ಸಾಧಕ ಶಿಕ್ಷಕರಿಗೆಪ್ರಶಸ್ತಿಯ ಅರ್ಜಿ
ಗುರುಮಠಕಲ್: ಇಲ್ಲಿಯ ಸಿರಿಗನ್ನಡ ಪ್ರತಿಷ್ಠಾನ ಕೇಂದ್ರ ಸಂಘ (ರಿ), ಗುರುಮಠಕಲ್, ಯಾದಗಿರಿ ವತಿಯಿಂದ 2013-14ನೇ ಸಾಲಿನ ಕಲ್ಯಾಣ ಕರ್ನಾಟಕ ಸಾಧಕ ಶಿಕ್ಷಕ ಪ್ರಸಸ್ತಿಗೆ ಅರ್ಜಿಗಳನ್ನು ಅಹ್ವಾನಿಸಲಾಗಿದೆ. ಈ ಪ್ರಶಸ್ತಿಯು ತಲಾ 5000 ನಗದು ಹಾಗೂ ಪ್ರಶಸ್ತಿ ಫಲಕ ಒಳಗೊಂಡಿದೆ. ಬೀದರ್, ಗುಲ್ಬರ್ಗ, ಯಾದಗಿರಿ, ರಾಯಚೂರು, ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಪ್ರಾಥಮಿಕ, ಪ್ರೌಢಶಾಲಾ ಮತ್ತು ಪದವಿ ಪೂರ್ವ ಕಾಲೇಜುಗಳಲ್ಲಿ ಬೋಧಿಸುತ್ತಿರುವ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಶಿಕ್ಷಕರು ಅಜರ್ಗಳನ್ನು ಸಲ್ಲಿಸಬಹುದು. ಕೊನೆಯ ದಿನಾಂಕ 31.11.2013, ಅಜರ್ಗಳನ್ನು ಕಳುಹಿಸುವ ವಿಳಾಸ ಕೆ. ಮೊಗುಲಪ್ಪ ಯಾನಗುಂದಿ ನಿರ್ದೇಶಕರು, ಸಿರಿಗನ್ನಡ ಪ್ರತಿಷ್ಠಾನ ಕೇಂದ್ರ ಸಂಘ (ರಿ), ಗುರುಮಠಕಲ್, ಯಾದಗಿರಿ, 585214 ದೂರವಾಣಿ 9902125253, ಸಂಪರ್ಕಿಸಲು ಶರಣಪ್ಪ ಚಿನ್ನಾಕರ್, ಕಾರ್ಯದರ್ಶಿಗಳು ಸಿರಿಗನ್ನಡ ಪ್ರತಿಷ್ಠಾನ ಕೇಂದ್ರ ಗುರುಮಠಕಲ್ ತಿಳಿಸಿದ್ದಾರೆ.
ಹಿಂದುಳಿದ ವರ್ಗದ ಗಣತೀಕರಣಕ್ಕೆ ಸ್ವಾಗತ
ಗುಲ್ಬರ್ಗ: ಹಿಂದುಳಿದ ವರ್ಗಗಳ ಆರ್ಥಿಕ, ಸಾಮಾಜಿಕ ಸ್ಥಿತಿಗತಿಗಳ ಸಮಗ್ರ ಗಣತೀಕರಣಕ್ಕೆ ರಾಜ್ಯ ಸರ್ಕಾರ ನಿರ್ಣಯ ಕೈಗೊಂಡಿರುವುದಕ್ಕೆ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಸದಸ್ಯ ತಿಪ್ಪಣಪ್ಪ ಕಮಕನೂರ ಸ್ವಾಗತಿಸಿದ್ದಾರೆ. ತಾವು ಹಿಂದೆ 2004- 05ರಲ್ಲಿ ರಾಜ್ಯ ಹಿಂದುಳಿದ ಆಯೋಗದಿಂದ ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರಿಂದ ರಾಜ್ಯ ಸರ್ಕಾರ ರು. 2 ಕೋಟಿ ಮತ್ತು ಕೇಂದ್ರ ಸರ್ಕಾರ ರು. 22. 50 ನೀಡಿತ್ತು. ಆಗಿನ ಮುಖ್ಯಮಂತ್ರಿ ಧರ್ಮಸಿಂಗ್ ಗಣತೀಕರಣಕ್ಕೆ ಮುತುವರ್ಜಿ ವಹಿಸಿದ್ದರು, ಆದರೆ, ರಾಜಕೀಯ ಬೆಳವಣಿಗೆ ಬದಲಾಗಿ, ಕುಮಾರಸ್ವಾಮಿ ಸಿಎಂ ಆಗಿದ್ದರು. ಹೀಗಾಗಿ ಈ ಮಹತ್ವದ ಗಣತೀಕರಣ ಇಂದಿನವರೆಗೂ ನೆನೆಗುದಿಗೆ ಬಿದ್ದಿತ್ತು ಎಂದು ಕಮಕನೂರ ತಿಳಿಸಿದ್ದಾರೆ.
ಇಂದು ಕ್ರೀಡಾಕೂಟ
ಗುಲ್ಬರ್ಗ: ಜಿಲ್ಲಾಡಳಿತ, ಜಿಪಂ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಜಿಲ್ಲಾ ಘಟಕ ಗುಲ್ಬರ್ಗ ಇವುಗಳ ಸಂಯುಕ್ತಾಶ್ರಯದಲ್ಲಿ ನ. 23ರಂದು ಬೆಳಗ್ಗೆ 9.30 ಗಂಟೆಗೆ ಗುಲ್ಬರ್ಗ ಜಿಲ್ಲಾ ಪೊಲೀಸ್ ಪರೇಡ್ ಮೈದಾನದಲ್ಲಿ 2012-13ನೇ ಸಾಲಿನ ಗುಲ್ಬರ್ಗ ಜಿಲ್ಲಾ ಮಟ್ಟದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟ ನಡೆಯಲಿದೆ. ಪೌರಾಡಳಿತ, ಜಿಲ್ಲಾ ಉಸ್ತುವಾರಿ ಸಚಿವ ಖಮರುಲ್ ಇಸ್ಲಾಂ ಕ್ರೀಡಾಕೂಟ ಉದ್ಘಾಟಿಸುವರು. ವೈದ್ಯಕೀಯ ಶಿಕ್ಷಣ ರಾಜ್ಯ ಸಚಿವ ಡಾ. ಶರಣಪ್ರಕಾಶ ಪಾಟೀಲ್ ಕ್ರೀಡಾ ಜ್ಯೋತಿ ಬೆಳಗಿಸುವರು. ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ ಅಧ್ಯಕ್ಷತೆ ವಹಿಸುವರು. ಹಲವರು ಭಾಗವಹಿಸುವರು.
ಪೋಷಕರಿಗೆ ಶಿಶು ಆರೋಗ್ಯ ಕುರಿತು ಅರಿವಿರಲಿ: ಬಿಇಒ ಸಿದ್ರಾಮ
ಕೆಂಭಾವಿ: ಪ್ರತಿ ಮಗು ಆರೋಗ್ಯವಾಗಿರಲು ಪೋಷಕರಿಗೆ ತಿಳುವಳಿಕೆ ಅತ್ಯಗತ್ಯ. ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಶಿಶುಗಳ ಸಂರಕ್ಷಣೆಗೆ ಹತ್ತು ಹಲವಾರು ಕಾರ್ಯಕ್ರಮಗಳನ್ನು ಹಾಕಿಕೊಂಡಿದ್ದು, ಅದರ ಸದುಪಯೋಗವನ್ನು ಗ್ರಾಮೀಣ ಭಾಗದ ಜನತೆ ಪಡೆದುಕೊಳ್ಳಬೇಕೆಂದು ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಸಿದ್ರಾಮ ಹೊನ್ಕಲ್ ಕರೆ ನೀಡಿದರು.
ಅವರು ಶುಕ್ರವಾರ ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನದಡಿಯಲ್ಲಿ ನಡೆದ ಶಿಶುಗಳ ಸಂರಕ್ಷಣೆಯ ತಿಳುವಳಿಕೆ ಕುರಿತು ಒಂದು ದಿನದ ಕಾರ್ಯಕ್ರಮ ಉದ್ಘಾಟಿಸಿ, ಮನುಷ್ಯನ ಹುಟ್ಟಿನಿಂದ ಸಾವಿನವರೆಗೆ ನಿರಂತರ ಸೇವೆ ಮಾಡುವುದೇ ಆರೋಗ್ಯ ಇಲಾಖೆ ಕರ್ತವ್ಯವಾಗಿದೆ. ಆದ್ದರಿಂದ ಇಲಾಖೆಯಲ್ಲಿ ದುಡಿಯುತ್ತಿರುವ ಪ್ರತಿಯೊಬ್ಬ ನೌಕರರೂ ನಿಷ್ಪಕ್ಷಪಾತವಾಗಿ ಸೇವೆ ಮಾಡಬೇಕು.
ಡಾ. ರಕ್ಷಿತಾ ನ್ಯಾಮಗೊಂಡ ಪ್ರಾಸ್ತಾವಿಕ ಮಾತನಾಡಿದರು. ಅಧ್ಯಕ್ಷತೆಯನ್ನು ಗ್ರಾಪಂ ಅಧ್ಯಕ್ಷೆ ಪದ್ಮಾವತಿ ದೇವರಮನಿ ವಹಿಸಿದ್ದರು. ಕಾರ್ಯಕ್ರಮದಲ್ಲಿ ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಮಲ್ಲಣ್ಣ, ಡಾ. ಮೀರಾ ಜೋಷಿ, ಗ್ರಾಪಂ ಉಪಾಧ್ಯಕ್ಷ ಮಹಿಪಾಲರೆಡ್ಡಿ ಡಿಗ್ಗಾವಿ, ಸದಸ್ಯ ರಂಗಪ್ಪ ವಡ್ಡರ್, ತಾಲೂಕು ಆರೋಗ್ಯ ಹಿರಿಯ ಸಹಾಯಕ ಶಶಿಧರ ಜೋಷಿ ಸೇರಿದಂತೆ ಸಿಬ್ಬಂದಿ, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆರು ಉಪಸ್ಥಿತರಿದ್ದರು. ಕಳೆದ ವಾರ ಪುರುಷರಿಗೆ ಸಂತಾನಹರಣ ಚಿಕಿತ್ಸೆ ಮಾಡಿದ ಆರೋಗ್ಯ ಕೇಂದ್ರದ ಸಿಬ್ಬಂದಿಯನ್ನು ಸನ್ಮಾನಿಸಲಾಯಿತು. ಶಾಂತಿಲಾಲ್ ನಿರೂಪಿಸಿ, ರೇವಣಸಿದ್ದಪ್ಪ ಸ್ವಾಗತಿಸಿದರು. ಗುಲಜಾನ್ ಬೇಗಂ ವಂದಿಸಿದರು. ಆರೋಗ್ಯವಂತ ಮಕ್ಕಳಿಗೆ ಇಲಾಖೆ ವತಿಯಿಂದ ಬಹುಮಾನ ವಿತರಿಸಲಾಯಯಿತು.