'ತಿಂಗಳೊಳಗೆ ದುಡ್ಡಿಡ್ರಿ, ಇಲ್ಲ ಜಮೀನು ಕೊಡ್ರಿ'
ಕನ್ನಡಪ್ರಭ ವಾರ್ತೆ, ಗುಲ್ಬರ್ಗ, ನ.22
ಸಿಮೆಂಟ್ ಉತ್ಪಾದನಾ ಘಟಕ ಸ್ಥಾಪನೆಗೆ ಬೇಕಾಗಿರುವ ಜಮೀನು ಖರೀದಿಗೆ ಎಕರೆಗೆ 8 ಲಕ್ಷ ನೀಡುವುದಾಗಿ ವಾಗ್ದಾನ ಮಾಡಿ ಕೇವಲ 3.5 ಲಕ್ಷ ನೀಡುವ ಮೂಲಕ ವಂಚನೆ ಮಾಡಿರುವ ಕ್ರಮವನ್ನು ಖಂಡಿಸಿ ರೈತರು ಇದೀಗ ಮರಳಿ ತಮ್ಮ ಜಮೀನು ಸ್ವಾಧೀನ ಮಾಡಿಕೊಳ್ಳಲು ಮುಂದಾಗಿದ್ದಾರೆ.
ವಾಗ್ದಾನದಂತೆ 30 ದಿನದೊಳಗಾಗಿ ಎಕರೆಗೆ 8 ಲಕ್ಷ ರೈತರಿಗೆ ಹಣ ಪಾವತಿ ಮಾಡದಿದ್ದರೆ ಮರಳಿ ಜಮೀನುಗಳು ಸ್ವಾಧೀನಪಡಿಸಿಕೊಂಡು ಮಾಜಿ ಸಚಿವ, ಹೋರಾಟಗಾರ ಎಸ್.ಕೆ.ಕಾಂತಾ ಅವರ ನೇತೃತ್ವದಲ್ಲಿ ಕಂಪನಿ ವಿರುದ್ಧ ಶಾಂತಿಯುತವಾಗಿ ಚಳವಳಿ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಕೂಡಲೇ ರಾಜ್ಯಪಾಲ, ಮುಖ್ಯಮಂತ್ರಿ, ಕಂದಾಯ ಸಚಿವ ಹಾಗೂ ಕೈಗಾರಿಕೆ ಸಚಿವರು ಮಧ್ಯಸ್ಥಿಕೆ ವಹಿಸಿ 30 ದಿನದೊಳಗೆ ರೈತರಿಗೆ ಪಾವತಿ ಮಾಡಬೇಕಾಗಿರುವ ಎಕರೆಗೆ 8 ಲಕ್ಷ ನೀಡಬೇಕು. ಇಲ್ಲದಿದ್ದರೆ ಉಗ್ರ ಹೋರಾಟಕ್ಕೆ ಇಳಿಯಬೇಕಾಗುತ್ತದೆ ಎಂದು ಮಾಜಿ ಸಚಿವ ಎಸ್.ಕೆ. ಕಾಂತಾ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಎಚ್ಚರಿಸಿದರು.
ಇದೇ 25ರಂದು ಬೆಳಗಾವಿಯಲ್ಲಿ ಸಚಿವ ಸಂಪುಟದ ಅಧಿವೇಶನ ನಡೆಯಲಿದೆ. ಈ ಅಧಿವೇಶದಲ್ಲಿ ಸರ್ಕಾರ ಈ ಭಾಗದ ರೈತರಿಗೆ ನ್ಯಾಯ ಒದಗಿಸಬೇಕು ಮತ್ತು ವಂಚನೆ ಮಾಡಿದ ಸಿಮೆಂಟ್ ಕಂಪನಿ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ಗುಲ್ಬರ್ಗ ಜಿಲ್ಲೆಯ ಸೇಡಂ ತಾಲೂಕಿನ ಅಲ್ಟ್ರಾಟೆಕ್ ಸಿಮೆಂಟ್ ಲಿಮಿಟೆಡ್ (ರಾಜಶ್ರೀ ಸಿಮೆಂಟ್ ವರ್ಕ್ಸ್) ಕಂಪನಿಯು 4ನೇ ಸಿಮೆಂಟ್ ಉತ್ಪಾದನಾ ಘಟಕ ಸ್ಥಾಪನೆಗೆ ರೈತರ ಜಮೀನು ಖರೀದಿಸಲು ನಿರ್ಧರಿಸಿ ಜಿಲ್ಲಾಧಿಕಾರಿ ಮೂಲಕ ಸೇಡಂ ತಾಲೂಕಿನ ಹಂಗನಳ್ಳಿ ಮತ್ತು ನೃಪತುಂಗ ನಗರ ಗ್ರಾಮಗಳ ರೈತರಿಂದ ಕೃಷಿ ಜಮೀನು ಖರೀದಿಸಲು ಪ್ರತಿ ಎಕರೆಗೆ 8 ಲಕ್ಷ ನೀಡುವುದಾಗಿ ಒಪ್ಪಂದ ಮಾಡಿಕೊಂಡು ರಾಜಕೀಯ ಪ್ರಭಾವ ಹೊಂದಿರುವ ರೈತರಿಗೆ 8 ಲಕ್ಷ ನೀಡಿ ಬಲಹೀನ ರೈತರಿಗೆ ಕೇವಲ 3.5 ಲಕ್ಷ ನೀಡುವ ಮೂಲಕ ವಂಚನೆ ಮಾಡಿದೆ ಎಂದು ಆರೋಪಿಸಿದರು.
957 ಎಕರೆ ಜಮೀನು ಖರೀದಿ: ಸೇಡಂ ತಾಲೂಕಿನ ಹಂಗನಹಳ್ಳಿ ಗ್ರಾಮದಲ್ಲಿ ಸುಮಾರು 572 ಎಕರೆ 24 ಗುಂಟೆ ಮತ್ತು ನೃಪತುಂಗ ನಗರ ಗ್ರಾಮಗಳಲ್ಲಿ 383 ಎಕರೆ 39 ಗುಂಟೆ ಒಟ್ಟು 957 ಎಕರೆ 23 ಗುಂಟೆ ಕೃಷಿ ಜಮೀನು ಖರೀದಿಸಲಾಗಿದೆ ಎಂದರು.
957 ಎಕರೆ ಜಮೀನಿನ ಪೈಕಿ ಸರ್ಕಾರಿ ಮತ್ತು ಇನಾಂ ಜಮೀನು ಸೇರಿ ಒಟ್ಟು 41 ಎಕರೆ 31 ಗುಂಟೆ ಜಮೀನು ಆಗಿದ್ದು, ಈ ಜಮೀನುಗಳಿಗೆ ಪ್ರತಿ ಎಕರೆಗೆ 8 ಲಕ್ಷ ನೀಡುವುದರಂತೆ ಕಂಪನಿ ಸರ್ಕಾರಕ್ಕೆ ನೀಡಿದೆ. ಆದರೆ, ರೈತರ ಫಲವತ್ತಾದ ಭೂಮಿ ಪಡೆದು ಕೇವಲ 3.5 ಲಕ್ಷ ನೀಡಿ ವಂಚಿಸಿದೆ ಎಂದು ಹೇಳಿದರು.
ಸುಮಾರು 71 ಜನ ರೈತರು ಕೇವಲ 3.5 ಲಕ್ಷ ಕಂಪನಿಯಿಂದ ಪಡೆದು ಆತಂಕಕ್ಕೆ ಒಳಗಾಗಿದ್ದಾರೆ. ಈ ಕಡೆ ಜೀವನಕ್ಕೆ ಆಧಾರವಾಗಿರುವ ಭೂಮಿಯೂ ಹೋಯ್ತು, ಹಣವೂ ಪೂರ್ತಿ ಪಾವತಿಯಾಗಿಲ್ಲ. ಕೂಲಿ ಮಾಡೋಣ ಎಂದರೆ ಯಾರೂ ಕೂಲಿ ಕೆಲಸಕ್ಕೆ ತೆಗೆದುಕೊಳ್ಳುತ್ತಿಲ್ಲ. ಹೀಗಾದರೆ, ಬದುಕುವುದಾದರೂ ಹೇಗೆ ಎಂದು ರೈತ ಮಹಿಳೆಯರು ಸುದ್ದಿಗೋಷ್ಠಿಯಲ್ಲಿ ತಮ್ಮ ಅಳಲು ತೋಡಿಕೊಂಡರು.
ವಂಚನೆಗೊಳಗಾದ ರೈತರಿಗೆ ಪ್ರತಿ ಎಕರೆಗೆ 8 ಲಕ್ಷ ನೀಡಬೇಕು. 3.5 ಲಕ್ಷ ರೈತರ ಜಮೀನು ಖರೀದಿ ಆಗಿದ್ದರಿಂದ ಇನ್ನುಳಿದ 4.5 ಲಕ್ಷ ಮತ್ತು ಅದಕ್ಕೆ ವಾರ್ಷಿಕ 15 ರಂತೆ ಬಡ್ಡಿ ಹಾಕಿ ನೀಡಬೇಕು. ಕಂಪನಿಯ ವಂಚನೆಗೆ ಸಹಕರಿಸಿದ ಹಿಂದಿನ ಜಿಲ್ಲಾಧಿಕಾರಿ ಅವರನ್ನು ಕೂಡಲೇ ಅಮಾನತುಗೊಳಿಸಬೇಕು. ಒಂದು ವೇಳೆ 30 ದಿನದೊಳಗಾಗಿ ರೈತ ಹಣ ಮತ್ತು ಬಡ್ಡಿ ನೀಡದಿದ್ದಲ್ಲಿ ಮತ್ತು ಹಿಂದಿನ ಜಿಲ್ಲಾಧಿಕಾರಿ ಅವರನ್ನು ಅಮಾನತುಗೊಳಿಸಿದ್ದರೆ ರೈತರು ಕಂಪನಿಗೆ ನೀಡಿದ ಜಮೀನುಗಳ ಮರುಸ್ವಾಧೀನ ಮಾಡಿಕೊಂಡು ಕಂಪನಿಯ ವಿರುದ್ಧ ಶಾಂತಿಯುತ ಚಳವಳಿ ನಡೆಸಲಿದ್ದಾರೆ ಎಂದು ಎಸ್. ಕಾಂತಾ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಕಂಪನಿಯಿಂದ ವಂಚನೆಗೊಳಗಾದ ರೈತರು, ರೈತ ಮಹಿಳೆಯರು ಉಪಸ್ಥಿತರಿದ್ದರು.