ವೈಜ್ಞಾನಿಕ ಕೃಷಿಯಿಂದ ಅಧಿಕ ಇಳುವರಿ
ಕನ್ನಡಪ್ರಭ ವಾರ್ತೆ, ಗುಲ್ಬರ್ಗ, ನ.22
ದೇಶದ ಬೆನ್ನೆಲಬಾಗಿರುವ ರೈತರು ಕೃಷಿ ವಿಜ್ಞಾನಿಗಳೊಂದಿಗೆ ಸಮಾಲೋಚಿಸಿ ಕೃಷಿ ಪದ್ಧತಿಯಲ್ಲಿ ನವೀನತೆಯನ್ನು ತಂದು ಹೆಚ್ಚು ಇಳುವರಿ ಪಡೆಯುವಲ್ಲಿ ಪ್ರಯತ್ನಿಸಬೇಕೆಂದು ಪೌರಾಡಳಿತ ಮತ್ತು ಗುಲ್ಬರ್ಗ ಜಿಲ್ಲಾ ಉಸ್ತುವಾರಿ ಸಚಿವ ಖಮರುಲ್ ಇಸ್ಲಾಂ ಹೇಳಿದರು.
ಅವರು ಶುಕ್ರವಾರ ಕೃಷಿ ಇಲಾಖೆ ಹಾಗೂ ಕೃಷಿ ಸಂಬಂಧಿತ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ನಗರದ ಡಾ. ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಕೃಷಿ ಉತ್ಸವ ಉದ್ಘಾಟಿಸಿ ಮಾತನಾಡಿದರು.
ರೈತರಲ್ಲಿ ಕೃಷಿಯ ಬಗ್ಗೆ ಸ್ವಯಂ ವಿಶ್ವಾಸ ಮೂಡಬೇಕು. ಪಶುಸಂಗೋಪನೆ, ಅರಣ್ಯ, ಮೀನುಗಾರಿಕೆ, ರೇಷ್ಮೆ, ತೋಟಗಾರಿಕೆಗಳಂತಹ ಕೃಷಿ ಉಪಯೋಗಿ ಚಟುವಟಿಕೆಗಳನ್ನು ಕೈಗೊಂಡಲ್ಲಿ ಒಕ್ಕಲುತನ ಅಭಿವನೃದ್ಧಿಯಾಗುತ್ತದೆ. ಅಲ್ಲದೆ ಸುಧಾರಿತ ತಳಿಗಳ ಬೀಜಗಳಿಂದ ಇಳುವರಿ ಹೆಚ್ಚಿಗೆ ಪಡೆದು ರೈತರು ಆರ್ಥಿಕ ಸ್ವಾವಲಂಬಿಗಳಾಗಬೇಕೆಂದರು.
ಸೌಲಭ್ಯ: ಸರ್ಕಾರ ಕೃಷಿಗೆ ಹೆಚ್ಚು ಒತ್ತು ನೀಡುತ್ತಿದ್ದು, ರೈತರಿಗೆ ಅಗತ್ಯ ಮಾರುಕಟ್ಟೆ ವ್ಯವಸ್ಥೆಯನ್ನು ಕಲ್ಪಿಸುವಲ್ಲಿ ಬದ್ಧವಾಗಿದೆ. ಜಿಲ್ಲೆಯಲ್ಲಿ ಪ್ರಸ್ತುತ ವರ್ಷ ಚೆನ್ನಾಗಿ ಮಳೆಯಾಗಿದ್ದು, ರೈತರಿಗೆ ಸರ್ಕಾರದಿಂದ ದೊರಕುವ ಎಲ್ಲ ಸೌಲಭ್ಯಗಳನ್ನು ಸಂಬಂಧಪಟ್ಟ ಇಲಾಖೆಗಳು ತಲುಪಿಸಬೇಕು. ಈ ಕುರಿತು ಪ್ರತಿ ಮಾಹೆಯಲ್ಲಿ ಜರುಗುವ ಕೆಡಿಪಿ ಸಭೆಗಳಲ್ಲಿ ಪ್ರಗತಿ ಪರಿಶೀಲಿಸಲಾಗುವುದು ಎಂದರು.
ಚಿಂಚೋಳಿ ಶಾಸಕ ಡಾ. ಉಮೇಶ ಜಾಧವ ಮಾತನಾಡಿ, ಸರ್ಕಾರವು ರೈತರಿಗಾಗಿ ರೂಪಿಸಿರುವ ಕಾರ್ಯಕ್ರಮಗಳನ್ನು ಒಳ್ಳೆಯ ಉದ್ದೇಶದಿಂದ ರೂಪಿಸಲಾಗಿದೆ. ಗ್ರಾಮೀಣ ಮಟ್ಟದ ರೈತರಿಗೆ ತಲುಪಿಸುವುದು ಶಾಸಕರ ಮತ್ತು ಅಧಿಕಾರಿಗಳ ಕರ್ತವ್ಯವಾಗಿದೆ ಎಂದರು.
ಜಾಗೃತಿ: ಜಿಲ್ಲಾ ಮಟ್ಟದಲ್ಲಿ ಹಮ್ಮಿಕೊಳ್ಳುವಂತಹ ಕೃಷಿ ಉತ್ಸವಗಳನ್ನು ತಾಲೂಕು ಮತ್ತು ಗ್ರಾಪಂ ಮಟ್ಟದಲ್ಲಿ ಆಗಬೇಕು. ಸರ್ಕಾರವು ಕಾಲಕಾಲಕ್ಕೆ ಹೊರಡಿಸುವ ಆದೇಶ ಮತ್ತು ಸುತ್ತೋಲೆಗಳನ್ನು ಅಧಿಕಾರಿಗಳು ಜನಪ್ರತಿನಿಧಿಗಳ ಗಮನಕ್ಕೆ ತಂದು ಗ್ರಾಮೀಣ ಮಟ್ಟದಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಬೇಕು ಎಂದರು.
ರೈತರ ಉಪಯೋಗಕ್ಕಾಗಿ ಸರ್ಕಾರ ನೂತನ ಭೂಸ್ವಾಧೀನ ಕಾಯ್ದೆಯನ್ನು ಹಾಗೂ ಆಹಾರ ಭದ್ರತಾ ಯೋಜನೆಯನ್ನು ರೂಪಿಸಿದ್ದು ಇವುಗಳ ಪ್ರಯೋಜನ ಪಡೆಯಬೇಕು. ಮಾಹೆಗೊಂದು ಸಲ ಗ್ರಾಮ ಪಂಚಾಯತ್ ಮಟ್ಟದಲ್ಲಿ ಕಾರ್ಯಾಗಾರಮೊಂದನ್ನು ಏರ್ಪಡಿಸಿ ರೈತರಿಗೆ ಸಮರ್ಪಕ ಮಾಹಿತಿಯನ್ನು ಒದಗಿಸಬೇಕು ಹಾಗೂ ಪ್ರಗತಿಪರ ರೈತರ ಸಾಧನೆಗಳು ಎಲ್ಲ ರೈತರಿಗೆ ತಲುಪುವಂತೆ ನೋಡಿಕೊಳ್ಳಬೇಕೆಂದರು.
ಇದೇ ಸಂದರ್ಭದಲ್ಲಿ ಸಚಿವರು 2013-14ನೇ ಸಾಲಿನಲ್ಲಿ ಕೃಷಿ ಪ್ರಶಸ್ತಿ ವಿಜೇತರಾದ ಹಾಳಸುಲ್ತಾನಪುರ ಗ್ರಾಮದ ಶರಣಬಸಪ್ಪ ಪೀರಪ್ಪ ಪಾಟೀಲ್, ಹಾಗರಗಾ ಗ್ರಾಮದ ಸುಗಲಾಬಾಯಿ ರುದ್ರಮುನಿ ಮಠಪತಿ ಹಾಗೂ ಮೇಳಕುಂದಾ ಬಿ. ಗ್ರಾಮದ ಮಲ್ಲಿನಾಥ ಶರಣಪ್ಪ ಕೊಳ್ಳೂರರನ್ನು ಸನ್ಮಾನಿಸಿದರು.
ಕೃಷಿ ಇಲಾಖೆಯಿಂದ ರೂಪಿಸಲಾದ ಹಸ್ತಪ್ರತಿ, ಭಿತ್ತಿಪತ್ರಗಳನ್ನು ಬಿಡುಗಡೆ ಮಾಡಿದರು. ಇದಕ್ಕೂ ಮುನ್ನ ಸಚಿವರು ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ವಿವಿಧ ಇಲಾಖೆಗಳಿಂದ ರೂಪಿಸಲಾಗಿರುವ ಪ್ರದರ್ಶನ ಮಳಿಗೆಗಳನ್ನು ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಶಾಸಕರಾದ ಬಿ.ಆರ್. ಪಾಟೀಲ್, ದತ್ತಾತ್ರೇಯ ಪಾಟೀಲ್ ರೇವೂರ, ಅಮರನಾಥ ಪಾಟೀಲ್, ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಟಿ.ಎಚ್.ಎಂ. ಕುಮಾರ್, ಜಿಪಂ ಉಪಾಧ್ಯಕ್ಷೆ ಅನೀತಾ ಪವನಕುಮಾರ್ ವಳಕೇರಿ, ಜಿಪಂ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಬಸವರಾಜ ಪಾಟೀಲ್, ಸದಸ್ಯರಾದ ಶೋಭಾ ಬಾಣಿ, ಸೈಬಣ್ಣ ಅಡ್ಡೇಶಿ, ಸಂಜೀವ ಯಾಕಾಪುರ, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಸಿದ್ರಾಮಪ್ಪ ಪಾಟೀಲ್ ದಂಗಾಪುರ, ಕರ್ನಾಟಕ ಕೃಷಿ ಮಿಷನ್ ಸದಸ್ಯರಾದ ಬಸವರಾಜ ಇಂಗಿನ್, ಬಸವರಾಜ ಜೀವಣಗಿ, ಮುಖಂಡರಾದ ಮಲ್ಲಿಕಾರ್ಜುನ ಕುಸ್ತಿ, ನಿಂಗಣ್ಣ ಪೂಜಾರಿ, ಬಸವರಾಜ ಪಾಟೀಲ್ ಅಣಕಲ್, ಮಹಾನಗರ ಪಾಲಿಕೆಯ ಆಯುಕ್ತ ಶ್ರೀಕಾಂತ ಕಟ್ಟಿಮನಿ, ಜಂಟಿ ಕೃಷಿ ನಿರ್ದೇಶಕ ಡಾ.ಜೆ.ಎಚ್.ಮೋಕಾಶಿ, ಕೃಷಿ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
ಮೆರವಣಿಗೆ: ಇದಕ್ಕೂ ಮುನ್ನ ಗುಲ್ಬರ್ಗ ಜಿಲ್ಲಾಧಿಕಾರಿ ಕಚೇರಿಯಿಂದ ಎಸ್.ಎಂ. ಪಂಡಿತ ರಂಗಮಂದಿರದವರೆಗೆ ಹಮ್ಮಿಕೊಂಡಿದ್ದ ಸ್ತಬ್ಧಚಿತ್ರಗಳ ಮೆರವಣಿಗೆಯನ್ನು ವಿಧಾನ ಪರಿಷತ್ ಸದಸ್ಯ ಅಲ್ಲಂಪ್ರಭು ಪಾಟೀಲ್ ಜಿಲ್ಲಾಧಿಕಾರಿ ಕಚೇರಿಯಲ್ಲಿ ಚಾಲನೆ ನೀಡಿದರು.