ಹೊರಹಾಕಿದರು.
  ಅಬಕಾರಿ ಅಧಿಕಾರಿಗೆ ಸಾರಾಯಿ ತಡೆಗಟ್ಟುವಂತೆ ತಾಕೀತು ನೀಡಿ ಹಾಜರಿದ್ದ ಪಿಎಸ್‌ಐ ಮಹಾದೇವ ಪಂಚಮುಖಿ ಅವರಿಗೆ ಸಹಕರಿಸುವಂತೆ ಹೇಳಿದ ಶಾಸಕರು, ಉಪಸ್ಥಿತರಿದ್ದ ತಹಸೀಲ್ದಾರ್ ಪರಮೇಶ್ವರ ಕೆ. ಸ್ವಾಮಿ ಅವರಿಗೆ ಮತ್ತೊಮ್ಮೆ ತಮ್ಮ ಕಚೇರಿಯಲ್ಲಿ ಈ ಕುರಿತು ಅಬಕಾರಿ ಮತ್ತು ಪೊಲೀಸ್ ಅಧಿಕಾರಿಗಳ ಸಭೆ ಕರೆಯುವಂತೆ ಹೇಳಿದರು.
ಗೈರು- ಶಿಸ್ತುಕ್ರಮ: ಇಲಾಖೆಯ ಯೋಜನೆ ಅನುಷ್ಠಾನ ಕುರಿತು ಅಧಿಕಾರಿಗಳ ಮೇಲೆ ನಿಗಾ ವಹಿಸಬೇಕು ಮತ್ತು ಹಳ್ಳಿಗಳಲ್ಲಿ ಮಹಿಳಾ ಶೌಚಾಲಯ ಕಟ್ಟಲು ಕ್ರಮ ಕೈಗೊಳ್ಳಬೇಕು. ಸಭೆಗೆ ಗೈರಾಗಿರುವ ಅಧಿಕಾರಿಗಳ ಮೇಲೆ ಶಿಸ್ತಿನ ಕ್ರಮಕ್ಕೆ ನೋಟಿಸ್ ನೀಡುವಂತೆ ಇಒ ಲಕ್ಷ್ಮಣ ಶೃಂಗೇರಿ ಅವರಿಗೆ ಶಾಸಕರು ಹೇಳಿದರು.
  ಸಭೆಯಲ್ಲಿ ಉಪಾಧ್ಯಕ್ಷ ಲಕ್ಷ್ಮಣ ಬೀಳಗಿ, ಸದಸ್ಯ ಮಲ್ಲಣ್ಣ ನಾಗೂರೆ, ಶರಣಗೌಡ ಪಾಟೀಲ್, ಮಲ್ಲಿನಾಥ ಜಮಾದಾರ, ರಮೇಶ ಬಾಬು, ಯೋಜನಾಧಿಕಾರಿ ಗುರುನಾಥ ಗೌಡಪ್ಪನವರ್, ವ್ಯವಸ್ಥಾಪಕ ಬಸವರಾಜ ಪಾಟೀಲ್, ಎಇಇ ವಿಶ್ವನಾಥ ರೆಡ್ಡಿ, ಕೆಎಸ್ಸಾರ್ಟಿಸಿ ವ್ಯವಸ್ಥಾಪಕ ಗೋಪಾಲ್ ಮೇಕಾಲೆ, ಸಣ್ಣ ನೀರಾವರಿ ಎಂಜಿನಿಯರ್ ನಾರಾಯಣ ಭಗವತಿ, ಜಲಾನಯನ ವೀರೇಶ ಅನೇಕರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement