ಮಕ್ಕಳ ಮನ ಮುಟ್ಟಿದ ಶಿಕ್ಷಕರ ಸಾಹಿತ್ಯ
ಕನ್ನಡಪ್ರಭ ವಾರ್ತೆ ಕೆಂಭಾವಿ ನ.22
ಮಕ್ಕಳ ಮನಮುಟ್ಟುವಂತೆ ಶಿಕ್ಷಕರು ರಚಿಸುವ ಸಾಹಿತ್ಯ ಕೃತಿಗಳು ಉತ್ತಮವಾಗಿ ಹೊರಬರುತ್ತಿವೆ. ಇತ್ತೀಚಿನ ದಿನಗಳಲ್ಲಿ ಈ ಬಗ್ಗೆ ಮಕ್ಕಳಲ್ಲಿಯೂ ಕೂಡಾ ಸಾಹಿತ್ಯದ ಬಗ್ಗೆ ಅರಿವು ಮೂಡಿಸುವಲ್ಲಿ ಶಿಕ್ಷಕರು ಉತ್ತಮ ಸಾಧನೆಯನ್ನು ಮಾಡುತ್ತಿದ್ದಾರೆ ಎಂದು ಜಿಪಂ ಸದಸ್ಯ ಸಿದ್ಧನಗೌಡ ಪೊಲೀಸ ಪಾಟೀಲ ಹೇಳಿದರು.
ಪಟ್ಟಣದ ಸರ್ಕಾರಿ ಬಾಲಕಿಯರ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ, ಕನ್ನಡ ಸಾಹಿತ್ಯ ಪರಿಷತ್, ಕನ್ನಡ ಸಾಹಿತ್ಯ ಸಂಘ ಸುರಪುರ ಹಾಗೂ ಅಜೀಂ ಪ್ರೇಮ್ಜೀ ಫೌಂಡೇಷನ್ ಜಿಲ್ಲಾ ಸಂಸ್ಥೆ ಯಾದಗಿರಿ ಸಹಯೋಗದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಮಕ್ಕಳ ಸಾಹಿತಿ ಶಿಕ್ಷಕರ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.
ಅನುದಾನ: ಶಿಕ್ಷಕರು ರಚಿಸಿದ ಸಾಹಿತ್ಯ ಮಕ್ಕಳ ಕಲಿಕೆಗೆ ಉಪಯೋಗವಾಗುತ್ತವೆ ಎಂದು ಅಧಿಕಾರಿಗಳು ದೃಢಪಡಿಸಿ, ಇವುಗಳನ್ನು ಪುಸ್ತಕದ ರೂಪದಲ್ಲಿ ಹೊರ ತಂದರೆ ಮಕ್ಕಳಿಗೆ ಉಪಯೋಗವಾಗುತ್ತದೆ ಎಂದು ಪ್ರಸ್ತಾವನೆ ಬಂದಲ್ಲಿ ಜಿಪಂ ಅನುದಾನದಲ್ಲಿ ಪುಸ್ತಕಗಳನ್ನು ಹೊರತರಲು ಅನುದಾನ ನೀಡುವುದಾಗಿ ತಿಳಿಸಿದರು.
ಮಾಜಿ ಸಚಿವ ರಾಜಾ ಮದನಗೋಪಾಲ ನಾಯಕ್ ಮಾತನಾಡಿ, ಮಕ್ಕಳಿಗೆ ಸಾಹಿತ್ಯದ ಬಗ್ಗೆ ಅರಿವು ಮೂಡಿಸಿ ಮಕ್ಕಳನ್ನು ಸಾಹಿತಿಗಳನ್ನಾಗಿ ಮಾಡಿ, ಶಿಕ್ಷಕರಿಗೆ ಸವಲತ್ತುಗಳನ್ನು ಕೊಟ್ಟರೆ ತಮ್ಮ ಪೂರ್ಣ ಸಮಯವನ್ನು ಶಿಕ್ಷಕರು ಮಕ್ಕಳೊಂದಿಗೆ ಕಳೆಯಲು ಅನುಕೂಲವಾಗುತ್ತದೆ ಇದರಿಂದ ಮಕ್ಕಳ ಶಿಕ್ಷಣದ ಗುಣಮಟ್ಟ ಹೆಚ್ಚುತ್ತದೆ ಎಂದು ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಶಾಂತಗೌಡ ಪಾಟೀಲ ಮಾತನಾಡಿ, ಕಳೆದ ಹತ್ತು ವರ್ಷಗಳಿಂದ ಜಿಲ್ಲೆಯಲ್ಲಿ ಅಜೀಂ ಪ್ರೇಮ್ಜೀ ಫೌಂಡೇಷನ್ನವರು ನಡೆಸುತ್ತಿರುವ ಶಿಕ್ಷಣ ಅಭಿಯಾನದಿಂದ ಕೊನೆಯ ಸ್ಥಾನದಲ್ಲಿರುತ್ತಿದ್ದ ಯಾದಗಿರಿ ಜಿಲ್ಲೆ ಇಂದು ಒಂದು ಹಂತಕ್ಕೆ ಬಂದಿದೆ ಎಂದು ಕರ್ನಾಟಕ ಶಾಲಾ ಮೌಲ್ಯಮಾಪನ (ಕೆಎಸ್ಕ್ಯೂಯು) ನಡೆಸಿದ ಸಮೀಕ್ಷೆಯಿಂದ ತಿಳಿದು ಬಂದಿದೆ. ಸುರಪುರ ತಾಲೂಕಿನಲ್ಲಿ ಶಿಕ್ಷಕರಿಗೆ ವೃತ್ತಿ ತರಬೇತಿ ನೀಡುವ ಮೂಲಕ ಸಂಸ್ಥೆಯವರು ಮಾಡಿದ ಕಾರ್ಯಕ್ರಮಗಳಿಂದ ಮಕ್ಕಳ ಕಲಿಕೆಗೆ ಉಪಯೋಗವಾಗಿದೆ. ಇದರಿಂದ ಶಿಕ್ಷಕರು ಶಾಲೆಯಲ್ಲಿ ನಲಿ-ಕಲಿ, ಮಾಟ್ರಿಕ್ ಮೇಳ ಇನ್ನಿತರ ಹಲವಾರು ಕಾರ್ಯಕ್ರಮಗಳು ಸಹಕಾರಿಯಾಗಿದೆ. ಶಹಾಪುರ ಮತ್ತು ಯಾದಗಿರಿ ತಾಲೂಕುಗಳಿಗೂ ಕೂಡಾ ಸಂಸ್ಥೆಯ ಚಟುವಟಿಕೆ ವಿಸ್ತರಿಸಬೇಕು ಎಂದು ಹೇಳಿದರು.
ಸಾಹಿತ್ಯ ರುಚಿ: ಅಜೀಂ ಪ್ರೇಮ್ಜೀ ಫೌಂಡೇಷನ್ ಮುಖ್ಯಸ್ಥ ಉಮಾಶಂಕರ ಪೆರಿಯೋಡಿ ಪ್ರಾಸ್ತಾವಿಕ ಮಾತನಾಡಿ, ಸಾಹಿತ್ಯಪೂರ್ಣವಾದ ಈ ಕಾರ್ಯಕ್ರಮ ಮಕ್ಕಳಿಗೆ ಉಣಬಡಿಸುವುದು ಹಾಗೂ ಶಿಕ್ಷಕರು ಸಾಹಿತ್ಯದ ರುಚಿ ಬೆಳೆಸಿಕೊಂಡಾಗ ಮಾತ್ರ ಸಾಹಿತ್ಯ ರುಚಿಯಾಗುತ್ತದೆ. ಸಾಹಿತ್ಯ ರುಚಿಯಿಲ್ಲದಿದ್ದರೆ ಮಕ್ಕಳಿಗೆ ಪಾಠ ಹಿಡಿಸುವುದಿಲ್ಲ, ಮಕ್ಕಳಿಗೆ ಹಿಡಿಸುವಂತ ಸಾಹಿತ್ಯ ತೆಗೆದುಕೊಂಡು ಪಾಠ ಮಾಡಿದರೆ ಶಿಕ್ಷಣ ಉತ್ತಮವಾಗುತ್ತಿದೆ. ಹಲವೆಡೆ ಈ ಸಮಸ್ಯೆ ಇರುವುದರಿಂದ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಹೇಳಿದರು.
ತಾಲೂಕು ಕಸಾಪ ಅಧ್ಯಕ್ಷ ಶಾಂತಪ್ಪ ಬೂದಿಹಾಳ ಅಧ್ಯಕ್ಷತೆ ವಹಿಸಿದ್ದರು. ಬೆಂಗಳೂರಿನ ಅಜೀಂ ಪ್ರೇಮ್ಜೀ ವಿಶ್ವವಿದ್ಯಾಲಯ ಕುಲಪತಿ ಅನುರಾಗ ಬೇಹಾರ, ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದಿಲೀಪ್ ರಾಂಜೇಕರ್, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಸಂಜೀವರಾವ್ ಕುಲಕರ್ಣಿ, ಮುಖ್ಯಗುರು ಅಬ್ದುಲ್ ರಜಾಕ್ ನಾಲತ್ವಾಡ, ಮಹಿಪಾಲರಡ್ಡಿ ಡಿಗ್ಗಾವಿ, ರಾಮನಗೌಡ ಕರಡಕಲ್, ಎಪಿಎಮ್ಸಿ ಸದಸ್ಯ ರುದ್ರಗೌಡ ಪಾಟೀಲ, ಮಾರುತಿ ಹುಜರತಿ ಉಪಸ್ಥಿತರಿದ್ದರು. ಶಿವಶರಣಪ್ಪ ಶಿರೂರ ನಿರೂಪಿಸಿದರು. ಜಿಲ್ಲಾ ಮುಖ್ಯಸ್ಥ ರುದ್ರೇಶ ವಂದಿಸಿದರು. ಇದಕ್ಕೂ ಮುನ್ನ ಬಸವರಾಜ ಬಂಟನೂರ ಹಾಗೂ ಸಂಗಡಿಗರಿಂದ ಸಂಗೀತ ಕಾರ್ಯಕ್ರಮ ನಡೆಯಿತು.